ADVERTISEMENT

ಜಾತಿ ಹೆಸರಿನಲ್ಲಿ ಸಮಾಜ ವಿಘಟನೆ ಸಲ್ಲ: ಆರ್‌ಎಸ್‌ಎಸ್ ಪ್ರಮುಖ್ ಉಮೇಶ್

ಆರ್‌ಎಸ್‌ಎಸ್ ಪಥಸಂಚಲನ; ವಿವಿಧ ಶಾಖೆಗಳ ನೂರಾರು ಮಂದಿ ಭಾಗಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 7:51 IST
Last Updated 21 ಅಕ್ಟೋಬರ್ 2024, 7:51 IST
<div class="paragraphs"><p>ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ವಿಜಯದಶಮಿ ಪ್ರಯುಕ್ತ ಮೈಸೂರಿನ ಜಯನಗರದಲ್ಲಿ ಭಾನುವಾರ ನಡೆದ ವಾರ್ಷಿಕ ಪಥಸಂಚಲನದಲ್ಲಿ ಸ್ವಯಂ ಸೇವಕರು ಗಣವೇಷಧಾರಿಗಳಾಗಿ ಪಾಲ್ಗೊಂಡಿದ್ದರು</p></div>

ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ವಿಜಯದಶಮಿ ಪ್ರಯುಕ್ತ ಮೈಸೂರಿನ ಜಯನಗರದಲ್ಲಿ ಭಾನುವಾರ ನಡೆದ ವಾರ್ಷಿಕ ಪಥಸಂಚಲನದಲ್ಲಿ ಸ್ವಯಂ ಸೇವಕರು ಗಣವೇಷಧಾರಿಗಳಾಗಿ ಪಾಲ್ಗೊಂಡಿದ್ದರು

   

– ಪ್ರಜಾವಾಣಿ ಚಿತ್ರ

ಮೈಸೂರು: ‘ಜಾತಿ ಹೆಸರಿನಲ್ಲಿ ಸಮಾಜ ವಿಘಟನೆ ಮಾಡುವ ವಿಕೃತಿ ತಡೆಯಬೇಕು’ ಎಂದು ಆರ್‌ಎಸ್‌ಎಸ್‌ ಕರ್ನಾಟಕ ದಕ್ಷಿಣ ಪ್ರಾಂತದ ಕಾಲೇಜು ವಿದ್ಯಾರ್ಥಿ ಪ್ರಮುಖ್ ಉಮೇಶ್ ಹೇಳಿದರು.

ADVERTISEMENT

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ನಗರ ಘಟಕದಿಂದ ವಿಜಯದಶಮಿ ಪ್ರಯುಕ್ತ ನಗರದಲ್ಲಿ ಭಾನುವಾರ ಪಥಸಂಚಲನಕ್ಕೆ ಮುನ್ನ ಇಲ್ಲಿನ ಕುವೆಂಪುನಗರದ ಕನ್ನೇಗೌಡ ಕ್ರೀಡಾಂಗಣದಲ್ಲಿ ಸಂಘದ ವಿವಿಧ ಶಾಖೆಗಳ ನೂರಾರು ಸದಸ್ಯರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಇಡೀ ಜಗತ್ತು ಆರ್ಯಮಯವಾಗಬೇಕು. ಯಾರು ಸಮಾಜಕ್ಕಾಗಿ ಬದುಕುತ್ತಾನೋ ಆತನೆ ಆರ್ಯ. ಭಾರತ ಭಾರತವಾಗಿ ಉಳಿದಾಗ ಮಾತ್ರ ವಿಶ್ವ ಉಳಿಯುತ್ತದೆ. ಇವತ್ತಿನ ನಮ್ಮ ಯುವ ಜನಾಂಗಕ್ಕೆ ಶ್ರೇಷ್ಠ ಮೌಲ್ಯ ಪರಿಚಯ ಮಾಡಿಕೊಡಲು ನಾವು ಹೊರಟಿದ್ದೇವೆ’ ಎಂದರು.

‘ರಾವಣ, ಕೌರವರ ಸಂಹಾರದ ವೇಳೆ ರಾಮ, ಕೃಷ್ಣ ಜಾತಿ ನೋಡಲಿಲ್ಲ’ ಎಂದು ನುಡಿದರು.

‘ದೇಶದಲ್ಲಿ‌ ಒಂದು ಲಕ್ಷ ಶಾಖೆ, ಪೂರ್ಣ ಪ್ರಮಾಣದ ಕಾರ್ಯಕರ್ತರ ಸಂಖ್ಯೆಯನ್ನು ಹೆಚ್ಚಿಸಿ, ಸಾಮಾಜಿಕ ಪರಿವರ್ತನೆಗೆ ಮುಂದಾಗುವುದು ನಮ್ಮ ಆದ್ಯತೆ. ಸಂಘದ ಸ್ವಯಂ ಸೇವಕರು ದೇಶಕ್ಕಾಗಿ ಸಮರ್ಪಿಸಿಕೊಂಡಿದ್ದಾರೆ. ಇಂದು ಜಗತ್ತಿಗೆ ಸಂಘ ಬೇಕಾಗಿದೆ. ಹಿಂದೂ ಸಮಾಜ ರಾಷ್ಟ್ರದ ಸಂರಕ್ಷಣೆ ಮಾಡುತ್ತಿದೆ. ಬಲದ ಆರಾಧನೆಯಿಂದ ಧರ್ಮ ಸಂರಕ್ಷಣೆ ಆಗುತ್ತದೆ’ ಎಂದರು

ಕನ್ನೇಗೌಡ ಕ್ರೀಡಾಂಗಣದಿಂದ ಆರಂಭವಾದ ಪಥಸಂಚಲನವು‌ ಜಯನಗರ 10ನೇ ಕ್ರಾಸ್, 2ನೇ ಕ್ರಾಸ್, ಇಸ್ಕಾನ್ ಮುಂಭಾಗ, ಜಯನಗರ 5ನೇ ಕ್ರಾಸ್, 3ನೇ ಕ್ರಾಸ್ ಮೊದಲಾದ ಪ್ರಮುಖ ಬೀದಿಗಳಲ್ಲಿ ಸಾಗಿ ಪುನಃ  ಕನ್ನೇಗೌಡ ಕ್ರೀಡಾಂಗಣಕ್ಕೆ ಬಂದು ಸೇರಿತು.

‘ಹೂ’ಮಳೆ ಸ್ವಾಗತ: ಪಥಸಂಚಲನದಲ್ಲಿ ಸಂಘದ ಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್‌, ಎಂ.ಎಸ್‌.ಗೋಲ್ವಾಲ್ಕರ್‌ ಭಾವಚಿತ್ರಗಳನ್ನು ಹಾಗೂ ಭಗವಾಧ್ವಜ ಇರಿಸಿಕೊಂಡು ಸಾಗಿದ ಜೀಪ್‌ ಮತ್ತು ಕಾರ್ಯಕರ್ತರಿಗೆ ರಸ್ತೆ ಬದಿ ನಿಂತ ಜನರು ಹೂವಿನಿಂದ ಸ್ವಾಗತಿಸಿದರು.

ಆರ್‌ಎಸ್‌ಎಸ್ ಮೈಸೂರು ಮಹಾನಗರ ಸಂಘಚಾಲಕ ವಾಸುದೇವ್ ಭಟ್, ಬಿಜೆಪಿ ಮುಖಂಡರಾದ ಎಲ್‌.ನಾಗೇಂದ್ರ, ಎಲ್‌.ಆರ್‌.ಮಹದೇವಸ್ವಾಮಿ, ರಾಕೇಶ್‌ ಗೌಡ, ಮೈ.ವಿ.ರವಿಶಂಕರ್‌ ಪಾಲ್ಗೊಂಡರು.

‘ಕುಟುಂಬ ವ್ಯವಸ್ಥೆ ಶಿಥಿಲಕ್ಕೆ ಹುನ್ನಾರ’

‘ದಂಪತಿ ಎಂದರೆ ಶಿವ ಪಾರ್ವತಿ ಸ್ವರೂಪ ಎಂದು ನಂಬಿದ ಹಿಂದೂ ಸಮಾಜ ನಮ್ಮದು. ಆದರೆ ಇಂದು ಲಿವಿಂಗ್ ಟುಗೆದರ್ ತಪ್ಪಲ್ಲ ಎನ್ನುವ ರೀತಿ ವೆಬ್ ಸಿರೀಸ್ ಬಂದಿವೆ. ವಿಚ್ಛೇದನ ಬಹಳ ಆಗುತ್ತಿವೆ. ಕುಟುಂಬ ವ್ಯವಸ್ಥೆ ಶಿಥಿಲಗೊಳಿಸುವ ಹುನ್ನಾರ ನಡೆಯುತ್ತಿದೆ’ ಎಂದು ಕಾಲೇಜು ವಿದ್ಯಾರ್ಥಿ ಪ್ರಮುಖ್ ಉಮೇಶ್ ಆಕ್ರೋಶ ವ್ಯಕ್ತಪಡಿಸಿದರು.

‘ದೇಶದಲ್ಲಿ ಒಂದೆಡೆ ಚಂದ್ರಯಾನ ನಡೆಯುತ್ತಿದೆ ಮತ್ತೊಂದೆಡೆ ಅಸ್ಪೃಶ್ಯತೆಯೂ ಉಳಿದಿದೆ. ನಗರದಲ್ಲಿ ಮನೆ ಬಾಡಿಗೆ ಕೊಡುವಾಗ ನೀವು ಯಾರ ಪೈಕಿ ಅಂತ ಕೇಳೋದು ಬಿಟ್ಟಿಲ್ಲ. ಶ್ರಮಿಕ ವರ್ಗದವರನ್ನು ಗೌರವಿಸುತ್ತಿಲ್ಲ. ಸಾಮರಸ್ಯತೆಗೆ ಮುಂದಾಗಬೇಕು. ಪ್ರತಿ ಮನೆಯಲ್ಲೂ ಕೈ ತೋಟ ಇರಬೇಕು. ಪ್ಲಾಸ್ಟಿಕ್ ಮುಕ್ತವಾಗಿರಬೇಕು. ಸಮಾಜದಲ್ಲಿ ನಾಗರಿಕ ಶಿಷ್ಟಾಚಾರ ಉತ್ತಮವಾಗಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.