ADVERTISEMENT

ಚಾಮುಂಡಿ ಬೆಟ್ಟಕ್ಕೆ ರೋಪ್‌ ವೇಗೆ ಸಿದ್ಧ, ಅಡ್ಡಿಪಡಿಸಬಾರದಷ್ಟೆ–ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2023, 15:39 IST
Last Updated 23 ಡಿಸೆಂಬರ್ 2023, 15:39 IST
ಜಾರ್ಜ್‌ ರಕ್ಷಣೆಗೆ ಸರ್ಕಾರ ಸಿದ್ಧ: ಸಿಎಂ ಸಿದ್ದರಾಮಯ್ಯ
ಜಾರ್ಜ್‌ ರಕ್ಷಣೆಗೆ ಸರ್ಕಾರ ಸಿದ್ಧ: ಸಿಎಂ ಸಿದ್ದರಾಮಯ್ಯ   

ಮೈಸೂರು: ‘ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣಕ್ಕೆ ನಾವು ತಯಾರಾಗಿದ್ದೇವೆ. ಆದರೆ, ಪರಿಸರವಾದಿಗಳು ಸೇರಿದಂತೆ ಯಾರೂ ಅಡ್ಡಿಪಡಿಸಬಾರದಷ್ಟೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಲ್ಲಿನ ವಿಜಯನಗರದ ಬಂಟರ ಭವನದಲ್ಲಿ ಶನಿವಾರ ನಡೆದ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಹೋಟೆಲ್ ಮಾಲೀಕರ ಸಂಘದವರ ಮನವಿಗೆ ಅವರು ‍ಪ್ರತಿಕ್ರಿಯಿಸಿದರು.

‘ಹಿಂದೆಯೇ ರೋಪ್ ವೇ ಮಾಡಲು ಮುಂದಾಗಿದ್ದೆವು. ಆದರೆ, ಪರಿಸರವಾದಿಗಳು ಅಡ್ಡ ಬಂದರು. ನೀವು ಅವರಿಗೆ ತಿಳಿಹೇಳಿ’ ಎಂದು ಹೋಟೆಲ್ ಮಾಲೀಕರ ಸಂಘದವರಿಗೆ ತಿಳಿಸಿದರು.

ADVERTISEMENT

‘ಚಿತ್ರನಗರಿಯನ್ನು ಇಮ್ಮಾವು ಕೈಗಾರಿಕಾ ಪ್ರದೇಶದಲ್ಲೇ ನಿರ್ಮಿಸಲಾಗುವುದು. ಸ್ಥಳಾಂತರಿಸುವುದಿಲ್ಲ. ಬಜೆಟ್‌ನಲ್ಲೂ ಹೇಳಿದ್ದೇನೆ’ ಎಂದರು.

‘ನಾನು ನಗರದಲ್ಲಿ ವಿದ್ಯಾಭ್ಯಾಸ ಮಾಡುವಾಗ ಹೋಟೆಲ್‌ಗಳಲ್ಲೇ ಊಟ, ಉಪಾಹಾರ ಮಾಡುತ್ತಿದ್ದೆ. ಚೆನ್ನಾಗಿರುವಲ್ಲಿಗೆ ಹುಡುಕಿಕೊಂಡು ಹೋಗುತ್ತಿದ್ದೆ. ರಾತ್ರಿ ಮಾಂಸಾಹಾರಿ ಹೋಟೆಲ್‌ ಹುಡುಕುತ್ತಿದ್ದೆ’ ಎಂದು ವಿದ್ಯಾರ್ಥಿ ಜೀವನದ ದಿನಗಳನ್ನು ನೆನೆದರು.

‘ತಿಂಗಳ ಕೊನೆಯಲ್ಲಿ ಅಥವಾ ಹಣ ಇಲ್ಲದಿದ್ದಾಗ, ರೂಂ ಬಿಟ್ಟು ಹೊರ ಬರುತ್ತಲೇ ಇರಲಿಲ್ಲ’ ಎಂದು ತಿಳಿಸಿದರು.

ಎಲ್ಲ ಕ್ಷೇತ್ರಕ್ಕೂ ಅನುಕೂಲ:

‘ಮೈಸೂರು ಪ್ರವಾಸಿ ತಾಣವಾದ್ದರಿಂದ ಇಲ್ಲಿಗೆ ಬರುವವರ ಆತಿಥ್ಯ ಬಹಳ ಮುಖ್ಯ. ಈ ಕೆಲಸವನ್ನು ಹೋಟೆಲ್‌ ಉದ್ಯಮದವರು ಮಾಡುತ್ತಿದ್ದೀರಿ. ಅದೂ ದೊಡ್ಡ ಸಮಾಜಸೇವೆ. ನಮ್ಮ ಯೋಜನೆಗಳ ಮೂಲಕ ಜನರ ಕೈಯಲ್ಲಿ ಹಣ ಓಡಾಡುವಂತೆ ಮಾಡಿದ್ದೇವೆ. ಇದರಿಂದ ಹೋಟೆಲ್ ಸೇರಿದಂತೆ ಎಲ್ಲ ಉದ್ಯಮಗಳಿಗೂ ಅನುಕೂಲವಾಗಿದೆ’ ಎಂದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಬೇಡಿಕೆಗಳನ್ನು ಮಂಡಿಸಿದರು. ‘ಮೈಸೂರು ಭಾಗದಲ್ಲಿ ಅಂತರರಾಷ್ಟ್ರೀಯ ಮಟ್ಟದ ಡಿಸ್ನಿಲ್ಯಾಂಡ್‌ ಸ್ಥಾಪಿಸಬೇಕು. ಚಾಮುಂಡಿಬೆಟ್ಟಕ್ಕೆ ರೋಪ್ ವೇ ನಿರ್ಮಿಸಬೇಕು. ಇಮ್ಮಾವಿನಲ್ಲೇ ಚಿತ್ರನಗರಿಯನ್ನು ತ್ವರಿತವಾಗಿ ಸ್ಥಾಪಿಸಬೇಕು. ಹೋಟೆಲ್ ಕೆಲಸಕ್ಕೆಂದು ಹಳ್ಳಿಗಳಿಂದ ಬರುವವರಿಗೆ ತರಬೇತಿ ನೀಡಲು ಸರ್ಕಾರದಿಂದ ಕೇಂದ್ರ ಆರಂಭಿಸಬೇಕು. ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಅಂತರರಾಷ್ಟ್ರೀಯ ಮಟ್ಟದ ಕನ್ವೆನ್ಷನ್‌ ಹಾಲ್ ನಿರ್ಮಿಸಬೇಕು. ಉದ್ದಿಮೆ ಪರವಾನಗಿ ಹಾಗೂ ನವೀಕರಣಕ್ಕೆ ಇರುವ ನಿಯಮಗಳನ್ನು ಸರಳೀಕರಿಸಬೇಕು. ಮೈಸೂರಿನಲ್ಲಿ ದಿನದ 24 ಗಂಟೆಯೂ ಹೋಟೆಲ್‌ ಉದ್ಯಮಕ್ಕೆ ಅವಕಾಶ ಕೊಡಬೇಕು. ಬಾರ್ ಅಂಡ್ ರೆಸ್ಟೋರೆಂಟ್ ಅವಧಿಯನ್ನು ಒಂದು ಗಂಟೆ ವಿಸ್ತರಿಸಬೇಕು (ಸಿಎಲ್ 7 ಹಾಗೂ 9ಕ್ಕೆ), ದಸರಾ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ಹೋಟೆಲ್ ಮಾಲೀಕರ ಸಂಘದ ಗೌರವ ಕಾರ್ಯದರ್ಶಿ ಜಿ.ಕೆ. ಶೆಟ್ಟಿ ಮಾತನಾಡಿ, ‘20ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಒದಗಿಸಿರುವ ಹೋಟೆಲ್‌ಗಳಿಗೆ ಕೈಗಾರಿಕೆಯ ಸ್ಥಾನಮಾನ ನೀಡಬೇಕು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇದನ್ನು ಹೇಳಲಾಗಿತ್ತು’ ಎಂದು ತಿಳಿಸಿದರು.

‘ಹೋಟೆಲ್‌ ಉದ್ಯಮ ನಡೆಸಲು ವಿವಿಧ 16 ಪರವಾನಗಿ ಪಡೆಯಬೇಕು.‌ ಇದಕ್ಕಾಗಿ ಏಕಗವಾಕ್ಷಿ ವ್ಯವಸ್ಥೆ ಮಾಡಬೇಕು. ಪರವಾನಗಿಯನ್ನು ‌ಒಮ್ಮೆ ಪಡೆದರೆ ಸಾಕು ಎಂಬ ನಿಯಮ ಜಾರಿಗೊಳಿಸಬೇಕು’ ಎಂದು ಕೋರಿದರು.

ಸಂಘದ ಸದಸ್ಯರ ಮಕ್ಕಳಿಗೆ ಶೈಕ್ಷಣಿಕ ಸಾಧನೆಗಾಗಿ ಪ್ರತಿಭಾ ಪುರಸ್ಕಾರ ನೀಡಲಾಯಿತು. 50 ವರ್ಷಗಳಿಂದ ಒಂದೇ ಕಡೆ ಹೋಟೆಲ್ ಉದ್ಯಮ ನಡೆಸುತ್ತಿರುವವರನ್ನು ಸನ್ಮಾನಿಸಲಾಯಿತು. ದಿನದರ್ಶಿಕೆ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಶಾಸಕರಾದ ತನ್ವೀರ್‌ ಸೇಠ್, ಟಿ.ಎಸ್. ಶ್ರೀವತ್ಸ, ಕಾಂಗ್ರೆಸ್ ಮುಖಂಡರಾದ ಸಿ.ಬಸವೇಗೌಡ, ಕೆ.ಮರೀಗೌಡ, ಎಂ.ಕೆ.ಸೋಮಶೇಖರ್‌, ಪದಾಧಿಕಾರಿಗಳಾದ ರವಿಶಾಸ್ತ್ರಿ, ಸುಬ್ರಹ್ಮಣ್ಯ ಆರ್.ತಂತ್ರಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.