ಮೈಸೂರು: ‘ಮುಖ್ಯಮಂತ್ರಿಯ ಮನವಿ, ಜಿಲ್ಲಾಡಳಿತದ ಮೊರೆ... ಯಾವುದೂ ನಮ್ಮ ನೆರವಿಗೆ ಬರಲಿಲ್ಲ. ಎಷ್ಟೇ ಹೇಳಿದರೂ, ಕೇಳಿಕೊಂಡರೂ ಮನೆ ಮಾಲೀಕರು ನಮ್ಮ ಮಾತನ್ನೇ ಕಿವಿಗೆ ಹಾಕಿಕೊಳ್ಳಲಿಲ್ಲ...’
‘ಅನಿವಾರ್ಯವಾಗಿ ನಾವಿದ್ದ ರೂಂ ಖಾಲಿ ಮಾಡಲೇಬೇಕಾಯಿತು. ಗೆಳೆಯ ಆಸರೆಯಾಗದಿದ್ದರೆ ನಮ್ಮ ಪರಿಸ್ಥಿತಿ ಊಹಿಸಲು ಕಷ್ಟಸಾಧ್ಯ...’
ಖಾಸಗಿ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಲಾಕ್‌ಡೌನ್ ಘೋಷಣೆಯಾದ ಬಳಿಕ ಮೈಸೂರಿನಿಂದ ತಮ್ಮೂರುಗಳಿಗೆ ಹೋಗಿರುವ ಯುವಕರ ಗೋಳಿದು.
‘ನಿರ್ದಿಷ್ಟ ಸಂಬಳವಿಲ್ಲ. ಮಾಡಿದ ಕೆಲಸಕ್ಕೆ ‘ಗೌರವ ಸಂಭಾವನೆ’. ಇದ್ದಕ್ಕಿದ್ದಂತೆ ಲಾಕ್‌ಡೌನ್ ಘೋಷಣೆಯಾಯ್ತು. ಒಂದು ವಾರ ಮೈಸೂರಿನಲ್ಲೇ ಇದ್ದೇ. ದಿನದ ಊಟದ ವೆಚ್ಚಕ್ಕೆ ಸರಿಯಾಗದಷ್ಟು ವೇತನ ಸಿಗದಾಯ್ತು. ಅನಿವಾರ್ಯವಾಗಿ ಬೈಕ್‌ನಲ್ಲೇ ರಾತ್ರೋರಾತ್ರಿ ಊರಿಗೆ ಹೋದೆ...’ ಎಂದು ತಮ್ಮ ಸಂಕಷ್ಟದ ಕತೆ ಬಿಚ್ಚಿಟ್ಟರು ರವಿ.
‘ಊರಿಗೆ ಹೋದ ಸ್ವಲ್ಪ ದಿನ ಮಾಲೀಕ ಸುಮ್ಮನಿದ್ದರು. ಏಪ್ರಿಲ್ ಎರಡನೇ ವಾರ ಮುಗಿದೊಡನೆ ಬಾಡಿಗೆಗೆ ಪೀಡಿಸಲಾರಂಭಿಸಿದರು. ನಿತ್ಯವೂ ಫೋನ್ ಮಾಡಲು ಶುರು ಮಾಡಿದರು. ಬಾಡಿಗೆ ಕಟ್ಟಲು ಆಗಲ್ಲ ಎಂದರೂ ಕೇಳಲಿಲ್ಲ. ಬೇರೆ ದಾರಿಯಿಲ್ಲದೆ ಲಾಕ್‌ಡೌನ್‌ನಲ್ಲೇ ಮೈಸೂರಿಗೆ ಬಂದು ರೂಂ ಖಾಲಿ ಮಾಡಬೇಕಾಯ್ತು...’
‘ಗೆಳೆಯ ಕೊಟ್ಟಿದ್ದ ಅಡ್ವಾನ್ಸ್ ಅನ್ನು ಮಾಲೀಕರು ವಾಪಸ್ ಕೊಡಲಿಲ್ಲ. ಗೋಗರೆದರೂ ಪ್ರಯೋಜನವಾಗಲಿಲ್ಲ. ಮಾರ್ಚ್ ತಿಂಗಳ ಜತೆಗೆ ಏಪ್ರಿಲ್ ಬಾಡಿಗೆಯನ್ನು ಮುರಿದುಕೊಳ್ಳುವುದಾಗಿ ಹೇಳಿದರು. ಮತ್ತೊಬ್ಬರು ಈ ರೂಮಿಗೆ ಬಂದು ಮುಂಗಡ ಕೊಟ್ಟ ಬಳಿಕ, ನಿಮ್ಮ ಬಾಕಿ ಕೊಡುವುದಾಗಿ ತಿಳಿಸಿದರು. ಏನೊಂದು ಮಾತನಾಡದೆ ಜಾಗ ಖಾಲಿ ಮಾಡಬೇಕಾಯ್ತು’ ಎಂದು ಅವರು ಹೇಳಿದರು.
‘ಸಂಕಷ್ಟದ ಹೊತ್ತಲ್ಲಿ ಗೆಳೆಯ ನೆರವಿಗೆ ಬಂದ. ನನ್ನ ಬೈಕ್‌ನಲ್ಲೇ ಇಬ್ಬರು ಸಾಮಾನುಗಳನ್ನು ಕಟ್ಟಿಕೊಂಡು ಮೂರ್ನಾಲ್ಕು ಬಾರಿ ಆತನ ರೂಮಿಗೆ ಸಾಗಿಸಿಟ್ಟೆವು. ಆತ ಮಾಡಿಕೊಟ್ಟ ಚಿತ್ರಾನ್ನ ತಿಂದು, ಲಾಕ್‌ಡೌನ್ ಮುಗಿದ ಬಳಿಕ ಬರುವೆ. ಆಗಲೂ ನಿನ್ನ ಜತೆಯಲ್ಲೇ ಉಳಿಯುವೆ ಎಂದೆ. ಅದಕ್ಕೆ ಸಮ್ಮತಿಸಿದ. ಇಲ್ಲದಿದ್ದರೆ ನನ್ನ ಕತೆ ಊಹಿಸಲು ಆಗುತ್ತಿರಲಿಲ್ಲ’ ಎಂದು ರವಿ ‘ಪ್ರಜಾವಾಣಿ’ ಬಳಿ ಗದ್ಗದಿತರಾದರು.
ನಿತ್ಯವೂ ಬಾಡಿಗೆಯಿಲ್ಲಿ..!
‘ಶತಮಾನದ ಐತಿಹ್ಯ ಹೊಂದಿರುವ ಮೈಸೂರಿನ ದೇವರಾಜ ಮಾರುಕಟ್ಟೆಯ ತರಕಾರಿ, ಹೂವು, ತುಳಸಿ ಬ್ಲಾಕ್‌ನಲ್ಲಿ ಅಂದಾಜು 250 ವ್ಯಾಪಾರಿಗಳಿದ್ದಾರೆ. ಇವರಿಂದ ನಿತ್ಯವೂ ಕನಿಷ್ಠ ₹ 20ರಿಂದ ₹ 50 ಬಾಡಿಗೆ ವಸೂಲಿ ಮಾಡಲಾಗುತ್ತಿದೆ. ವ್ಯಾಪಾರವೇ ನಡೆಯದ ಈ ದಿನಗಳಲ್ಲಿ ಬಾಡಿಗೆ ಕೊಡುವುದು ವ್ಯಾಪಾರಸ್ಥರಿಗೆ ತ್ರಾಸಾಗಿದೆ. ಈಗಲಾದರೂ ಪಾಲಿಕೆ ಆಡಳಿತ ಬಾಡಿಗೆ ವಸೂಲಿ ನಿಲ್ಲಿಸಲಿ’ ಎನ್ನುತ್ತಾರೆ ದೇವರಾಜ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಹದೇವ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.