ADVERTISEMENT

5 ಲಕ್ಷಕ್ಕೂ ಅಧಿಕ ರುದ್ರಾಕ್ಷಿಗಳಿಂದ ರೂಪಿಸಿದ 21 ಅಡಿ ಎತ್ತರದ ಶಿವಲಿಂಗ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 4:27 IST
Last Updated 16 ಫೆಬ್ರುವರಿ 2023, 4:27 IST
ಮೈಸೂರಿನ ಲಲಿತಮಹಲ್ ಮೈದಾನದಲ್ಲಿ ಬುಧವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ನಿರ್ಮಿಸಿರುವ ರುದ್ರಾಕ್ಷಿ ಶಿವಲಿಂಗವನ್ನು ಮಹಿಳೆಯರು ವೀಕ್ಷಿಸಿ ಸೆಲ್ಫಿ ತೆಗೆದುಕೊಂಡರು/ ಪ್ರಜಾವಾಣಿ ಚಿತ್ರ
ಮೈಸೂರಿನ ಲಲಿತಮಹಲ್ ಮೈದಾನದಲ್ಲಿ ಬುಧವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ನಿರ್ಮಿಸಿರುವ ರುದ್ರಾಕ್ಷಿ ಶಿವಲಿಂಗವನ್ನು ಮಹಿಳೆಯರು ವೀಕ್ಷಿಸಿ ಸೆಲ್ಫಿ ತೆಗೆದುಕೊಂಡರು/ ಪ್ರಜಾವಾಣಿ ಚಿತ್ರ   

ಮೈಸೂರು: ಹೃಷಿಕೇಶ, ಹರಿದ್ವಾರದಿಂದ ತಂದ 5 ಲಕ್ಷಕ್ಕೂ ಅಧಿಕ ರುದ್ರಾಕ್ಷಿಗಳಿಂದ ರೂಪಿಸಿದ 21 ಅಡಿ ಎತ್ತರದ ಶಿವಲಿಂಗ. ಹಿಂಬದಿಯಲ್ಲಿ ಹಿಮವನ್ನೇ ಹೊದ್ದು ನಿಂತಂತೆ ಕಾಣುವ ಕೈಲಾಸ ಪರ್ವತ. ಎದುರಿಗೆ ವಿರಾಜಮಾನವಾದ ನಂದಿ.

ಇದೆಲ್ಲ ಕಂಡುಬಂದಿದ್ದು ನಗರ ಲಲಿತಮಹಲ್‌ ಮೈದಾನದಲ್ಲಿ.

ಮಹಾಶಿವರಾತ್ರಿ ಪ್ರಯುಕ್ತ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆಲನಹಳ್ಳಿ ಸೇವಾ ಕೇಂದ್ರದವರು ನಿರ್ಮಿಸಿದ ‘ಕೈಲಾಸ ಪರ್ವತದೊಂದಿಗಿನ ರುದ್ರಾಕ್ಷಿ ಶಿವಲಿಂಗ’ ನೋಡುಗರಲ್ಲಿ ಭಕ್ತ ಭಾವ ಮೂಡಿಸುತ್ತಿದೆ.

ADVERTISEMENT

ಕೈಲಾಸ ಪರ್ವತದೊಳಗೆ ಗುಹೆಯನ್ನು ಮಾಡಲಾಗಿದ್ದು, ಜ್ಯೋತಿರ್ಲಿಂಗಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಗುಹೆಯ ಗೋಡೆಗಳ ಮೇಲೆ ಬ್ರಹ್ಮಕುಮಾರಿ ಸಂಸ್ಥೆಯ ಆದರ್ಶ, ಉದ್ದೇಶಗಳನ್ನು ಸಾರುವ ಭಿತ್ತಿಚಿತ್ರಗಳಿವೆ. ರಾಜಯೋಗವನ್ನು ವಿವರಿಸುವ, ದೇಹ ಹಾಗೂ ಮನಸ್ಸನ್ನು ನಿಯಂತ್ರಿಸಲು ಅನುಸರಿಸಬೇಕಾದ ಮಾಹಿತಿ ಫಲಕಗಳು ನೋಡುಗರನ್ನು ಕ್ಷಣ ಹೊತ್ತು ನಿಲ್ಲಿಸುತ್ತವೆ. ಸಂಸ್ಥಾಪಕ ಪ್ರಜಾಪಿತ ಬ್ರಹ್ಮ ಬಾಬಾ ಅವರ ಧ್ಯಾನ ಕೊಠಡಿಯನ್ನೂ ನಿರ್ಮಿಸಲಾಗಿದೆ.

ಬ್ರಹ್ಮಕುಮಾರಿಯ ಮೈಸೂರು ಉಪವಲಯದ ಮುಖ್ಯ ಸಂಚಾಲಕ ಲಕ್ಷ್ಮಿ, ಅರಕಲಗೂಡು ಅರೇಮಾದನಹಳ್ಳಿ ಮಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ಬೆಂಗಳೂರಿನ ಅದ್ವೈತ ಶಂಕರ ಮಠದ ಶಿವಾನಂದ ಭಾರತಿ ಸ್ವಾಮೀಜಿ ಹಾಗೂ ಶಾಸಕ ಎಸ್.ಎ.ರಾಮದಾಸ್‌, ಉಪ ಮೇಯರ್‌ ಡಾ.ಜಿ.ರೂಪಾ ಯೋಗೀಶ್‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

‘ಹಿಮಾಲಯದಲ್ಲಿ ಧ್ಯಾನ ಮಾಡುವುದು ಸುಲಭ. ಆದರೆ, ಜನರ ಮಧ್ಯೆ ಇದ್ದು ಧ್ಯಾನಿಸುವುದು ಕಷ್ಟ. ಅಂತಹ ಸತ್ವಯುತ ಜೀವನವನ್ನು ಬ್ರಹ್ಮಕುಮಾರಿ ಸಂಸ್ಥೆಯಲ್ಲಿ ಕಾಣಬಹುದಾಗಿದೆ. ಜೀವನದ ಮೌಲ್ಯ ಅರ್ಥ ಮಾಡಿಕೊಳ್ಳುವವರಿಗೆ ಇಲ್ಲಿ ಸಂದೇಶವಿದೆ. ದೇಶದ ಭವಿಷ್ಯವಾಗಿರುವ ಮಕ್ಕಳನ್ನು ಇದನ್ನು ತೋರಲು ಪೋಷಕರು ಮುಂದಾಗಬೇಕು’ ಎಂದು ರಾಮದಾಸ್ ಸಲಹೆ ನೀಡಿದರು.

ಜೆ.ಕೆ.ಟೈರ್ಸ್‌ ಮೈಸೂರು ಉಪಾಧ್ಯಕ್ಷ ವಿ.ಈಶ್ವರ್‌ ರಾವ್‌, ಪ್ರಮುಖರಾದ ಎಸ್‌.ಲೋಕೇಶ್, ರಾಮಚಂದ್ರ, ಯೋಗೀಶ್ವರಿ, ರಂಗನಾಥ್‌ ಇದ್ದರು.

ಕೈಲಾಸ ಪರ್ವತದ ಮಾದರಿ ಹಾಗೂ ರುದ್ರಾಕ್ಷಿ ಶಿವಲಿಂಗ ಫೆ.22ರವರೆಗೆ ಸಾರ್ವಜನಿಕ ದರ್ಶನಕ್ಕೆ ಮುಕ್ತವಿರಲಿದೆ. ಉಚಿತ ಪ್ರವೇಶವಿದೆ ಎಂದು ಆಯೋಜಕರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.