ಮೈಸೂರು: ಮುಂಗಾರಿನ ತುಂತುರು ಮಳೆ ಹೊರಗೆ ಜಿನುಗುತ್ತಿದ್ದರೆ, ಒಳಗೆ ಸಾಹಿತ್ಯದ ವಿಚಾರ ಗೋಷ್ಠಿಗಳಲ್ಲಿ ಚರ್ಚೆಯ ಕಾವೇರಿತ್ತು. ರಿಕ್ಕಿಕೇಜ್ ಸಂಗೀತ ಕೇಳುವ, ಶಿರಸಿಯ ಕಲಾವಿದರ ಯಕ್ಷಗಾನವನ್ನು ನೋಡುವ ಕಾತರವೂ ಸಹೃದಯರಲ್ಲಿ ತುಂಬಿತ್ತು.
ನಗರದ ಸದರ್ನ್ ಸ್ಟಾರ್ ಹೋಟೆಲ್ ನಲ್ಲಿ ಶನಿವಾರ ಗರಿಬಿಚ್ಚಿದ 6ನೇ ಆವೃತ್ತಿಯ 'ಮೈಸೂರು ಸಾಹಿತ್ಯ ಸಂಭ್ರಮ'ದಲ್ಲಿ ಕಂಡ ಚಿತ್ರಣವಿದು.
ಮೈಸೂರು ಲಿಟ್ರರಿ ಫೋರಂ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ಸ್ ಆಯೋಜಿಸಿದ್ದ ಉತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, 'ಕೋವಿಡ್ ನಂತರ ಮೈಸೂರಿನಲ್ಲಿ ಮತ್ತೆ ಸಾಹಿತ್ಯ ಉತ್ಸವ ನಡೆಯುತ್ತಿರುವುದು ಸಂತಸ ತಂದಿದೆ. ಭಯ, ಆತಂಕಗಳನ್ನು ಮೀರಿ ಸಾಹಿತ್ಯ, ಕಲೆಗಳನ್ನು ಮತ್ತೆ ದೇನಿಸುತ್ತ, ಭವಿಷ್ಯದ ಕಡೆಗೆ ಹೊರಳುವ ಅಪೂರ್ವ ಅವಕಾಶ ಇದಾಗಿದೆ' ಎಂದರು.
ಟ್ರಸ್ಟ್ ಅಧ್ಯಕ್ಷೆ ಶುಭಾ ಸಂಜಯ್ ಅರಸ್ ಮಾತನಾಡಿ, 'ಕೋವಿಡ್ ಸಂದರ್ಭದಲ್ಲೂ ಉತ್ಸವ ನಡೆಸಲಾಗಿತ್ತು. ಉತ್ಸವವು ಓದುವ ಸಂಸ್ಕೃತಿಯನ್ನು ಬೆಳೆಸುವುದಲ್ಲದೆ, ಪ್ರತಿಯೊಬ್ಬರ ಕಲ್ಪನೆಗಳನ್ನು ಚಲನಶೀಲಗೊಳಿಸುವ ಪ್ರಯತ್ನವಾಗಿದೆ. ಉತ್ಸವ ಒಂದು ವರ್ಗಕ್ಕೆ ಒಳಗೊಂಡಿಲ್ಲ. ಎಲ್ಲರನ್ನೂ ಒಳಗೊಂಡಿದೆ' ಎಂದರು.
ಬೂಕರ್ ಪ್ರಶಸ್ತಿ ವಿಜೇತೆ ಗೀತಾಂಜಲಿ ಶ್ರೀ, ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿಕೇಜ್, ಲೇಖಕ ಅರುಣ್ ರಾಮನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.