ADVERTISEMENT

ಮೈಸೂರು: ರಿಂಗ್ ರಸ್ತೆ ಕಟ್ಟಡ ತ್ಯಾಜ್ಯ ನಾಲೆಗೆ!

ಕಾಣೆಯಾಗುತ್ತಿರುವ ಪೂರ್ಣಯ್ಯ ನಾಲೆ: ಕ್ರಮ ವಹಿಸದ ಜಿಲ್ಲಾಡಳಿತ

ಮೋಹನ್‌ ಕುಮಾರ್‌ ಸಿ.
Published 29 ನವೆಂಬರ್ 2023, 5:20 IST
Last Updated 29 ನವೆಂಬರ್ 2023, 5:20 IST
ಬೋಗಾದಿಯ ಎಸ್‌ಬಿಎಂ ಬಡಾವಣೆಯಲ್ಲಿ ಪೂರ್ಣಯ್ಯ ನಾಲೆಗೆ ಸುರಿಯಲಾದ ಕಟ್ಟಡ ತ್ಯಾಜ್ಯ
ಬೋಗಾದಿಯ ಎಸ್‌ಬಿಎಂ ಬಡಾವಣೆಯಲ್ಲಿ ಪೂರ್ಣಯ್ಯ ನಾಲೆಗೆ ಸುರಿಯಲಾದ ಕಟ್ಟಡ ತ್ಯಾಜ್ಯ   

ಮೈಸೂರು: ನಗರದ ರಿಂಗ್‌ ರಸ್ತೆಯ ಇಕ್ಕೆಲಗಳಲ್ಲಿ ಕಟ್ಟಡ ತ್ಯಾಜ್ಯ ತೆರವಿಗೆ ಪಾಲಿಕೆಯು ವರ್ಷಾರಂಭದಲ್ಲಿ ತ್ಯಾಜ್ಯ ತೆರವು ಅಭಿಯಾನ ನಡೆಸಿತ್ತು. ಆದರೆ, ತ್ಯಾಜ್ಯದ ಬಹುಪಾಲು ಸೇರಿದ್ದು ‍ಪೂರ್ಣಯ್ಯ ನಾಲೆ ಸೇರಿದಂತೆ ಹಳ್ಳಗಳು, ರಾಜಕಾಲುವೆಗಳಿಗೆ!

ಕಂಟೈನರ್‌ಗಳು, ಜೆಸಿಬಿಗಳು, ಹಿಟಾಚಿಗಳ ಮೂಲಕ ಫೆ.27ರಿಂದ ಮೂರು ದಿನ ವಿಲೇವಾರಿ ನಡೆಯಿತು. ಸೂಯೆಜ್ ಫಾರಂನಲ್ಲಿ ಈಗಾಗಲೇ ಒತ್ತಡವಿದ್ದರಿಂದ ಕಟ್ಟಡ ತ್ಯಾಜ್ಯವನ್ನು ರಿಂಗ್‌ ರಸ್ತೆಯ ಸಮೀಪದಲ್ಲಿಯೇ ಇರುವ ಹಳ್ಳ–ಕೊಳ್ಳಗಳಿಗೆ ತುಂಬಿಸಿದರು. ಅದರಲ್ಲಿ ಪೂರ್ಣಯ್ಯ ನಾಲೆಯೂ ಒಂದು ಎನ್ನುತ್ತಾರೆ ಪರಿಸರವಾದಿಗಳು.

‘ಕಳೆದೆರಡು ವರ್ಷಗಳಿಂದ ಕಟ್ಟಡ ತ್ಯಾಜ್ಯ ಎಗ್ಗಿಲ್ಲದೆ ನಾಲೆಗೆ ತುಂಬಿಸಲಾಗಿದೆ. ಕೋವಿಡ್‌ಗೂ ಮೊದಲು ಐದು ವರ್ಷದ ಹಿಂದೆ ಕಾಣುತ್ತಿದ್ದ ನಾಲೆ ಈಗ ಗುರುತು ಹಿಡಿಯದಂತಾಗಿದೆ. ಒತ್ತುವರಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಶೀಘ್ರ ಕ್ರಮ ವಹಿಸುತಿಲ್ಲ’ ಎನ್ನುತ್ತಾರೆ ಬೋಗಾದಿ ರೈಲ್ವೆ ಬಡಾವಣೆ ನಿವಾಸಿ ಹರೀಶ್‌.

ADVERTISEMENT

ತ್ಯಾಜ್ಯ ಸಂಸ್ಕರಣ ಘಟಕವಿಲ್ಲ: ‘ಬೆಂಗಳೂರಿನ ನಂತರ ವೇಗವಾಗಿ ಬೆಳೆಯುತ್ತಿರುವ ಮೈಸೂರಿನಲ್ಲಿ ಕಟ್ಟಡ ತ್ಯಾಜ್ಯ ಸಂಸ್ಕರಣ, ವಿಲೇವಾರಿ ಘಟಕವಿಲ್ಲ. ಈ ಬಗ್ಗೆ ಹಲವು ಬಾರಿ ಪಾಲಿಕೆಯಲ್ಲಿ ಸಭೆ ಕರೆಯಲಾಗಿದೆ. ಘಟಕ ತೆರೆಯಲು ಖಾಸಗಿಯವರು ಮುಂದೆ ಬಂದರೂ ಯಾವುದೇ ಅವಕಾಶ ಸಿಕ್ಕಿಲ್ಲ. ಸಭೆಗಳಿಗೆ ಹೋಗುವುದೇ ವ್ಯರ್ಥವೆನಿಸುತ್ತದೆ’ ಎಂದು ಪರಿಸರವಾದಿ ಭಾಮಿ ವಿ.ಶೆಣೈ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಕುಕ್ಕರಹಳ್ಳಿ ಕೆರೆ ಸಂರಕ್ಷಣೆಗೆ 3 ದಶಕದಿಂದ ಹೋರಾಟ ನಡೆಸಿದ್ದೇವೆ. ಪೂರ್ಣಯ್ಯ ನಾಲೆ ಉಳಿವು ಕುಕ್ಕರಹಳ್ಳಿ ಕೆರೆ ಉಳಿವೂ ಆಗಿದೆ. ಜಿಲ್ಲಾಡಳಿತ ಇದುವರೆಗೂ ಯಾವುದೇ ಕಠಿಣ ನಿರ್ಧಾರ ಕೈಗೊಳ್ಳುತ್ತಿಲ್ಲ. ಒತ್ತುವರಿ ಮುಂದುವರಿದಿದೆ. ನೋಡುನೋಡುತ್ತಿದಂತೆಯೇ ನಾಲೆಯು ಇನ್ನಿಲ್ಲವಾಗುತ್ತಿದೆ. ಸಾಂಸ್ಕೃತಿಕ ನಗರಿಯ ಪರಂಪರೆ ರಕ್ಷಿಸುವವರು ಯಾರು? ಮಹಾರಾಜ ಕಾಲುವೆ ಉಳಿಸುವವರು ಯಾರು’ ಎಂದು ಪ್ರಶ್ನಿಸಿದರು.

‘ಸಂಸದ ಪ್ರತಾಪಸಿಂಹ ವರ್ಷಾರಂಭದಲ್ಲಿ ರಿಂಗ್‌ರಸ್ತೆಯ ಬದಿ ಸುರಿಯಲಾಗಿದ್ದ ಕಟ್ಟಡ ತ್ಯಾಜ್ಯ ತೆರವುಗೊಳಿಸಲು ಅಭಿಯಾನ ನಡೆಸಲು ಸೂಚಿಸಿದರು. ಪಾಲಿಕೆ ಅಭಿಯಾನ ಕೈಗೊಂಡಿತು. ಪಶ್ಚಿಮ ಭಾಗದ ರಿಂಗ್‌ ರಸ್ತೆಯ ತ್ಯಾಜ್ಯವು ಪೂರ್ಣಯ್ಯ ನಾಲೆಗೆ ಸೇರಿತು’ ಎಂದು ‍ಪರಿಸರ ತಜ್ಞ ಯು.ಎನ್‌.ರವಿಕುಮಾರ್ ಹೇಳಿದರು.

‘ಕುಕ್ಕರಹಳ್ಳಿಗೆ ಮಳೆ ನೀರು ತರುವ ನಾಲೆಯ ಕೊನೆಯ 2.5 ಕಿ.ಮೀ ಸಂರಕ್ಷಿಸಿಕೊಡಿ ಎಂದು ಕೇಳುತ್ತಿದ್ದೇವೆ. ಮುಡಾದವರು ನಾಲೆ ಅಕ್ಕಪಕ್ಕ ಕಂದಾಯ ಭೂಮಿ ಇದೆ. ನಮಗೆ ಸೇರಿದ್ದಲ್ಲ ಎನ್ನುತ್ತಾರೆ. ನಗರ ಯೋಜನೆ ಅಧಿಕಾರ ಮುಡಾಕ್ಕೆ ಇದೆಯಲ್ಲವೇ. ಕಂದಾಯ ಇಲಾಖೆಯವರು ನಾಲೆ ಸರ್ವೇಕ್ಷಣೆ ನಡೆಸಿ, ಆಸ್ತಿ ವಾಪಸ್‌ ಪಡೆಯುವುದರಲ್ಲಿ ಬಹಳ ಹಿಂದಿದ್ದಾರೆ. ಅದು ಆಡಳಿತ ನಡೆಸುವವರ ಜಾಣ ಕಿವುಡುತನ’ ಎಂದು ಬೇಸರ ವ್ಯಕ್ತಪಡಿಸಿದರು. 

ಭಾಮಿ ವಿ. ಶೆಣೈ
ಬೋಗಾದಿಯ ಎಸ್‌ಬಿಎಂ ಬಡಾವಣೆಯಲ್ಲಿ ಪೂರ್ಣಯ್ಯ ನಾಲೆಗೆ ಸುರಿಯಲಾದ ಕಟ್ಟಡ ತ್ಯಾಜ್ಯ

3 ಬಾರಿ ಸಭೆ ನಡೆಸಿದ್ಧಾರೆ. ಕಟ್ಟಡ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಯನ್ನು ಪಾಲಿಕೆ ಗಂಭೀರವಾಗಿ ‍ಪರಿಗಣಿಸಿಲ್ಲ. ತ್ಯಾಜ್ಯ ಸುರಿಯುವವರಿಗೆ ದಂಡ ವಿಧಿಸುತ್ತಿಲ್ಲ

–ಭಾಮಿ ವಿ. ಶೆಣೈ, ಪರಿಸರವಾದಿ

‘ಸಮಯ ನೀಡದ ಜಿಲ್ಲಾಧಿಕಾರಿ’

‘‍ಮೂರು ದಶಕದಿಂದ ನಗರದ ಪರಿಸರ ಸಂರಕ್ಷಣೆಗೆ ಹೋರಾಟ ನಡೆಸಿದ್ದೇವೆ. ಈಗ ಯಾರೂ ಸ್ಪಂದಿಸುತ್ತಿಲ್ಲ. ಪೂರ್ಣಯ್ಯ ನಾಲೆ ಒತ್ತುವರಿ ಅದರ ನಾಶದ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಚರ್ಚಿಸಲು ಹಲವು ಬಾರಿ ಪ್ರಯತ್ನ ನಡೆಸಿದರೂ ಅವರು ಈ ಹಿರಿಯ ಜೀವಗಳಿಗೆ ಸಮಯ ನೀಡುತ್ತಿಲ್ಲ’ ಎಂದು ಭಾಮಿ ವಿ. ಶೆಣೈ ಬೇಸರ ವ್ಯಕ್ತಪಡಿಸಿದರು. ‘ಮಂಗಳವಾರ ಸಂಜೆ 5 ಗಂಟೆಗೆ ಸಿಗುತ್ತೇವೆಂದರು. ಯಾದವಗಿರಿಯಿಂದ ಕಚೇರಿಗೆ ತೆರಳಿದ್ದರೂ ಅಲ್ಲಿ ಸಿಗಲಿಲ್ಲ. ಕರೆ ಸ್ವೀಕರಿಸಲಿಲ್ಲ. ಸಂದೇಶ ಮಾತ್ರ ನೋಡಿದ್ದಾರೆ. ಪ್ರತಿಕ್ರಿಯೆ ನೀಡಿಲ್ಲ’ ಎಂದರು.  ‘ಚಾಮುಂಡಿ ಬೆಟ್ಟ ರಕ್ಷಣೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿ ಸು‍ಪ್ರೀಂ ಕೋರ್ಟ್‌ವರೆಗೂ ಹೋಗಿ ಬಂದೆವು. ಅರಣ್ಯ ಇಲಾಖೆ ಜೊತೆ ಮಾತನಾಡಿಯೆಂದರು. ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಈಗ ಪ್ರತಿಭಟನೆ ನಡೆಸುವುದೇ ದಾರಿಯಾಗಿದೆ’ ಎಂದು ಹೇಳಿದರು.  ಈ ಬಗ್ಗೆ ಪ್ರತಿಕ್ರಿಯೆಗೆ ‘ಪ್ರಜಾವಾಣಿ’ ಕರೆ ಮಾಡಿದರೂ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಸ್ವೀಕರಿಸಲಿಲ್ಲ.  

ಸಾತಗಳ್ಳಿ ಕಟ್ಟಡ ತ್ಯಾಜ್ಯ ಸಂಸ್ಕರಣ ಘಟಕ ನನೆಗುದಿಗೆ

ಕಟ್ಟಡ ತ್ಯಾಜ್ಯ ಸಮಸ್ಯೆ ನಿವಾರಣೆಗೆ ಸಾತಗಳ್ಳಿಯ 7 ಎಕರೆ ಭೂಮಿಯಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿ ಘಟಕವನ್ನು ತೆರೆಯಲು ಪಾಲಿಕೆಯು ಮುಂದಾಗಿತ್ತು. ಸರ್ಕಾರಕ್ಕೆ ₹ 14 ಕೋಟಿ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌) ಸಲ್ಲಿಸಲಾಗಿತ್ತು. 2022ರ ಆರ್ಥಿಕ ವರ್ಷದಲ್ಲಿ ₹ 5 ಕೋಟಿ ಮೀಸಲಿಡಲಾಗಿತ್ತು. ಟೆಂಡರ್‌ ಪ್ರಕ್ರಿಯೆ ನಡೆಯಬೇಕಿತ್ತು. ಜಾಗದ ವಿಷಯವಾಗಿ ಆಕ್ಷೇಪ ವ್ಯಕ್ತವಾದ್ದರಿಂದ ನನೆಗುದಿಗೆ ಬಿದ್ದಿದೆ ಎನ್ನುತ್ತಾರೆ ಮಾಜಿ ಮೇಯರ್ ಶಿವಕುಮಾರ್ ಹಾಗೂ ಮುಖಂಡ ಅಯೂಬ್ ಖಾನ್.  ಸೂಯೆಜ್‌ ಫಾರಂನಲ್ಲೂ ಕಟ್ಟಡ ತ್ಯಾಜ್ಯ ಸಂಗ್ರಹಗೊಂಡಿದೆ. ರಿಂಗ್‌ ರಸ್ತೆಯ ತ್ಯಾಜ್ಯವನ್ನು ನಾಲೆಗೆ ತುಂಬಿಸಿದ್ದರೆ ಅದು ಸರಿಯಲ್ಲ ಎಂದು ಶಿವಕುಮಾರ್ ಪ್ರತಿಕ್ರಿಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.