ADVERTISEMENT

ಕೆ.ಆರ್.ನಗರ: ಕುಸಿದ ಸೇತುವೆ, ಸುಗಮ ಸಂಚಾರಕ್ಕೆ ಕಿರಿಕಿರಿ

ತಾತ್ಕಾಲಿಕ ಸೇತುವೆಯೂ ಕುಸಿತ; ಚತುಷ್ಪಥ ಹೆದ್ದಾರಿಗೆ ಸ್ಥಳೀಯರ ಒತ್ತಾಯ

ಪಂಡಿತ್ ನಾಟಿಕರ್
Published 26 ಮೇ 2022, 6:06 IST
Last Updated 26 ಮೇ 2022, 6:06 IST
ಕೆ.ಆರ್.ನಗರ ತಾಲ್ಲೂಕಿನ ಅರಕೆರೆ ಬಳಿ ನಡೆದಿರುವ ತಾತ್ಕಾಲಿಕ ಸೇತುವೆ ಕಾಮಗಾರಿ
ಕೆ.ಆರ್.ನಗರ ತಾಲ್ಲೂಕಿನ ಅರಕೆರೆ ಬಳಿ ನಡೆದಿರುವ ತಾತ್ಕಾಲಿಕ ಸೇತುವೆ ಕಾಮಗಾರಿ   

ಕೆ.ಆರ್.ನಗರ: ತಾಲ್ಲೂಕಿನ ಅರಕೆರೆ ಬಳಿ ಬಿಳಿಕೆರೆ-ಬೇಲೂರು ರಾಜ್ಯ ಹೆದ್ದಾರಿಯಲ್ಲಿ ಚಾಮರಾಜ ಬಲದಂಡೆ ನಾಲೆಗೆ ಅಡ್ಡಲಾಗಿ ನಿರ್ಮಿಸಲಾದ ತಾತ್ಕಾಲಿಕ ಸೇತುವೆ ಈಚೆಗೆ ಕುಸಿದ ಪರಿಣಾಮ ಲಾಳಂದೇವಹಳ್ಳಿ, ಡೋರ್ನಹಳ್ಳಿ ಮಾರ್ಗವಾಗಿ ಕಿರಿದಾದ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ರಸ್ತೆ ಸಂಚಾರ ದುಸ್ತರವಾಗಿದೆ.

ಆರು ತಿಂಗಳ ಹಿಂದೆ ಇಲ್ಲಿದ್ದ ಸೇತುವೆ ಕುಸಿದಿತ್ತು. ಆಗಲೂ ಲಾಳಂದೇವಹಳ್ಳಿ, ಡೋರ್ನಹಳ್ಳಿ ಮಾರ್ಗವಾಗಿ ಕಿರಿದಾದ ರಸ್ತೆಯಲ್ಲಿ ವಾಹನ ಸಂಚರಿಸಿದವು. ಕೆಲ ದಿನದ ನಂತರ ಕುಸಿದ ಸೇತುವೆ ಬಳಿಯೇ ತಾತ್ಕಾಲಿಕ ಸೇತುವೆ ನಿರ್ಮಿಸಿ, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿತ್ತು.

ವಾರದ ಹಿಂದೆ ಬಿದ್ದ ಮಳೆಗೆ ತಾತ್ಕಾಲಿಕವಾಗಿ ನಿರ್ಮಿಸಲಾದ ಸೇತುವೆಯೂ ಕುಸಿದಿದೆ. ಇದರಿಂದ ಅರಕೆರೆ ಮಾರ್ಗವಾಗಿ ವಾಹನಗಳ ಓಡಾಟಕ್ಕೆ ತಡೆ ಬಿದ್ದಿದೆ. ಹೆದ್ದಾರಿಯಲ್ಲಿ ಓಡಾಡುತ್ತಿದ್ದ ಸಾರಿಗೆ ಬಸ್ ಸೇರಿದಂತೆ ಭಾರಿ ಮತ್ತು ಲಘು ವಾಹನಗಳು ಲಾಳಂದೇವಹಳ್ಳಿ, ಡೋರ್ನಹಳ್ಳಿ ಮಾರ್ಗವಾಗಿ ಕಿರಿದಾದ ರಸ್ತೆಯಲ್ಲಿ ಸಂಚರಿಸುತ್ತಿವೆ. ಈ ರಸ್ತೆ ಪಕ್ಕದಲ್ಲಿ ಗದ್ದೆ, ನಾಲೆಗಳಿದ್ದು, ಜೀವ ಕೈಯಲ್ಲಿ ಹಿಡಿದು ಪ್ರಯಾಣಿಕರು ಸಂಚರಿಸಬೇಕಿದೆ.

ADVERTISEMENT

ಬಿಳಿಕೆರೆ-ಬೇಲೂರು ದ್ವಿಪಥ ದಲ್ಲಿರುವ ರಾಜ್ಯ ಹೆದ್ದಾರಿ ಮತ್ತು ಸೇತುವೆ ನಾಲ್ಕು ಪಥವಾಗಿ ವಿಸ್ತರಣೆ ಗೊಳ್ಳುವ ಹಂತದಲ್ಲಿದೆ. ವಿಸ್ತರಣೆ ಕಾಮಗಾರಿ ಪ್ರಾರಂಭವಾಗುವ ಮುನ್ನವೇ ಶಿಥಿಲಗೊಂಡ ದ್ವಿಪಥದ ಹಳೆ ಸೇತುವೆ ಕುಸಿದಿದೆ. ನಾಲ್ಕು ಪಥದ ಸೇತುವೆ ನಿರ್ಮಾಣವಾಗುವ ಜಾಗದಲ್ಲಿ ಸದ್ಯ ಎರಡು ಪಥದ ಸೇತುವೆ ನಿರ್ಮಿಸಲಾಗುತ್ತಿದೆ. ಕೂಡಲೇ ಸೇತುವೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

‘ಈಚೆಗೆ ಬಿದ್ದ ಮಳೆಯಿಂದ ತಾತ್ಕಾಲಿಕವಾಗಿ ನಿರ್ಮಿಸಲಾದ ಸೇತುವೆಯ ಮಣ್ಣು ಕುಸಿದಿದೆ. ಇದರಿಂದ ವಾಹನ ಸಂಚಾರಕ್ಕೆ ತಡೆ ನೀಡಲಾಗಿತ್ತು. ತಾತ್ಕಾಲಿಕ ಸೇತುವೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ. ವಾಹನಗಳು ಎಂದಿನಂತೆ ತಾತ್ಕಾಲಿಕ ಸೇತುವೆ ಮೇಲಿಂದ ಸಾಗಬಹುದು’ ಎಂದು ಗುತ್ತಿಗೆದಾರ ಚಂದ್ರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘₹ 1.80 ಕೋಟಿ ವೆಚ್ಚದಲ್ಲಿ ದ್ವಿಪಥದ ಸೇತುವೆ ಕಾಮಗಾರಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಅನುಮತಿ ದೊರೆತ ನಂತರವೇ ಕಾಮಗಾರಿ ಮುಂದುವರೆಯಲಿದೆ. ವಿನ್ಯಾಸಕಾರ ನವದೆಹಲಿಯಿಂದ ಬರಬೇಕಿರುವುದರಿಂದ ತಡವಾಗಿದೆ. ಎರಡು ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ’ ಎಂದು ಹೇಳಿದರು.

*
ಸೇತುವೆ ಕಾಮಗಾರಿಗೆ ನವದೆಹಲಿಯಿಂದಲೇ ಅನುಮತಿ ಪಡೆಯಬೇಕಿರುವುದರಿಂದ ವಿಳಂಬವಾಗಿದೆ. ದ್ವಿಪಥದ ಸೇತುವೆ ಕಾಮಗಾರಿ ಮಾಡಲಾಗುತ್ತಿದೆ
-ಗಂಗಾಧರ್, ಎಂಜಿನಿಯರ್‌, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.