ಮೈಸೂರು: ಸರ್ಕಾರಕ್ಕೆ ತೆರಿಗೆ ವಂಚಿಸಿ ಅನಧಿಕೃತವಾಗಿ ನಗರಕ್ಕೆ ಬರುವ ಜಲ್ಲಿ ಮತ್ತು ಎಂ–ಸ್ಯಾಂಡ್ ಸಾಗಣೆ ಮೇಲೆ ಹದ್ದಿನಕಣ್ಣು ನೆಟ್ಟಿರುವ ಜಿಲ್ಲಾ ಪೊಲೀಸರು ಚೆಕ್‌ಪೋಸ್ಟ್ ಹಾಕಿ ತಪಾಸಣೆಯನ್ನು ಬಿಗಿಗೊಳಿಸಿದ್ದಾರೆ. ಕೇವಲ 15 ದಿನಗಳಲ್ಲಿ 15 ಲಾರಿ ಹಾಗೂ ಟಿಪ್ಪರ್‌ಗಳನ್ನು ವಶಕ್ಕೆ ಪಡೆದು, ₹5 ಲಕ್ಷಕ್ಕೂ ಅಧಿಕ ದಂಡ ವಿಧಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅನಧಿಕೃತ ಕ್ರಷರ್‌ಗಳ ಮೇಲೆ ಅಲ್ಲಿನ ಪೊಲೀಸರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಸ್ಥಗಿತಗೊಳಿಸಿದ್ದಾರೆ. ಇದರಿಂದ ಶ್ರೀರಂಗಪಟ್ಟಣ, ಪಾಂಡವಪುರಗಳಿಂದ ನಗರಕ್ಕೆ ಬರುತ್ತಿದ್ದ ಜಲ್ಲಿ ಮತ್ತು ಎಂಸ್ಯಾಂಡ್‌ಗಳ ಆವಕ ಕುಸಿದಿದೆ. ಹೀಗಾಗಿ, ಸಹಜವಾಗಿಯೇ ನಗರದೊಳಗೆ ಬೇಡಿಕೆ ಹೆಚ್ಚಿದ್ದು, ಪೂರೈಕೆ ಕಡಿಮೆಯಾಗಿದೆ.
ಅದರ ಲಾಭ ಪಡೆಯಲು ಹವಣಿಸಿದ ಹಲವು ಮಂದಿ ಸರ್ಕಾರಕ್ಕೆ ತೆರಿಗೆ ನೀಡದೇ, ಯಾವುದೇ ಪರವಾನಗಿಯನ್ನೂ ಪಡೆದುಕೊಳ್ಳದೇ ನಂಜನಗೂಡು ಹಾಗೂ ಚಾಮರಾಜನಗರ ಜಿಲ್ಲೆಯ ಹಲವೆಡೆ ಇರುವ ಕ್ರಷರ್‌ಗಳಿಂದ ಜಲ್ಲಿ ಹಾಗೂ ಎಂ–ಸ್ಯಾಂಡ್ ತುಂಬಿಕೊಂಡು ನಗರಕ್ಕೆ ಬರುವುದು ಇತ್ತೀಚೆಗೆ ಹೆಚ್ಚಾಗಿತ್ತು.
ಇಲ್ಲಿನ ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಇವುಗಳನ್ನು ಪೂರೈಕೆ ಮಾಡುತ್ತಿದ್ದರು. ಆದರೆ, ಸರ್ಕಾರಕ್ಕೆ ಬರಬೇಕಿದ್ದ ತೆರಿಗೆಯನ್ನು ಪಾವತಿಸುತ್ತಿರಲಿಲ್ಲ.
ಈ ವಿಷಯ ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಅವರು ಸ್ವತಃ ಕಾರ್ಯಾಚರಣೆಗೆ ಇಳಿದರು. ಅನಧಿಕೃತವಾಗಿ ನಗರಕ್ಕೆ ಬರುತ್ತಿದ್ದ 3 ಲಾರಿಗಳನ್ನು ತಡೆದು ಪರಿಶೀಲಿಸಿ, ಪ್ರಕರಣ ದಾಖಲಿಸಿದರು.
ಮೈಸೂರು ದಕ್ಷಿಣ ಪೊಲೀಸರೂ ಅದಕ್ಕೆಂದೇ ವಿಶೇಷ ಚೆಕ್‌ಪೋಸ್ಟ್‌ಗಳನ್ನು ಹಾಕಿಕೊಂಡು ಹದ್ದಿನ ಕಣ್ಣಿಟ್ಟರು. ಜಲ್ಲಿ ಮತ್ತು ಎಂ–ಸ್ಯಾಂಡ್‌ಗಳನ್ನು ತುಂಬಿಕೊಂಡು ಬರುತ್ತಿದ್ದ ಎಲ್ಲ ಲಾರಿಗಳು ಹಾಗೂ ಟಿಪ್ಪರ್‌ಗಳನ್ನು ಪರಿಶೀಲಿಸತೊಡಗಿದರು. ಈ ವೇಳೆ ಒಟ್ಟು 15 ವಾಹನಗಳನ್ನು ವಶಕ್ಕೆ ಪಡೆದು ಅದನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದರು.
₹5 ಲಕ್ಷಕ್ಕೂ ಹೆಚ್ಚು ದಂಡ
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಇಲಾಖೆಯ ಹಿರಿಯ ಭೂವಿಜ್ಞಾನಿ ರಶ್ಮಿ, ‘ಪೊಲೀಸರು ವಶಕ್ಕೆ ನೀಡಿದ ಲಾರಿಗಳ ಮಾಲೀಕರಿಗೆ ₹5 ಲಕ್ಷಕ್ಕೂ ಹೆಚ್ಚಿನ ದಂಡ ವಿಧಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಸದ್ಯ ಯಾವುದೇ ಅನಧಿಕೃತ ಕ್ರಷರ್‌ಗಳು ನಡೆಯುತ್ತಿಲ್ಲ’ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಮೈಸೂರು ದಕ್ಷಿಣ ಠಾಣೆಯ ಇನ್‌ಸ್ಪೆಕ್ಟರ್ ಶಶಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಎಲ್ಲಿಂದ ಬರುತ್ತಿತ್ತು?
ವಶಪಡಿಸಿಕೊಂಡಿರುವ ಜಲ್ಲಿ ಹಾಗೂ ಎಂ–ಸ್ಯಾಂಡ್‌ಗಳಲ್ಲಿ ಬಹುತೇಕ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕ್ರಷರ್‌ಗಳಿಂದ ಹಾಗೂ ನಂಜನಗೂಡು ತಾಲ್ಲೂಕಿನ ಕೆಲವು ಕ್ರಷರ್‌ಗಳಿಂದಲೂ ತರಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ಒಂದು ಮೆಟ್ರಿಕ್ ಟನ್ ಜಲ್ಲಿಗೆ ₹70 ತೆರಿಗೆಯಷ್ಟೇ ಇದೆ. ಆದರೆ, ಅದನ್ನು ಪಾವತಿಸದೇ ತರುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕೆಲವರು ನಷ್ಟ ಉಂಟು ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.