ಮೈಸೂರು: ‘ಪಕ್ಷವು ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸಲು ಸಿದ್ಧನಿದ್ದೇನೆ’ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.
ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.53ರಲ್ಲಿ ಕೈಗೊಂಡಿರುವ ‘ಯೋಗಕ್ಷೇಮ ಯಾತ್ರೆ’ ಪ್ರಯುಕ್ತ ಆಲನಹಳ್ಳಿ ಬಡಾವಣೆಯ ವಿನಾಯಕ ದೇವಸ್ಥಾನದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
‘ಕೃಷ್ಣರಾಜ ಕ್ಷೇತ್ರದ ಜನರು ನನ್ನನ್ನು ಜಾತಿ, ಧರ್ಮ ಮೀರಿ ಮನೆಯ ಮಗನಂತೆ ಕಂಡಿದ್ದಾರೆ, ಆಶೀರ್ವದಿಸಿದ್ದಾರೆ. ಅದಕ್ಕೆ ತಕ್ಕಂತೆ ನಾನು ಶಾಸಕನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ಇದೆ. ಮುಂದೆಯೂ ಪಕ್ಷ ಹೇಳಿದಂತೆ ಕೇಳುತ್ತೇನೆ’ ಎಂದರು.
‘1994ರಿಂದ ಇಲ್ಲಿಯವರೆಗೆ ನನಗೆ ಟಿಕೆಟ್ ಕೊಡಿ ಎಂದು ಕೇಳಿಲ್ಲ; ಒತ್ತಡವನ್ನೂ ಹಾಕಿಲ್ಲ. ಆದರೂ ಪಕ್ಷ ನನಗೆ ಟಿಕೆಟ್ ನೀಡಿ ಗೌರವಿಸಿದೆ. ಅದನ್ನು ಮನಃಪೂರ್ವಕವಾಗಿ ನಿರ್ವಹಿಸಿದ್ದೇನೆ. ಮುಂಬರುವ ಚುನಾವಣೆಯಲ್ಲೂ ನಾನು ಟಿಕೆಟ್ ಕೇಳುವುದಿಲ್ಲ, ಪಕ್ಷದ ನಿಯಮಕ್ಕೆ ಬದ್ಧನಾಗಿರುತ್ತೇನೆ’ ಎಂದು ತಿಳಿಸಿದರು.
‘ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ನಡೆಯುತ್ತಿರುವ ಐದನೇ ಯೋಗಕ್ಷೇಮ ಯಾತ್ರೆ ಇದಾಗಿದೆ. ಜನರ ಕಷ್ಟಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಈ ಕಾರ್ಯಕ್ರಮ ರೂಪಿಸಲಾಗಿದೆ’ ಎಂದರು.
‘53ನೇ ವಾರ್ಡ್‌ನಾದ್ಯಂತ ಒಂದೇ ಒಂದು ಕೊಳವೆಬಾವಿಯೂ ಇಲ್ಲ. ಸಂಪೂರ್ಣವಾಗಿ ಕಾವೇರಿ ಹಾಗೂ ಕಪಿಲಾ ನದಿ ನೀರನ್ನು ಪೂರೈಸಲಾಗುತ್ತಿದೆ’ ಎಂದು ಹೇಳಿದರು.
ಉಪ ಮೇಯರ್ ಡಾ.ಜಿ.ರೂಪಾ ಯೋಗೇಶ್ ಹಾಗೂ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.