ADVERTISEMENT

ಸಿಎಂ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ಖಂಡಿಸಿ ದುಂಡುಮೇಜಿನ ಸಭೆ ಜುಲೈ 13ರಂದು

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 8:18 IST
Last Updated 11 ಜುಲೈ 2024, 8:18 IST
   

ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮುಡಾದವರು ಬದಲಿ ನಿವೇಶನ ನೀಡಿದ ವಿಚಾರದಲ್ಲಿ ಷಡ್ಯಂತ್ರ ನಡೆಸುತ್ತಿರುವುದನ್ನು ಖಂಡಿಸಿ ಹಾಗೂ ಸಾಮಾಜಿಕ ಕಳಕಳಿ ಹೊಂದಿರುವ ಹಿಂದುಳಿದ ವರ್ಗದ ನಾಯಕನನ್ನು ಬೆಂಬಲಿಸಿ ಜುಲೈ 13ರಂದು ಬೆಳಿಗ್ಗೆ 11ಕ್ಕೆ ನಗರದ ಗುರು ರೆಸಿಡೆನ್ಸಿ ಹೋಟೆಲ್‌ನಲ್ಲಿ ದುಂಡು ಮೇಜಿನ ಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಅಧ್ಯಕ್ಷ ಕೆ.ಎಸ್. ಶಿವರಾಮು ತಿಳಿಸಿದರು.

ಇಲ್ಲಿ ‍ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಹಿಂದುಳಿದ ವರ್ಗಗಳ ಜಿಲ್ಲಾ ಘಟಕಗಳ ಅಧ್ಯಕ್ಷರು, ಪ್ರಮುಖರು ಭಾಗವಹಿಸಲಿದ್ದಾರೆ. ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವ ಬಗ್ಗೆ ನಿರ್ಧರಿಸಲಾಗುವುದು’ ಎಂದರು.

‘ಮುಡಾದಲ್ಲಿ ನಡೆದಿರುವ ಅಕ್ರಮಗಳ ಕುರಿತು ಬಹಳಷ್ಟು ನಾಯಕರು ಈಗ ದೊಡ್ಡ ‌ದನಿಯಲ್ಲಿ ಮಾತನಾಡುತ್ತಿದ್ದಾರೆ. 2021ರಲ್ಲೇ ನಾವು ಹೋರಾಟ ಮಾಡಿ, ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರಿಗೆ ದಾಖಲೆ ಸಮೇತ ದೂರು‌ ನೀಡಿದ್ದೆವು. ಆದರೆ, ಕ್ರಮ ಕೈಗೊಳ್ಳಲಿಲ್ಲ. ಇಲ್ಲಿ ಮಹಾನ್ ಭ್ರಷ್ಟಾಚಾರ ಆಗಿದ್ದರೆ ಅದರ ಪಿತಾಮಹ ಬಿ.ವೈ.ವಿಜಯೇಂದ್ರ. ಆ ಗ್ಯಾಂಗ್ ಸೇರಿ ಪ್ರಾಧಿಕಾರವನ್ನು ದುಃಸ್ಥಿತಿಗೆ ತಂದಿಟ್ಟಿದೆ’ ಎಂದು ದೂರಿದರು.

ADVERTISEMENT

‘ಆಯುಕ್ತ ಸ್ಥಾನಕ್ಕೆ ಡಿ.ಬಿ.ನಟೇಶ್ ಅವರನ್ನು ‌ನೇಮಕ‌ ಮಾಡಿದ್ದೇ ಬಿಜೆಪಿ ಸರ್ಕಾರ. ದಾಖಲೆಗಳ ಸಹಿತ ಸರ್ಕಾರಕ್ಕೆ ದೂರು ಸಲ್ಲಿಸಿ, ಸಿಬಿಐ ತನಿಖೆಗೂ ಆಗ್ರಹಿಸಿದ್ದೆವು. ಸಾಹಿತಿಗಳು ಹಾಗೂ ಚಿಂತಕರು ಬೆಂಬಲ ಕೊಟ್ಟಿದ್ದರು. ಆಗೇಕೆ ವಿಜಯೇಂದ್ರ ಮಾತನಾಡಿರಲಿಲ್ಲ? ಆಗ ನನಗೆ ಕೊಲೆ ಬೆದರಿಕೆಯೂ ಬಂದಿತ್ತು. ಯಡಿಯೂರಪ್ಪ ಸರ್ಕಾರ ಇದ್ದಾಗಲೇ‌ ಮುಡಾದಲ್ಲಿ ಬಹಳಷ್ಟು ‌ಭ್ರಷ್ಟಾಚಾರ ನಡೆದಿದೆ’ ಎಂದು ಆರೋಪಿಸಿದರು.

‘ಬಿಜೆಪಿಯವರು, ನಾವು ದಾಖಲೆ ಕೊಟ್ಟಾಗ ಸುಮ್ಮನಿದ್ದು, ಈಗ ಸಿಬಿಐಗೆ ವಹಿಸುವಂತೆ ಕೇಳಲು ನೈತಿಕತೆ ಇದೆಯೇ?‌ ವಿಜಯೇಂದ್ರ ಬಹಿರಂಗ ಚರ್ಚೆಗೆ ಬರಲಿ’ ಎಂದು ಸವಾಲೆಸೆದರು.

‘ನಟೇಶ್ ಆಯುಕ್ತರಾಗಿ ಬಂದ ನಂತರದಿಂದ ಇಲ್ಲಿಯವರೆಗೆ ಆಗಿರುವ ಹಗರಣ– ಅಕ್ರಮಗಳೆಲ್ಲವನ್ನೂ ತನಿಖೆ ನಡೆಸಬೇಕು. ಎಲ್ಲ ಬದಲಿ ನಿವೇಶನಗಳನ್ನೂ ವಾಪಸ್ ಪಡೆದುಕೊಂಡು ಬಡವರಿಗೆ ಹಂಚಬೇಕು.‌ ಹಗರಣಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಇರುವ ದಾಖಲೆಗಳ‌ನ್ನು ಸರ್ಕಾರಕ್ಕೆ ನೀಡಲಿದ್ದೇನೆ’ ಎಂದರು.

ವಿವಿಧ ಸಮಾಜಗಳ ಮುಖಂಡರಾದ ಯೋಗೇಶ್ ಉಪ್ಪಾರ, ರವಿನಂದನ್, ಮೊಗಣ್ಣಾಚಾರ್, ರಾಜೇಶ್, ಲೋಕೇಶ್ ಹಾಗೂ ಎಚ್.ಎಸ್.ಪ್ರಕಾಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.