ADVERTISEMENT

2023 ಮರೆಯುವ ಮುನ್ನ | ಮೈಸೂರು: ‘ಹೆದ್ದಾರಿ’ಯುದ್ದಕ್ಕೂ ಕ್ರೆಡಿಟ್ ವಾರ್!

ಜಿಲ್ಲೆಯ ಕೆಲವು ಅಭಿವೃದ್ಧಿ ಕಾರ್ಯ, ಹಲವು ಕಾಮಗಾರಿ ಅಪೂರ್ಣ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2023, 6:28 IST
Last Updated 30 ಡಿಸೆಂಬರ್ 2023, 6:28 IST
ಮೈಸೂರು–ಬೆಂಗಳೂರು ಹೆದ್ದಾರಿಯ ನೋಟ
ಮೈಸೂರು–ಬೆಂಗಳೂರು ಹೆದ್ದಾರಿಯ ನೋಟ   

ಮೈಸೂರು: ಈ ವರ್ಷ (2023) ಬಹು ಚರ್ಚೆಗೆ ಒಳಗಾದ ವಿಷಯವೆಂದರೆ ಅದು ಮೈಸೂರು– ಬೆಂಗಳೂರು ಹೆದ್ದಾರಿ ಅಭಿವೃದ್ಧಿ ಕಾಮಗಾರಿ. ನಿರ್ಮಾಣದ ಹಂತ ಹಾಗೂ ತರಾತುರಿಯಲ್ಲಿ ಉದ್ಘಾಟನೆಗೊಂಡ ನಂತರವೂ ‘ಕ್ರೆಡಿಟ್‌ ವಾರ್‌’ ನಡೆಯುತ್ತಲೇ ಇದೆ! ಅವಾಂತರ, ಸಮಸ್ಯೆಗಳು, ಅಪಘಾತಗಳು, ಅನುಕೂಲ, ದ್ವಿಚಕ್ರ–ತ್ರಿಚಕ್ರ ವಾಹನಗಳಿಗೆ ಪ್ರವೇಶವಿಲ್ಲ ಮೊದಲಾದ ವಿಷಯಗಳಿಂದ ಬಹಳ ಸದ್ದು ಮಾಡಿತು.

ಹೆದ್ದಾರಿಯನ್ನು ಮಾರ್ಚ್‌ 12ರಂದು ಪ್ರಧಾನಿ ನರೇಂದ್ರ ಮೋದಿ ಮಂಡ್ಯದಲ್ಲಿ ಉದ್ಘಾಟಿಸಿದ್ದರು. ಮೈಸೂರು–ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದರು.

‘ಮೈಸೂರು– ಬೆಂಗಳೂರು ಹೆದ್ದಾರಿ ಯೋಜನೆ ನಮ್ಮದು’ ಎನ್ನುವುದು ಕಾಂಗ್ರೆಸ್ ಹಾಗೂ ಬಿಜೆಪಿಯವರ ವಾದ. ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹಾಗೂ ಬಿಜೆಪಿಯ ಸಂಸದ ಪ್ರತಾಪ ಸಿಂಹ ಹೇಳಿಕೆ–ಪ್ರತಿ ಹೇಳಿಕೆ, ಏಟು–ತಿರುಗೇಟು ಕಂಡುಬಂತು. ಮಳೆಗಾಲದಲ್ಲಿ ರಸ್ತೆಯ ಅವ್ಯವಸ್ಥೆಗಳು, ಹುಳುಕುಗಳು ಹೊರಬಂದವು. ಇಂದಿಗೂ ಅಲ್ಲಲ್ಲಿ ವಿವಿಧ ಕಾಮಗಾರಿ, ಸರ್ವಿಸ್ ರಸ್ತೆ ಪೂರ್ಣಗೊಂಡಿಲ್ಲ. ಆದರೂ, ಪ್ರಯಾಣಿಕರಿಗೆ ದುಬಾರಿ ‘ಟೋಲ್‌ ಹೊರೆ’ ಹೊತ್ತುಕೊಂಡೇ ಸಾಗುತ್ತಿದ್ದಾರೆ!

ADVERTISEMENT

ಇಲ್ಲಿನ ಕೆಆರ್‌ಎಸ್‌ ರಸ್ತೆಯ ಪಿಕೆಟಿಬಿ ಆಸ್ಪತ್ರೆ ಆವರಣದಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಫೆರಿಫೆರಲ್‌ ಕ್ಯಾನ್ಸರ್‌ ಕೇಂದ್ರ ಹಾಗೂ ಮೈಸೂರು ವೈದ್ಯಕೀಯ ಕಾಲೇಜಿನ ಬಾಲಕಿಯರ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿ ಡಿ.22ರಂದು ಶಂಕುಸ್ಥಾಪನೆ ನೆರವೇರಿಸಿದರು. ಅಂದು ಮುಖ್ಯಮಂತ್ರಿಯು ಕವಲಂದೆಯಲ್ಲಿ ನಡೆದ ಕವಲಂದೆ, ಅಂತರಸಂತೆ ಹಾಗೂ ಜಯಪುರ ಪೊಲೀಸ್ ಠಾಣೆಗಳ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ‘ಹಿಜಾಬ್ ನಿಷೇಧ ವಾಪಸ್‌ಗೆ ಸೂಚಿಸಿರುವೆ’ ಎಂದು ಹೇಳಿದ್ದು, ವಿವಾದಕ್ಕೆ ಹಾಗೂ ಚರ್ಚೆಗೆ ಒಳಗಾಯಿತು.

ಕಡಕೊಳ ಬಳಿ 55 ಎಕರೆ ಜಾಗದಲ್ಲಿ ಕಂಟೈನರ್ ಕಾರ್ಪೋರೇಶನ್ ಆಫ್ ಇಂಡಿಯಾದಿಂದ ₹102 ಕೋಟಿ ವೆಚ್ಚದಲ್ಲಿ ರೈಲ್ವೆ ಗೂಡ್ಸ್ ಟರ್ಮಿನಲ್, ₹30 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ಸ್ಟೇಷನ್, ಫೂಟ್‌ ಓವರ್ ಬ್ರಿಡ್ಜ್, 2 ಪ್ಲಾಟ್ ಫಾರಂ, 2 ಸ್ಟೇಬಲಿಂಗ್ ಲೈನ್ ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ಒಳಗೊಂಡಂತೆ ಅಭಿವೃದ್ಧಿಪಡಿಸಿರುವ ನಗರದ ಆಶೋಕಪುರಂ ರೈಲ್ವೆ ಯಾರ್ಡ್ ಹಾಗೂ ಹೊರವಲಯದಲ್ಲಿರುವ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ (ಇನ್ಫೊಸಿಸ್‌ ಬಳಿ) ₹27.64 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಎಸ್‌ಡಿಪಿಐ (ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ) ಉದ್ಘಾಟನೆಗೆ ಸಿದ್ಧಗೊಂಡಿವೆ.

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಜಯಚಾಮರಾಜ ಒಡೆಯರ್ ಉನ್ನತ ಕಲಿಕಾ ಕೇಂದ್ರದ ಆವರಣದಲ್ಲಿ ಅತ್ಯಾಧುನಿಕ ತಾರಾಲಯದ ನಿರ್ಮಾಣ ಕಾಮಗಾರಿ ಈ ವರ್ಷ ಚುರುಕುಗೊಂಡಿತು. ₹81 ಕೋಟಿ ವಿನಿಯೋಗಿಸಲಾಗುತ್ತಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸಂಸದರ ನಿಧಿಯಿಂದ ₹5 ಕೋಟಿ ನೀಡಿದ್ದಾರೆ.

ಪುರಭವನದ ಆವರಣದಲ್ಲಿ ಬಹುಮಹಡಿ ವಾಹನ ನಿಲುಗಡೆ ತಾಣದ ಕಾಮಗಾರಿ ಪೂರ್ಣಗೊಂಡಿತು. ಪಾರಂಪರಿಕ ಹೆಗ್ಗುರುತು ದೊಡ್ಡ ಗಡಿಯಾರಕ್ಕೆ ಕಾಯಕಲ್ಪ ನೀಡುವ ಕಾರ್ಯಕ್ಕೆ ಸಿದ್ಧತೆ ನಡೆಯಿತು.

ಮೈಸೂರಿನ ಡಿ.ದೇವರಾಜ ಅರಸು ರಸ್ತೆ, ಅಶೋಕ ರಸ್ತೆ, ಸಯ್ಯಾಜಿರಾವ್‌ ರಸ್ತೆ ಹಾಗೂ ಪುರಭವನದ ಆವರಣದಲ್ಲಿ ವಾಹನಗಳ ನಿಲುಗಡೆಗೆ ಶುಲ್ಕ ವಸೂಲಿಗೆ ಜೂನ್‌ 9ರಂದು ಮಹಾನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ, ಅದು ಅನುಷ್ಠಾನಗೊಳ್ಳಲಿಲ್ಲ.

ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಕಾಮಗಾರಿ ಆರಂಭವಾಗಲಿಲ್ಲ. ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ.

ಆ.9: ಪರಿಶಿಷ್ಟ ಪಂಗಡಗಳ ಸಚಿವ ಬಿ.ನಾಗೇಂದ್ರ ಎಚ್‌.ಡಿ. ಕೋಟೆ ತಾಲ್ಲೂಕು ಗೋಳೂರು ಹಾಡಿಯಲ್ಲಿ ವಾಸ್ತವ್ಯ ಹೂಡಿ, ಬುಡಕಟ್ಟು ಜನರ ಸಮಸ್ಯೆಗಳನ್ನು ಆಲಿಸಿದರು.

ಆ.28: ಜಿಲ್ಲಾ ‍ಪಂಚಾಯಿತಿಯಲ್ಲಿ ಸತತ ಏಳು ತಾಸು ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಸೆ. 25: ಜಿಲ್ಲಾ ‍ಪಂಚಾಯಿತಿಯಲ್ಲಿ ಸತತ 5 ತಾಸು ಜನತಾ ದರ್ಶನ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇಪವ್ಪ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.

ಅ.5: ಕೆಎಸ್‌ಒಯುನಲ್ಲಿ 2009–10ನೇ ಸಾಲಿನಿಂದ 2015–16ರವರೆಗೆ ನಡೆದಿದೆ ಎನ್ನಲಾದ ಹಣ ದುರ್ಬಳಕೆ ಹಗರಣದ ಸಂಬಂಧ ಸಿಬಿಐ ಎಫ್‌ಐಆರ್ ದಾಖಲಿಸಿತು.

ನ.29: ತಿ.ನರಸೀಪುರ ತಾಲ್ಲೂಕಿನ ವಿದ್ಯೋದಯ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಉಸ್ತುವಾರಿ ಸಚಿವರಿಂದ ಜನತಾ ದರ್ಶನ ಕಾರ್ಯಕ್ರಮ ನಡೆಯಿತು.

ಡಿ.10: ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಂಡಿರುವ ‘ಬ್ರ್ಯಾಂಡಿಂಗ್ ಮೈಸೂರು’ ಉಪಕ್ರಮದ ಭಾಗವಾಗಿ ‘ಬ್ರ್ಯಾಂಡ್ ಮೈಸೂರು ಲೋಗೊ’ ಹಾಗೂ ಟ್ಯಾಗ್‌ಲೈನನ್ನು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ಅನಾವರಣಗೊಳಿಸಿದರು.

ಡಿ.20: ಎಚ್‌.ಡಿ. ಕೋಟೆ ತಾಲ್ಲೂಕು ಡಿ.ಬಿ. ಕುಪ್ಪೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇಪವ್ಪ ಬುಡಕಟ್ಟು ಸಮುದಾಯದವರಿಗೆ ಅರಣ್ಯ ಹಕ್ಕುಪತ್ರಗಳನ್ನು ವಿತರಿಸಿದರು.

ಮೈಸೂರಿನ ಅಂಬೇಡ್ಕರ್‌ ಭವನ ಕಾಮಗಾರಿ ನನೆಗುದಿಗೆ ಬಿದ್ದಿದೆ
ಮೈಸೂರಿನ ಸಿದ್ಧಾರ್ಥನಗರದಲ್ಲಿ ನಿರ್ಮಿಸಿರುವ ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣಕ್ಕೆ ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರಗೊಂಡಿದೆ

ಬಜೆಟ್‌ನಲ್ಲಿ ಸಿಕ್ಕಿದ್ದು... ಜುಲೈ 7ರಂದು 14ನೇ ಬಜೆಟ್‌ ಮಂಡಿಸಿ ತಮ್ಮದೇ ದಾಖಲೆಯನ್ನು ಮುರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿಗೆ ಕೆಲ ಕೊಡುಗೆ ನೀಡಿದರು. ಇಮ್ಮಾವಿನಲ್ಲಿ ಚಿತ್ರನಗರಿ ಸ್ಥಾಪನೆ ಜಿಐ (ಭೌಗೋಳಿಕ ಮಾನ್ಯತೆ) ಟ್ಯಾಗ್‌ ಪಡೆದಿರುವ ಮೈಸೂರು ಮಲ್ಲಿಗೆ ನಂಜನಗೂಡು ರಸಬಾಳೆ ಹಾಗೂ ಮೈಸೂರು ವೀಳ್ಯದೆಲೆ ಉತ್ಪಾದನೆ ಸಂಶೋಧನೆ ಮಾರುಕಟ್ಟೆ ಮತ್ತು ಬ್ರ್ಯಾಂಡಿಂಗ್‌ ಉತ್ತೇಜಿಸಲು ನೂತನ ಕಾರ್ಯಕ್ರಮ ರೂಪಿಸಲಾಗುವುದು ಎಂದು ಹೇಳಿದ್ದರು. ರೇಷ್ಮೆ ಕೃಷಿ ಅಭಿವೃದ್ಧಿಗೆ ಮೈಸೂರು ಬಿತ್ತನೆ ಪ್ರದೇಶದಲ್ಲಿ ಸೌಕರ್ಯ ಬಲಪಡಿಸಲಾಗುವುದು ಎಂದಿದ್ದರು.  ಮೈಸೂರಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾರಂಭ ಮತ್ತು ಸುಟ್ಟ ಗಾಯಗಳ ಘಟಕ ಸ್ಥಾಪನೆಗೆ ಅನುದಾನ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಅತ್ಯಾಧುನಿಕ ಕೌಶಲ ಪ್ರಯೋಗಾಲಯ ಸಂಶೋಧನಾ ಕೇಂದ್ರ ಮತ್ತು ಒಳಾಂಗಣ ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸುವುದು ಮೈಸೂರಿನ ಟ್ರಾಮಾ ಕೇರ್ ಸೆಂಟರ್‌ ಕಾರ್ಯಾಚರಣೆಗೆ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದ್ದರು. ಮೈಸೂರಿನ ಗುರುದ್ವಾರದ ಅಭಿವೃದ್ಧಿಗೆ ಅನುದಾನ ಮೈಸೂರಿನಲ್ಲಿ ಸೈಕ್ಲಿಂಗ್ ವೇಲೋಡ್ರೋಮ್ ಸ್ಥಾಪನೆಗೆ ₹10 ಕೋಟಿ ಅನುದಾನ ಒದಗಿಸಲಾಗುವುದು. ವಸ್ತುಪ್ರದರ್ಶನ ಪ್ರಾಧಿಕಾರದ ಆವರಣವನ್ನು ದೆಹಲಿಯ ಪ್ರಗತಿ ಮೈದಾನದ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು. ಚಾಮುಂಡಿವಿಹಾರ ಕ್ರೀಡಾಂಗಣದ ಬಳಿ ಎಆರ್‌ (ಆಗ್ಯೂಮೆಂಟೆಡ್ ರಿಯಾಲಿಟಿ) ಮತ್ತು ವಿಆರ್‌ (ವರ್ಚುವಲ್‌ ರಿಯಾಲಿಟಿ) ತಂತ್ರಜ್ಞಾನದೊಂದಿಗೆ ಅಂತರರಾಷ್ಟ್ರೀಯ ಗುಣಮಟ್ಟದ ‘ಕರ್ನಾಟಕ ಪುರಾತತ್ವ ವಸ್ತುಸಂಗ್ರಹಾಲಯ ಮತ್ತು ಕಲಾಗ್ಯಾಲರಿ’ ನಿರ್ಮಾಣ ಕೂರ್ಗಳ್ಳಿಯಲ್ಲಿರುವ ವನ್ಯಪ್ರಾಣಿಗಳ ಪುನರ್ವಸತಿ ಕೇಂದ್ರದ ಬಲವರ್ಧನೆ ಮಾಡಲಾಗುತ್ತದೆ ಎಂದು ತಿಳಿಸಿದ್ದರು. ‘ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ’ ರಚಿಸಲಾಗುವುದು. ಮೈಸೂರಿನಲ್ಲಿ ನಿರ್ಮಾಣಗೊಳ್ಳಲಿರುವ ಕಿದ್ವಾಯಿ ಮಾದರಿ ಕ್ಯಾನ್ಸರ್ ಘಟಕಕ್ಕೆ ₹20 ಕೋಟಿ ಮೀಸಲಿಡಲಾಗಿದೆ ಎಂದು ಹೇಳಿದ್ದರು.

ಯುಪಿಎಸ್‌ಸಿಯಲ್ಲಿ ಬೆಳಗಿದ ಮೂವರು: ಮೇ 23ರಂದು ಪ್ರಕಟವಾದ 2022ರ ಯುಪಿಎಸ್‌ಸಿ ನಾಗರಿಕ ಸೇವಾ ‍ಪರೀಕ್ಷೆಯಲ್ಲಿ ಮೈಸೂರಿನ ಮೂವರು ಸಾಧನೆ ಮಾಡಿದರು. ವಿಜಯನಗರದ ಕೆ.ಸೌರಭ್ (260ನೇ ರ‍್ಯಾಂಕ್) ಕುವೆಂಪುನಗರದ ಎಂ.ಪೂಜಾ (390ನೇ ರ‍್ಯಾಂಕ್‌) ಹಾಗೂ ಬೆಳವಾಡಿಯ ಜೆ.ಭಾನು‍ಪ್ರಕಾಶ್‌ (448ನೇ ರ‍್ಯಾಂಕ್‌) ಯಶಸ್ಸು ಕಂಡರು. ಯುಪಿಎಸ್‌ಯು 2022ರ ನವೆಂಬರ್‌ನಲ್ಲಿ ನಡೆಸಿದ್ದ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್‌) ಪರೀಕ್ಷೆಯಲ್ಲೂ ಪೂಜಾ 45ನೇ ರ್‍ಯಾಂಕ್‌ ಪಡೆದಿದ್ದರು (ಜುಲೈ 1ರಂದು ಫಲಿತಾಂಶ ಪ್ರಕಟವಾಗಿತ್ತು).

ಡಿಸಿ ಕಚೇರಿ ಸ್ಥಳಾಂತರ: ಓವೆಲ್‌ ಮೈದಾನದ ಪಕ್ಕದಲ್ಲಿದ್ದ ಜಿಲ್ಲಾಧಿಕಾರಿ ಕಚೇರಿಯನ್ನು ಸಿದ್ದಾರ್ಥನಗರದ ತಿ.ನರಸೀಪುರ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿರುವ ‘ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣ’ಕ್ಕೆ ಜೂನ್‌ 8ರಂದು ಸ್ಥಳಾಂತರಿಸಲಾಯಿತು. ಈ ಕಟ್ಟಡ ಉದ್ಘಾಟನೆಯಾಗಿ ಐದು ವರ್ಷ ಮೂರು ತಿಂಗಳು ಕಳೆದ ಮೇಲೆ ಸಂಪೂರ್ಣ ಬಳಕೆಗೆ ಜಿಲ್ಲಾಡಳಿತ ಕ್ರಮ ವಹಿಸಿತು. ಜಿಲ್ಲಾಧಿಕಾರಿ ಕಚೇರಿಯು ಹೊಸ ಕಟ್ಟಡದಲ್ಲಿ ಅಧಿಕೃತವಾಗಿ ಕಾರ್ಯನಿರ್ವಹಿಸಲು ಆರಂಭಿಸಿತು. ಆದರೆ ಅಲ್ಲಿ ‘ಸಾರ್ವಜನಿಕ ಸ್ನೇಹಿ’ಯಾಗಿ ಸೌಕರ್ಯಗಳನ್ನು ಕಲ್ಪಿಸುವ ಕೆಲಸವನ್ನು ಜಿಲ್ಲಾಡಳಿತ ಇನ್ನೂ ಮಾಡಿಲ್ಲ.

ಪೂರ್ಣಗೊಳ್ಳದ ಅಂಬೇಡ್ಕರ್‌ ಭವನ: ಮೈಸೂರಿನ ದಿವಾನ್ಸ್‌ ಹಾಗೂ ಕೃಷ್ಣವಿಲಾಸ ರಸ್ತೆಗೆ ಹೊಂದಿಕೊಂಡಂತೆ ನಿರ್ಮಿಸಲಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್‌ ಭವನದ ಕಾಮಗಾರಿ ಈ ವರ್ಷವೂ ಪೂರ್ಣಗೊಳ್ಳಲಿಲ್ಲ. ಇನ್ನೂ ₹22.30 ಕೋಟಿ ಬೇಕಾಗಿದ್ದು ಇದನ್ನು ಹೊಂದಿಸಲು ಸಮಾಜ ಕಲ್ಯಾಣ ಇಲಾಖೆ ಹೆಣಗಾಡುತ್ತಿದೆ. 2012ರಲ್ಲಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ಬರೋಬ್ಬರಿ 11 ವರ್ಷ ಕಳೆದರೂ ನಡೆದಿರುವುದು ಕಟ್ಟಡ ನಿರ್ಮಾಣದ ಕಾರ್ಯವಷ್ಟೆ. ಅದೂ ಮುಗಿದಿಲ್ಲ! ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತವರಿನ ಈ ಯೋಜನೆಯ ಕೆಲಸ ಚುರುಕಾಗುವುದು ಯಾವಾಗ ಬಳಕೆಗೆ ಮುಕ್ತಗೊಳ್ಳಲು ಇನ್ನೆಷ್ಟು ಸಮಯ ಬೇಕು ಎಂಬ ಪ್ರಶ್ನೆ ಈ ವರ್ಷವೂ ಮುಂದುವರಿಯಿತು. ಲ್ಯಾನ್ಸ್‌ಡೌನ್‌ ಕಟ್ಟಡ ಸೇರಿದಂತೆ ಶಿಥಿಲಗೊಂಡಿರುವ ಹತ್ತು ಹಲವು ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ಈ ವರ್ಷವೂ ಕ್ರಮವಾಗಲಿಲ್ಲ. ವಿಶೇಷ ಅನುದಾನ ದೊರೆಯದೇ ಹೆಗ್ಗುರುತುಗಳನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಹಳೆಯ ಜಿಲ್ಲಾಧಿಕಾರಿ ಕಚೇರಿ ಪಕ್ಕದ ಉದ್ಯಾನದಲ್ಲಿ ನಿರ್ಮಿಸಲಾಗುತ್ತಿರುವ ಯುದ್ಧ ಸ್ಮಾರಕಕ್ಕೆ 2022ರ ಜುಲೈ 29ರಂದು ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಅದು ಈ ವರ್ಷ ಪೂರ್ಣಗೊಳ್ಳಲಿಲ್ಲ.

ಗೆದ್ದ ಮೈಸೂರು ಜೋಡಿ ಡಿ.11: ಪ್ರಜಾವಾಣಿ’ ‘ಪರಿಶ್ರಮ ಪಿಯು ಕಾಲೇಜು’ ಭೀಮಾ ಗೋಲ್ಡ್‌ ಸಹಯೋಗದಲ್ಲಿ ಕಲಾಮಂದಿರದಲ್ಲಿ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿ‍ಪ್‌’ ವಲಯಮಟ್ಟದ ಸ್ಪರ್ಧೆ ನಡೆಯಿತು. ಮೈಸೂರು ಹಾಸನ ಚಾಮರಾಜನಗರ ಹಾಗೂ ಮಂಡ್ಯದ ಪ್ರೌಢಶಾಲೆಗಳ ನೂರಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದವು. ಮೈಸೂರಿನ ಎಕ್ಸೆಲ್‌ ಪಬ್ಲಿಕ್‌ ಶಾಲೆಯ ಭುವನ್ ಹಾಗೂ ಶ್ರೀನಂದಿನಿ ಜೋಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಬಳಿಕ ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ಗಳಿಸಿ ಮೈಸೂರಿಗೆ ಹೆಸರು ತಂದಿತು.

ಶಿಕ್ಷಣ ಕ್ಷೇತ್ರ: ಮೈಸೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಬೋಧಕೇತರ ಹುದ್ದೆಗಳ ಭರ್ತಿಗೆ ಈ ವರ್ಷವೂ ಕ್ರಮವಾಗಲಿಲ್ಲ. ಅತಿಥಿ ಉಪನ್ಯಾಸಕರ ಮೊರೆ ಹೋಗುವುದು ತಪ್ಪಲಿಲ್ಲ. ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆಯು ಕಳಪೆ ಸಾಧನೆ ಮಾಡಿತು. ‍ದ್ವಿತೀಯ ಪಿಯುಸಿಯಲ್ಲಿ ಕೊಂಚ ಸುಧಾರಣೆ ಕಂಡಿತು. ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ಸ್ವಂತ ‘ಸೂರು’ ಸಿಗಲಿಲ್ಲ. ಸಿಕ್ಕ ಜಾಗದಲ್ಲಿ ಶಂಕುಸ್ಥಾಪನೆ ಕೆಲಸವೂ ನಡೆಯಲಿಲ್ಲ. ಆದರೆ ಸಂಗೀತ ಶಿಕ್ಷಣವನ್ನು ವಿಸ್ತರಿಸಲು ಪ್ರಸಕ್ತ ಸಾಲಿನಿಂದಲೇ ಸಂಗೀತ ಮತ್ತು ನೃತ್ಯ ಕಲೆಗಳ ವಿಷಯದಲ್ಲಿ ಸರ್ಟಿಫಿಕೇಟ್‌ ಹಾಗೂ ಡಿಪ್ಲೊಮಾ ಕೋರ್ಸ್‌ಗಳನ್ನು ನಡೆಸಲು 27 ಖಾಸಗಿ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿತು. ಪ್ರೌಢಶಿಕ್ಷಣ ಮಂಡಳಿಯು ರಾಜ್ಯದಾದ್ಯಂತ ನಡೆಸುತ್ತಿದ್ದ ಸಂಗೀತ ತಾಳವಾದ್ಯ ಹಾಗೂ ನೃತ್ಯಕ್ಕೆ ಸಂಬಂಧಿಸಿದ ಜೂನಿಯರ್ ಸೀನಿಯರ್ ವಿದ್ವತ್ ಪೂರ್ವ ಹಾಗೂ ವಿದ್ವತ್ ಪರೀಕ್ಷೆಗಳನ್ನು ಸಂಗೀತ ವಿವಿಯಿಂದಲೇ ನಿರ್ವಹಿಸಲು ಅನುಮೋದನೆ ಸಿಕ್ಕಿದೆ. ಒಮ್ಮೆಲೆ ಎರಡು ಸಾಲಿನ ಘಟಿಕೋತ್ಸವಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.