ADVERTISEMENT

ಮೈಸೂರು ಡಿಸಿ ನಿವಾಸದಲ್ಲಿ ಅನುಮತಿಯಿಲ್ಲದೇ ಈಜುಕೊಳ ನಿರ್ಮಾಣ: ತನಿಖಾ ವರದಿ

ಪಾರಂಪರಿಕ ರಕ್ಷಣಾ ಸಮಿತಿ ಅನುಮೋದನೆ ಪಡೆದಿಲ್ಲ: ತನಿಖಾ ವರದಿಯಲ್ಲಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 2:45 IST
Last Updated 23 ಜೂನ್ 2021, 2:45 IST
ಜಿಲ್ಲಾಧಿಕಾರಿ ನಿವಾಸದಲ್ಲಿ ನಿರ್ಮಾಣಗೊಂಡಿರುವ ಈಜುಕೊಳ
ಜಿಲ್ಲಾಧಿಕಾರಿ ನಿವಾಸದಲ್ಲಿ ನಿರ್ಮಾಣಗೊಂಡಿರುವ ಈಜುಕೊಳ   

ಮೈಸೂರು: ಮೈಸೂರು ಜಿಲ್ಲಾಧಿಕಾರಿ ನಿವಾಸ ‘ಜಲಸನ್ನಿಧಿ’ಯಲ್ಲಿ ಈಜುಕೊಳ ನಿರ್ಮಾಣ ಮಾಡಲು ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮತಿಯನ್ನೇ ಪಡೆದಿಲ್ಲ ಎಂದು ಪ್ರಾದೇಶಿಕ ಆಯುಕ್ತರ ತನಿಖಾ ವರದಿ ಹೇಳಿದೆ.

ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್‌ ಅವರು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿರುವ ವರದಿಯು ಮಾಧ್ಯಮಗಳಿಗೆ ಸೋರಿಕೆಯಾಗಿದ್ದು, ಪ್ರಮುಖವಾಗಿ 6 ನ್ಯೂನತೆಗಳು ತನಿಖೆ ವೇಳೆ ಕಂಡುಬಂದಿರುವುದಾಗಿ ತಿಳಿಸಿದೆ.

ನಗರಾಭಿವೃದ್ಧಿ ಇಲಾಖೆಯು 2020ರ ಏ. 21ರಂದು ಹೊರಡಿಸಿದ ಅಧಿಸೂಚನೆಯಂತೆ ಪಾರಂಪರಿಕ ಕಟ್ಟಡ
ಗಳ ಸಂರಕ್ಷಣೆ, ನವೀಕರಣ ಕೆಲಸ ಮಾಡಬೇಕಾದರೆ ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮೋದನೆ ಪಡೆಯಬೇಕು. ಆದರೆ, ಈಜುಕೊಳ ನಿರ್ಮಾಣಕ್ಕೆ ಅನುಮೋದನೆ ಪಡೆದಿಲ್ಲ ಎಂದಿದೆ.

ಈಜುಕೊಳ ನಿರ್ಮಾಣಕ್ಕೆ ₹32.55 ಲಕ್ಷ ಮೊತ್ತಕ್ಕೆ ಅಂದಾಜುಪಟ್ಟಿ ತಯಾರಿಸಿದ್ದು, ಇದಕ್ಕೆ ಲೋಕೋಪಯೋಗಿ ಇಲಾಖೆಯ ಒಪ್ಪಿಗೆ ಪಡೆದುಕೊಂಡಿಲ್ಲ. ಪೂರ್ವಭಾವಿ ಆಡಳಿತಾತ್ಮಕ ಮಂಜೂರಾತಿ ಪಡೆದಿಲ್ಲ. ನಿರ್ಮಾಣದ ಕುರಿತ ಕಾರ್ಯಾದೇಶ ಇರುವುದಿಲ್ಲ. ಕಾಮಗಾರಿಗೆ ಒಪ್ಪಂದ ಪತ್ರಗಳೂ ಇರುವುದಿಲ್ಲ ಎಂಬ ಅಂಶ ವರದಿಯಲ್ಲಿದೆ.

‘ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದಆವರಣದಲ್ಲಿ ಈಜುಕೊಳ ನಿರ್ಮಾಣ ಆಗಿರುವುದರಿಂದ, ಸಾರ್ವಜನಿರಿಗೆ ಉಪಯೋಗಿಸಲು ಸಾಧ್ಯವಿಲ್ಲ. ಎಲ್ಲ ಅಂಶಗಳನ್ನು ಗಮನಿಸಿದಾಗ, ಈ ನಿರ್ಮಾಣ ಕಾರ್ಯದ ಹಿಂದೆ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ’ ಎಂದು ವರದಿ ಹೇಳಿದೆ.

ರೋಹಿಣಿ ಸಿಂಧೂರಿ ಅವರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ, ‘ಜನಸನ್ನಿಧಿ’ ಆವರಣದಲ್ಲಿ ಅನುಮತಿ ಪಡೆಯದೆ ಈಜುಕೊಳ ನಿರ್ಮಿಸಿದ್ದ ಕುರಿತಂತೆ ಶಾಸಕ ಸಾ.ರಾ.ಮಹೇಶ್‌, ಜೆಡಿಎಸ್‌ ಮುಖಂಡ ಕೆ.ವಿ.ಮಲ್ಲೇಶ್‌ ಮತ್ತು ತುಮಕೂರಿನ ವಿಶ್ವಮಾನವ ಹಕ್ಕುಗಳ ಸಂಘಟನೆಯ ಅಧ್ಯಕ್ಷ ಸಿದ್ದಲಿಂಗೇಗೌಡ ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಸೂಚನೆಯಂತೆ ಪ್ರಾದೇಶಿಕ ಆಯುಕ್ತರು ತನಿಖೆ ನಡೆಸಿದ್ದರು. ‘ತನಿಖೆಯ ವರದಿಯನ್ನು ಶನಿವಾರವೇ (ಜೂನ್‌ 19) ಸಲ್ಲಿಸಿದ್ದೇನೆ’ ಎಂದಷ್ಟೇ ಜಿ.ಸಿ.ಪ್ರಕಾಶ್‌ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.