ಮೈಸೂರು: ‘ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ರೋಬೊಟಿಕ್ ತಂತ್ರಜ್ಞಾನ ಯಶಸ್ವಿಯಾಗಿ ಬಳಸಲಾಗಿದ್ದು, ರೋಗಿಯು ಗುಣಮುಖರಾಗಿದ್ದಾರೆ’ ಎಂದು ಇಲ್ಲಿನ ‘ನಾರಾಯಣ ಹೆಲ್ತ್’ ಆಸ್ಪತ್ರೆಯ ಕನ್ಸಲ್ಟಂಟ್ ಸರ್ಜಿಕಲ್ ಆಂಕಲಜಿಸ್ಟ್ ಡಾ.ಕೆ.ಆರ್.ಸುಹಾಸ್ ತಿಳಿಸಿದರು.
‘ಕೆ.ಆರ್.ನಗರದ 40 ವರ್ಷ ವಯಸ್ಸಿನ ಮಹಿಳೆಗೆ ನಾಲಿಗೆಯ ಹಿಂಭಾಗದಲ್ಲಿ ಕ್ಯಾನ್ಸರ್ ಗೆಡ್ಡೆ ಬೆಳೆದಿರುವುದು ಪತ್ತೆಯಾಗಿತ್ತು. ತಂಬಾಕು ಸೇವನೆಯಿಂದ ಸಮಸ್ಯೆಗೆ ಒಳಗಾಗಿದ್ದರು. ಇದಕ್ಕಾಗಿ ನಾವು ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ಅತ್ಯಾಧುನಿಕ ರೊಬೊಟಿಕ್ ಸರ್ಜರಿ ತಂತ್ರ ಬಳಸಿಕೊಂಡು ನಿರ್ವಹಿಸಿದ್ದೇವೆ. ಮಹಿಳೆಗಿದ್ದ ಸಮಸ್ಯೆ ಪರಿಣಾಮಕಾರಿ ಬಗೆಹರಿಸಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದರು.
‘ಈ ರೊಬೊಟಿಕ್ ಸರ್ಜರಿ ತಂತ್ರ ಹೊಸ ರೀತಿಯ ವಿಧಾನವಾಗಿದೆ. ಇದರಲ್ಲಿ ಕಾರ್ಯನಿರ್ವಹಿಸಲು ರೋಬೊಟ್ ಬಳಸಲಾಗುತ್ತದೆ. ಅದನ್ನು ನಾನು ನಿರ್ವಹಿಸಿದೆ. ಗೆಡ್ಡೆ ತೆಗೆದು ಹಾಕಲು ಯಾವುದೇ ದೊಡ್ಡ ಛೇದನದ ಅಗತ್ಯವಿರಲಿಲ್ಲ. ರೋಗಿಯು ಬಹಳ ತ್ವರಿತವಾಗಿ ಚೇತರಿಸಿಕೊಂಡಿದ್ದು, ಎರಡು ವಾರಗಳಲ್ಲಿ ಸಾಮಾನ್ಯ ಚಟುವಟಿಕೆಗಳಿಗೆ ಅವರು ಮರಳಲು ಸಾಧ್ಯವಾಗಿದೆ. ಮೈಸೂರಿನ ತಂಡ ಇದೇ ಮೊದಲ ಬಾರಿಗೆ ಇಂತಹ ಶಸ್ತ್ರಚಿಕಿತ್ಸೆ ಮಾಡಿದೆ’ ಎಂದು ತಿಳಿಸಿದರು.
ನಾರಾಯಣ ಆಸ್ಪತ್ರೆಯ ಕ್ಲಿನಿಕಲ್ ನಿರ್ದೇಶಕ ಡಾ.ಎಂ.ಎನ್.ರವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.