ADVERTISEMENT

ಹಳ್ಳಿಗಾಡಿನ ಪ್ರತಿಭೆ ‘ರ‍್ಯಾಪರ್‌’ ಹರ್ಷ

ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವ ಹಂಬಲ; ಮೊರಾರ್ಜಿ ವಸತಿ ಶಾಲೆಯಲ್ಲಿ ವ್ಯಾಸಂಗ

ಎಚ್.ಎಸ್.ಸಚ್ಚಿತ್
Published 26 ಫೆಬ್ರುವರಿ 2022, 19:54 IST
Last Updated 26 ಫೆಬ್ರುವರಿ 2022, 19:54 IST
ಹುಣಸೂರಿನ ಬಾಚಹಳ್ಳಿಯ ಪ್ರತಿಭೆ ಹರ್ಷ ಅವರು ರೆಕಾರ್ಡಿಂಗ್‌ ಸ್ಟುಡಿಯೊದಲ್ಲಿ ಹಾಡಿದರು
ಹುಣಸೂರಿನ ಬಾಚಹಳ್ಳಿಯ ಪ್ರತಿಭೆ ಹರ್ಷ ಅವರು ರೆಕಾರ್ಡಿಂಗ್‌ ಸ್ಟುಡಿಯೊದಲ್ಲಿ ಹಾಡಿದರು   

ಹುಣಸೂರು: ನಗರದ ಬಿಜಿಎಸ್‌ ಕಾಲೇಜಿನಲ್ಲಿ ಪಿಯು ಓದುತ್ತಿರುವ ಡಿ.ಆರ್‌.ಎಸ್‌.ಹರ್ಷ. ಸಂಗೀತ ಕ್ಷೇತ್ರದಲ್ಲಿ ಭರವಸೆಯ ಹೆಜ್ಜೆಗಳನ್ನು ಮೂಡಿಸಿದ್ದಾರೆ. ರ‍್ಯಾಪ್‌ ಗಾಯಕರಾಗಿ ಜನಪ್ರಿಯತೆ ಗಳಿಸುತ್ತಿದ್ದಾರೆ.

ಹುಣಸೂರಿನ ಬಾಚಹಳ್ಳಿಯ ದೊಂಬರ ಸಮುದಾಯಕ್ಕೆ ಸೇರಿದ ಅವರು, ತರಗತಿಯ ಓದಿನೊಂದಿಗೆ ಸಂಗೀತವನ್ನು ಕಲಿಯುತ್ತಿದ್ದಾರೆ. ಪಿಯು ಓದುವಾಗಲೇ ಸ್ವಂತ ಆಲ್ಬಂ ‘ಗರ್ಲ್‌’ ಅನ್ನು ಸಿರಿ ಮ್ಯೂಸಿಕ್‌ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ ಹೆಗ್ಗಳಿಕೆ
ಅವರದ್ದು.

ಹರ್ಷ ಅವರ ಸಂಗೀತ ಸಾಧನೆಗೆ ಸ್ಫೂರ್ತಿ ತುಂಬಿದವರು ಕನ್ನಡ ಶಿಕ್ಷಕ ಅನಂತಯ್ಯ. ತುಮಕೂರಿನ ಮೊರಾರ್ಜಿ ವಸತಿ ಶಾಲೆಯಲ್ಲಿ ವ್ಯಾಸಂಗ ನಡೆಸುತ್ತಿದ್ದಾಗ ಹರ್ಷ ಹಾಡುಗಾರಿಕೆ ಯನ್ನು ಮೆಚ್ಚಿಕೊಂಡಿದ್ದರು. ಅವರು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ, ಬದುಕು ಕಟ್ಟಿಕೊಳ್ಳುವಂತೆ ಪ್ರೋತ್ಸಾಹ ನೀಡಿದರು. ಹೀಗಾಗಿಯೇ ಚಿಕ್ಕ ವಯಸ್ಸಿನಲ್ಲೇ ರಾಗ ಸಂಯೋಜಿಸುತ್ತಿದ್ದರು.

ADVERTISEMENT

ತಮ್ಮದೇ ಯೂಟ್ಯೂಬ್‌ ಚಾನಲ್‌ನಲ್ಲಿ ಸ್ವರಚಿತ ಹಾಡು ಹಾಗೂ ಸಂಗೀತ ಸಂಯೋಜಿಸಿದ ಹಾಡುಗಳನ್ನು ಬಿಡುಗಡೆ ಮಾಡಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ವೀಕ್ಷಿಸಿದ್ದಾರೆ. ‘ಎಚ್‌ಡಿಆರ್‌ ಮ್ಯೂಸಿಕ್‌ ಚಾನಲ್‌’ ಆರಂಭಿಸಿರುವ ಅವರು ಫೆ.18ರಂದು ‘ಶೋಕಿ’ ಹಾಡು ಬಿಡುಗಡೆ ಮಾಡಿದ್ದು, ಪ್ರಸಿದ್ಧಿ ಪಡೆದಿದೆ. ಮೈಸೂರಿನ ಮೈಂಡ್‌ ಸ್ಟುಡಿಯೊದಲ್ಲಿ ಇನ್ನಷ್ಟು ಹಾಡುಗಳ ಸಂಯೋಜನೆ, ನಿರ್ಮಾಣದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ‌

ಖಾಸಗಿ ವಾಹಿನಿಗಳು ಸಂಗೀತ ಕಾರ್ಯಕ್ರಮಕ್ಕೆ ಹರ್ಷ ಅವರನ್ನು ಆಹ್ವಾನಿಸುತ್ತಿವೆ. ಎಲ್ಲ ಕಾರ್ಯ ಕ್ರಮಗಳನ್ನು ಉತ್ತಮವಾಗಿ ಪ್ರಸ್ತುತ ಪಡಿಸುತ್ತಿದ್ದು, ಪ್ರೇಮ– ವಿರಹ ಗೀತೆ, ರ‍್ಯಾಪ್‌ ಶೈಲಿಯ ಹಾಡುಗಳ ಸಂಯೋಜನೆ ಯನ್ನು ಮುಂದುವರಿಸಿದ್ದಾರೆ.

‘ಮೈಸೂರಿನ ಸಂಗೀತ ವಿದ್ವಾನ್ ಅಪೇಕ್ಷಾ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಜೊತೆಗೆ ಕೀಬೋರ್ಡ್ ಮತ್ತು ಗಿಟಾರ್ ವಾದ್ಯ ಕಲಿಕೆಯುತ್ತಿದ್ದೇನೆ. ಸಾಧಿಸುವುದು ಬಹಳ ಇದೆ. ಸಂಗೀತ ನಿರ್ದೇಶಕ, ಹಾಡುಗಾರನಾಗುವುದು ನನ್ನ ಗುರಿ’ ಎಂದು ಹರ್ಷ ‘ಪ್ರಜಾವಾಣಿ’ಗೆ ಹೇಳಿದರು.

‘ಕಲೆಯನ್ನು ಪ್ರೋತ್ಸಾಹಿಸುವ ಮನಸ್ಸುಗಳಿದ್ದಲ್ಲಿ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲು ಸಾಧ್ಯ. ಮುಖಂಡ ಎಚ್.ವೈ.ಮಹದೇವ್ ಸಂಗೀತ ಕಲಿಕೆಗೆ ಮತ್ತು ಆಲ್ಬಂ ತಯಾರಿಸಲು ಆರ್ಥಿಕ ಸಹಾಯ ನೀಡಿ ಬೆನ್ನು ತಟ್ಟಿದ್ದಾರೆ’ ಎಂದು ಅವರು ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.