ಮೈಸೂರು: ‘ಜಿ.ಟಿ. ದೇವೇಗೌಡ ಇವತ್ತಿಗೂ ನಮ್ಮ ಪಕ್ಷದ ನಾಯಕರು. ನಾನು ತಪ್ಪು ಮಾಡಿದ್ದರೆ ಪಕ್ಷದ ವೇದಿಕೆಯಲ್ಲಿ ನನ್ನ ಕಪಾಳಕ್ಕೆ ಹೊಡೆಯಲು ಅವರಿಗೆ ಹಕ್ಕಿದೆ. ಆದರೆ ಸಾರ್ವಜನಿಕವಾಗಿ ಇಲ್ಲಸಲ್ಲದ ನಿಂದನೆ ಮಾಡಬಾರದು’ ಎಂದು ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್ ಮನವಿ ಮಾಡಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಈಗಲೂ ಕೈ ಮುಗಿದು ಕೇಳುತ್ತೇನೆ. ಪಕ್ಷ ಸಂಘಟನೆ ಮಾಡಿದರೆ ನಿಮ್ಮ ಬೆನ್ನಿಗೆ ನಿಲ್ಲುತ್ತೇನೆ. ನೀವು ಬಯಸಿದಲ್ಲಿ ರಾಜಕೀಯದಿಂದಲೇ ದೂರ ಉಳಿಯುತ್ತೇನೆ. ಆದರೆ ನನ್ನನ್ನೇ ಗುರಿಯಾಗಿಸಿಕೊಂಡು ಮಾತನಾಡಬೇಡಿ’ ಎಂದು ಕೋರಿದರು.
‘ಚನ್ನಪಟ್ಟಣ ಉಪ ಚುನಾವಣೆ ಸಂಬಂಧ ಮಾತನಾಡಲು ಸ್ವತಃ ಎಚ್.ಡಿ. ದೇವೇಗೌಡ ಅವರೇ ಜಿಟಿಡಿ ಮೊಬೈಲ್‌ಗೆ ಕರೆ ಮಾಡಿದ್ದರು. ಆದರೆ ಅವರ ಆಪ್ತ ಕಾರ್ಯದರ್ಶಿ ಕರೆ ಸ್ವೀಕರಿಸಿದ್ದು, ನಂತರದಲ್ಲಿ ಕರೆ ಮಾಡಿಸುವುದಾಗಿ ಹೇಳಿದವರು ವಾಪಸ್ ಕರೆ ಮಾಡಲಿಲ್ಲ. ಈ ಕುರಿತು ಕರೆ ದಾಖಲೆ ನಮ್ಮಲ್ಲಿದೆ’ ಎಂದರು.
‘ನಾನು ಯಾರಿಗೂ ಬಿ ಫಾರಂ ಕೊಡಿಸಿಲ್ಲ. ಯಾರನ್ನೂ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿಸಿದೆ ಎಂದು ಹೇಳಿಲ್ಲ. ಜೆಡಿಎಸ್‌ಗೆ ನಾನು ನಿನ್ನೆ–ಮೊನ್ನೆ ಬಂದವನಲ್ಲ. 2005ರಲ್ಲಿ ಜೆಡಿಎಸ್ ಸೇರಿದೆ. ಅದಕ್ಕೂ ಮುನ್ನ 18 ವರ್ಷ ಬಿಜೆಪಿಯಲ್ಲಿದ್ದೆ. ಕೊಡಗಿನಲ್ಲಿ ನೆರೆ ಬಂದಾಗ ಕುಮಾರಸ್ವಾಮಿ ನೇತೃತ್ವದಲ್ಲಿ ಮಾದರಿಯಾಗಿ ಕೆಲಸ ಮಾಡಿದ್ದೆ. ಮೂರು ಬಾರಿ ನನ್ನನ್ನು ಕ್ಷೇತ್ರದ ಜನ ಶಾಸಕನನ್ನಾಗಿ ಆಯ್ಕೆ ಮಾಡಿದ್ದು, ಸದ್ಯ ವಿಶ್ರಾಂತಿ ನೀಡಿದ್ದಾರೆ’ ಎಂದು ವಿವರಿಸಿದರು.
‘2008ರಲ್ಲಿ ನೀವು ಜೆಡಿಎಸ್‌ನಿಂದ ಬಿಜೆಪಿಗೆ ಹೋದಿರಿ, ಹುಣಸೂರು ಕ್ಷೇತ್ರಕ್ಕೆ ಕಾಲಿಟ್ಟು ಮೂರನೇ ಸ್ಥಾನ ಗಳಿಸಿದ್ದೀರಿ. ಪರಿಷತ್ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಪರ ಮತ ಚಲಾಯಿಸಿದಿರಿ. ಹುಣಸೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿದ್ದೀರಿ. ಕೆ.ಆರ್. ನಗರ ಕ್ಷೇತ್ರದಲ್ಲಿ 2023ರ ಚುನಾವಣೆಯಲ್ಲಿ ನಿಮ್ಮ ಹಿಂಬಾಲಕರು ಹೇಗೆ ನಡೆದುಕೊಂಡರು ಗೊತ್ತಿದೆ. ಹೀಗಿದ್ದೂ ನಿಮ್ಮನ್ನು ನಾವು ನಾಯಕರೆಂದು ಒಪ್ಪಿಕೊಂಡಿದ್ದೇವೆ. ಹೀಗಿರುವಾಗ ಏಕವಚನದಲ್ಲಿ ಟೀಕೆ ಮಾಡುವುದು ಸರಿಯೇ’ ಎಂದು ಪ್ರಶ್ನಿಸಿದರು.
‘2023ರಲ್ಲಿ ನಮ್ಮ ಪಕ್ಷಕ್ಕೆ 19 ಸ್ಥಾನ ನೀಡಿ ಜನರು ಆಶೀರ್ವಾದ ಮಾಡಿದ್ದಾರೆ. ಜೆಡಿಎಸ್ ನಶಿಸಲಿದೆ ಎಂಬ ಭ್ರಮೆ ಬಿಡಿ. ನಿಷ್ಟಾವಂತ ಕಾರ್ಯಕರ್ತರು ಇರುವವರೆಗೂ ಯಾರೂ ಈ ಪಕ್ಷವನ್ನು ಏನು ಮಾಡಲೂ ಆಗದು’ ಎಂದರು.
ಜಿ.ಟಿ. ದೇವೇಗೌಡ ನಿವಾಸಕ್ಕೆ ಸಿ.ಎಂ. ಇಬ್ರಾಹಿಂ ಭೇಟಿ ಕುರಿತು ಪ್ರತಿಕ್ರಿಯಿಸಿ ‘ಇಬ್ರಾಹಿಂ ಸವೆದು ಹೋದ ನಾಣ್ಯ. ಅವರನ್ನು ಕಟ್ಟಿಕೊಂಡು ಚರ್ಚೆ ಅನವಶ್ಯಕ. ಅವರಿಗೆ ಭಾಷೆ ಮೇಲೆ ಹಿಡಿತ ಇಲ್ಲ’ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮುಖಂಡರಾದ ಚೆಲುವೇಗೌಡ, ರವಿಚಂದ್ರೇಗೌಡ, ಶಶಾಂಕ್, ಪ್ರಿಯದರ್ಶಿನಿ ಪ್ರಕಾಶ್, ಅಶ್ವಿನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.