ADVERTISEMENT

ಬೂದಿಮುಚ್ಚಿದ ಕೆಂಡದಂತಿರುವ ಸಾಲಿಗ್ರಾಮ

ಗ್ರಾಮಕ್ಕೆ ಶಾಸಕ ಸಾ.ರಾ.ಮಹೇಶ್‌ ಭೇಟಿ, ಮಾತುಕತೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 10:14 IST
Last Updated 14 ಡಿಸೆಂಬರ್ 2019, 10:14 IST
ಸಾಲಿಗ್ರಾಮದ ಅಂಬೇಡ್ಕರ್ ನಗರಕ್ಕೆ ಶಾಸಕ ಸಾ.ರಾ.ಮಹೇಶ್ ಶುಕ್ರವಾರ ಭೇಟಿ ನೀಡಿ ಕಲ್ಲು ತೂರಾಟದಿಂದ ಹಾನಿಗೊಳಗಾದ ಕುಟುಂಬಗಳಿಂದ ಮಾಹಿತಿ ಪಡೆದರು
ಸಾಲಿಗ್ರಾಮದ ಅಂಬೇಡ್ಕರ್ ನಗರಕ್ಕೆ ಶಾಸಕ ಸಾ.ರಾ.ಮಹೇಶ್ ಶುಕ್ರವಾರ ಭೇಟಿ ನೀಡಿ ಕಲ್ಲು ತೂರಾಟದಿಂದ ಹಾನಿಗೊಳಗಾದ ಕುಟುಂಬಗಳಿಂದ ಮಾಹಿತಿ ಪಡೆದರು   

ಸಾಲಿಗ್ರಾಮ: ಪಟ್ಟಣದಲ್ಲಿ ಶುಕ್ರವಾರವೂ ಬೂದಿಮುಚ್ಚಿದ ಕೆಂಡದಂತಹ ಸ್ಥಿತಿ ಮುಂದುವರಿದಿದೆ. ಹಲವೆಡೆ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಜನಸಂಚಾರ ವಿರಳವಾಗಿತ್ತು. ‌

ದಲಿತರ ಬೀದಿ ಮತ್ತು ಮಹಾವೀರ ರಸ್ತೆಗಳಲ್ಲಿ ಬಿಗುವಿನ ಪರಿಸ್ಥಿತಿ ನೆಲೆಸಿದೆ. ಅಲ್ಲಲ್ಲಿ ಜನರು ಗುಂಪುಗೂಡುತ್ತಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು 2 ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 4 ತುಕಡಿಗಳೂ ಭದ್ರತೆಯ ಉಸ್ತುವಾರಿ ಹೊತ್ತಿವೆ.

ಐವರು ಇನ್‌ಸ್ಪೆಕ್ಟರ್‌ಗಳು, 7 ಮಂದಿ ಪಿಎಸ್‌ಐಗಳೂ ಸೇರಿದಂತೆ 200ಕ್ಕೂ ಅಧಿಕ ಪೊಲೀಸರು ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ನಡೆಸುತ್ತಿದ್ದಾರೆ.‌‌

ADVERTISEMENT

ಘಟನೆ ನಡೆಯುತ್ತಿದ್ದಂತೆ ಗುರುವಾರ ರಾತ್ರಿ ಇಲ್ಲಿಗೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಭದ್ರತೆ ಕುರಿತು ಸಭೆ ನಡೆಸಿದರು. ಪರಿಸ್ಥಿತಿ ತಿಳಿಯಾಗುವವರೆಗೂ ಕಟ್ಟೆಚ್ಚರದಿಂದ ಇರುವಂತೆ ಸೂಚನೆ ನೀಡಿದರು.

ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷೆ

‘ಪಟ್ಟಣದ ಶಾಂತಿ ಕದಡುವ ಕೆಲಸವನ್ನು ಯಾರು ಮಾಡಿದ್ದಾರೆ ಎಂಬುದನ್ನು ಪೊಲೀಸ್ ತನಿಖೆ ಮೂಲಕ ಪತ್ತೆ ಮಾಡಿ, ಶಿಕ್ಷೆ ವಿಧಿಸಲಾಗುತ್ತದೆ’ ಎಂದು ಶಾಸಕ ಸಾ.ರಾ.ಮಹೇಶ್ ಶುಕ್ರವಾರ ಭರವಸೆ ನೀಡಿದರು.

ಪಟ್ಟಣದ ಅಂಬೇಡ್ಕರ್ ನಗರಕ್ಕೆ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿದ ವೇಳೆ, ಮಹಿಳೆಯರು ತಮಗಾದ ನೋವು ಮತ್ತು ಅನ್ಯಾಯವನ್ನು ಏರಿದ ಧ್ವನಿಯಲ್ಲಿ ಹೇಳಿಕೊಂಡರು.

ಜನರ ನೋವನ್ನು ಆಲಿಸಿದ ಶಾಸಕರು, ‘ಸಾಲಿಗ್ರಾಮದಲ್ಲಿ ಈ ರೀತಿಯ ದುರ್ಘಟನೆ ನಡೆಯಬಾರದಿತ್ತು. ದುಷ್ಕರ್ಮಿಗಳ ಕುಮ್ಮಕ್ಕಿನಿಂದ ನಡೆದಿದೆ. ಮುಂದೆ ಈ ರೀತಿಯ ಘಟನೆ ನಡೆಯದಂತೆ ಜನರೇ ಎಚ್ಚರ ವಹಿಸಬೇಕು’ ಎಂದು ಮನವಿ ಮಾಡಿದರು.

‘ತಪ್ಪು ಯಾರೇ ಮಾಡಿದರೂ, ಅದು ತಪ್ಪೇ. ಇದನ್ನು ಯಾರೂ ಕೂಡಾ ಸಹಿಸುವುದಿಲ್ಲ. ನಷ್ಟಕ್ಕೆ ಒಳಗಾಗಿರುವ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ. ನಾನು ಸಹ ವೈಯಕ್ತಿಕವಾಗಿಯೂ ಪರಿಹಾರ ನೀಡುತ್ತೇನೆ’ ಎಂದು ಶಾಸಕ ಸಾ.ರಾ.ಮಹೇಶ್ ಇದೇ ಸಂದರ್ಭ ಜನರಿಗೆ ಭರವಸೆ ನೀಡಿದರು.

ಅಂಬೇಡ್ಕರ್ ನಗರದ ಜನರ ಸಮಸ್ಯೆಗಳನ್ನು ಆಲಿಸಿದ ನಂತರ ಸಾ.ರಾ.ಮಹೇಶ್, ಪಟ್ಟಣದ ಟ್ಯಾಂಕ್ ವೃತ್ತ ಹಾಗೂ ಭಜನೆ ಮನೆ ಮುಂಭಾಗ ಜನರಿಂದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡು, ‘ನಮ್ಮೂರಲ್ಲಿ ಇನ್ಮುಂದೆ ಈ ರೀತಿಯ ದುರ್ಘಟನೆಯಾಗಬಾರದು’ ಎಂದು ಮನವಿ ಮಾಡಿದರು. ಇದೇ ಸಂದರ್ಭ ಪೊಲೀಸ್ ಠಾಣೆಗೆ ನೀಡಿದ ದೂರು ಹಿಂಪಡೆಯಬೇಕು ಎಂದು ಸೂಚಿಸಿದರು.

ಶಾಸಕರೊಂದಿಗೆ ತಾಲ್ಲೂಕು ಪಂಚಾಯಿತಿ ಇಒ ರಮೇಶ್, ತಹಶೀಲ್ದಾರ್ ಮಂಜುಳಾ, ಸಮಾಜ ಕಲ್ಯಾಣಾಧಿಕಾರಿ ಅಶೋಕ್, ಪಿಡಿಒ ಮಂಜುನಾಥ್‌, ಉಪ ತಹಶೀಲ್ದಾರ್ ಮೋಹನ್, ಸಿಪಿಐ ಪಿ.ಕೆ.ರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.