ಮೈಸೂರು: ಇಲ್ಲಿನ ಕೆ.ಆರ್.ಆಸ್ಪತ್ರೆಯ ಆವರಣದಲ್ಲಿ 14 ಕಟ್ಟಡಗಳಿದ್ದು, ಅವೆಲ್ಲವೂ ಶತಮಾನೋತ್ಸವಕ್ಕೆ ಸಿದ್ಧಗೊಳ್ಳುತ್ತಿವೆ. ನಿಧಾನಗತಿಯ ದುರಸ್ತಿ ಕಾರ್ಯವು ರೋಗಿಗಳು, ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಸಂಕಷ್ಟಕ್ಕೆ ದೂಡಿದೆ.
‘ರೋಗಿಗಳಿಗೆ ಮೀಸಲಿದ್ದ ಐದಾರು ವಾರ್ಡ್‌ಗಳನ್ನು ದುರಸ್ತಿಗೆಂದು ಬಿಟ್ಟುಕೊಟ್ಟಿರುವುದರಿಂದ 150 ಬೆಡ್‌ಗಳು ಕಡಿಮೆಯಾಗಿವೆ. ಬೆಡ್ ಸಿಗದಿದ್ದಾಗ ನೇರವಾಗಿ ನಮ್ಮ ಮೇಲೆ ರೇಗುತ್ತಾರೆ’ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.
ಈ ಸಮಸ್ಯೆಯಿಂದ, ತುರ್ತು ನಿಗಾ ಘಟಕದಲ್ಲೂ ಬೆಡ್ ಇಲ್ಲದೆ ರೋಗಿಗಳು ರಾತ್ರಿ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅವರೆಲ್ಲಾ ಹೊರಾಂಗಣದ ಹಾಸುಕಲ್ಲಿನಲ್ಲಿ, ನೆಲದ ಮೇಲೆಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಬ್ಬಂದಿ ಕೊರತೆಯಿಂದ ಆ ಘಟಕಕ್ಕೆ ರೋಗಿಗಳ ಜೊತೆಗೆ ಅವರ ಸಂಬಂಧಿಕರೆಲ್ಲಾ ನುಗ್ಗುತ್ತಾರೆ. ಅದರಿಂದ ವೈದ್ಯರಿಗೂ ಕಷ್ಟವಾಗಿದೆ.
ಮಿತಿಮೀರಿ ರೋಗಿಗಳು ಇರುವುದರಿಂದ ವಾರ್ಡ್‌ಗಳೂ ದುರ್ನಾತ ಬೀರುತ್ತಿವೆ. ಸಿಬ್ಬಂದಿಯೂ ಶುಚಿಗೊಳಿಸಿ ಬೇಸತ್ತಿದ್ದಾರೆ.
ವಾರ್ಡ್‌ಗೆ ತೆರಳುವ ಮಾರ್ಗಕ್ಕೆ ಅಡ್ಡಲಾಗಿ ಬೃಹತ್ ಏಣಿಗಳನ್ನು ಇಡುತ್ತಾರೆ. ಸಂಜೆ ಕೆಲಸ ಮಾಡಿದ ಬಳಿಕವೂ ತೆರವುಗೊಳಿಸುವುದಿಲ್ಲ. ರಾತ್ರಿ ಓಡಾಡುವ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಅದರ ಕೆಳಗೆ ಸಂಚರಿಸಬೇಕು.
‘ಆಸ್ಪತ್ರೆಯ ಎಲ್ಲ ಕಟ್ಟಡಗಳ ಕಾಮಗಾರಿಯನ್ನೂ ಬೇರೆ, ಬೇರೆ ಗುತ್ತಿಗೆದಾರರಿಗೆ ನೀಡಿರುವುದರಿಂದ ಎಲ್ಲಾ ಕಡೆ ಏಕಕಾಲದಲ್ಲಿ ದುರಸ್ತಿ ನಡೆಯುತ್ತಿದೆ. ಹೀಗಾಗಿಯೇ ಬೆಡ್‌ಗಳ ಸಮಸ್ಯೆ ತಲೆದೂರಿದೆ. ತಕ್ಷಣ ಕೆಲಸ ಮುಗಿಸಿಕೊಡುವಂತೆ ಸೂಚಿಸಿದ್ದೇವೆ’ ಎನ್ನುತ್ತಾರೆ ಆಸ್ಪತ್ರೆಯ ಸೂಪರಿಟೆಂಡೆಂಟ್ ಡಾ.ಶೋಭಾ.
ಅಧಿಕಾರಿಗಳು ಸೂಚನೆ ನೀಡಿದರೂ ಕೆಲಸಗಾರರು ‘ನಿಧಾನವೇ ಪ್ರಧಾನ’ ಎಂಬುದನ್ನು ಅನುಸರಿಸಿದಂತೆ ಕಾಣುತ್ತದೆ. ಇನ್ನೂ ಗೋಡೆಗಳಿಗೆ ಸಾರಣೆ ಕೆಲಸವೇ ಮುಂದುವರಿದಿದೆ. ವಾರ್ಡ್ ಸದ್ಯಕ್ಕೆ ಆಸ್ಪತ್ರೆಯ ಸುಪರ್ದಿಗೆ ಬರುವ ಲಕ್ಷಣ ಕಾಣಿಸುತ್ತಿಲ್ಲ.
‘ಪ್ರಜಾವಾಣಿ’ ತಂಡ ಸಂಜೆ 4 ಗಂಟೆ ವೇಳೆಗೆ ಹೆರಿಗೆ ಘಟಕದ ಬಳಿ ತೆರಳಿದಾಗ ಹಲವು ಕೆಲಸಗಾರರು ಕುಳಿತಿದ್ದರು. ಕ್ಯಾಮೆರಾ ಕಂಡೊಡನೆ ಎಲ್ಲರೂ ಸಾಮಗ್ರಿಗಳನ್ನು ಕೈಗೆತ್ತಿಕೊಂಡು ಕೆಲಸದಲ್ಲಿ ತೊಡಗಿದರು.
ಇಲ್ಲಿ ಹೆಚ್ಚಾಗಿ ಹಿಂದಿ ಮಾತನಾಡುವ ಉತ್ತರ ಭಾರತದ ಕೆಲಸಗಾರರಿದ್ದಾರೆ. ಅವರು ಗುತ್ತಿಗೆದಾರ ಮಾತನ್ನಷ್ಟೇ ಕೇಳುವುದರಿಂದ, ಅಧಿಕಾರಿ ಹಾಗೂ ಸಿಬ್ಬಂದಿಯೂ ಏನೂ ಹೇಳುವುದಿಲ್ಲ. ಹೀಗಾಗಿ ಅವರೆಲ್ಲ ಆರಾಮವಾಗಿ ಕೆಲಸ ಮಾಡುತ್ತಿದ್ದಾರೆ.
‘ದುರಸ್ತಿ ಕಾರ್ಯ ಬೇಗ ಮುಗಿದರೆ ಆಸ್ಪತ್ರೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ನೆರವಾಗುತ್ತದೆ’ ಎಂಬುದು ಸಿಬ್ಬಂದಿಗಳ ಪ್ರತಿಪಾದನೆ.
ಚೆಲುವಾಂಬ ಆಸ್ಪತ್ರೆಯ ಸಮೀಪ ಇರುವ ಹೆರಿಗೆ ವಾರ್ಡ್ ಕಟ್ಟಡದಲ್ಲಿ ಗೋಡೆಗಳನ್ನು ಅಗೆದು ಸಾರಣೆ ಮಾಡುವ ಕೆಲಸ ನಡೆಯುತ್ತಿದೆ. ಆದರೆ ಅದರ ಸುತ್ತಲೂ ಯಾವುದೇ ಬಟ್ಟೆ ಅಡ್ಡ ಕಟ್ಟದಿರುವುದರಿಂದ ದೂಳು ನೇರವಾಗಿ ವಾರ್ಡ್ ಅನ್ನು ಆವರಿಸಿದೆ. ಹೆರಿಗೆಗಾಗಿ ಬರುವವರಿಗೆ ಆಸ್ಪತ್ರೆಯ ದಶಮಾನೋತ್ಸವದ ಸಂಭ್ರಮವಿರದೆ ಧೂಳಿನ ಅಭಿಷೇಕವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.