ADVERTISEMENT

ಒಳಮೀಸಲಾತಿ ಜಾರಿಗೆ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 15:08 IST
Last Updated 7 ಅಕ್ಟೋಬರ್ 2024, 15:08 IST
<div class="paragraphs"><p>ಮೈಸೂರಿನಲ್ಲಿ&nbsp;ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆಯ ಸಭೆ ಸೋಮವಾರ ನಡೆಯಿತು</p></div>

ಮೈಸೂರಿನಲ್ಲಿ ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆಯ ಸಭೆ ಸೋಮವಾರ ನಡೆಯಿತು

   

ಮೈಸೂರು: ‘ಒಳಮೀಸಲಾತಿ ಜಾರಿಗೆ ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಒತ್ತಾಯಿಸಿದೆ.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ನಡೆದ ಸಭೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೀಘ್ರದಲ್ಲೇ ಮನವಿ ಸಲ್ಲಿಸಿ ಒತ್ತಡ ತರಲು ನಿರ್ಣಯಿಸಲಾಯಿತು.

ADVERTISEMENT

ಹಳೆ ಮೈಸೂರು ಭಾಗದ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಕೊಡಗು ಹಾಗೂ ತುಮಕೂರು ಜಿಲ್ಲೆಗಳಿಂದ ವಕೀಲರು ಪಾಲ್ಗೊಂಡಿದ್ದರು.

ಉದ್ಘಾಟಿಸಿದ ವಕೀಲ ಎಸ್. ಅರುಣ್ ಕುಮಾರ್ ಮಾತನಾಡಿ, ‘ಇದೇ ಆ.1ರಂದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಒಳಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಡಿ.ವೈ. ಚಂದ್ರಚೂಡ್‌ ನೇತೃತ್ವದ ಏಳು ನ್ಯಾಯಾಧೀಶರ ಪೀಠವು ಮಹತ್ವದ ತೀರ್ಪು ನೀಡಿದೆ’ ಎಂದು ತಿಳಿಸಿದರು.

‘ಪರಿಶಿಷ್ಟ ಜಾತಿಗಳಲ್ಲಿ ಬಹುದೊಡ್ಡ ಸಮಾಜವಾದ ಮಾದಿಗ ಸಮುದಾಯವು ಒಳಮೀಸಲಾತಿಗಾಗಿ 30 ವರ್ಷಗಳಿಂದಲೂ ಹೋರಾಡುತ್ತಲೇ ಇದೆ. ರಾಜ್ಯದ ನಿವೃತ್ತ ನ್ಯಾಯಾಧೀಶ ಎ.ಜೆ. ಸದಾಶಿವ ಆಯೋಗವು 20.64 ಲಕ್ಷ ಪರಿಶಿಷ್ಟ ಜಾತಿಗಳ ಕುಟುಂಬಗಳನ್ನು ಸಮೀಕ್ಷೆ ಮಾಡುವ ಮೂಲಕ ವರದಿಯನ್ನು ಹಿಂದಿನ ಬಿಜೆಪಿ ಸರ್ಕಾರಕ್ಕೆ ಒಪ್ಪಿಸಿದೆ. ಆ ವರದಿಯ ಶಿಫಾರಸುಗಳನ್ನು ಜಾರಿಗೊಳಿಸುತ್ತೇವೆ ಎಂದು ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದೆ. ಪರಿಶಿಷ್ಟ ಜಾತಿ ಒಳಗಿನ ಒಳಮೀಸಲಾತಿ ನೀಡುವುದನ್ನು ರಾಜ್ಯ ಸರ್ಕಾರವೇ ಅನುಷ್ಠಾನಗೊಳಿಸಲು ಪರಮಾಧಿಕಾರ ಹೊಂದಬಹುದು ಎಂದು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ತಿಳಿಸಿರುವುದರಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ನೆಪ ಹೇಳದೆ ಕ್ರಮ ಕೈಗೊಳ್ಳಬೇಕು. ಆಯೋಗದ ವರದಿಯ ದತ್ತಾಂಶ ಪರಿಗಣಿಸಬೇಕು’ ಎಂದು ಆಗ್ರಹಿಸಿದರು.

ವಕೀಲ ಬೂದಿತಿಟ್ಟು ರಾಜೇಂದ್ರ ಮಾತನಾಡಿ, ‘ಸುಪ್ರೀಂ ಕೋರ್ಟ್ ತೀರ್ಪು ಹೊರಬಂದ ಮರು ದಿನದಿಂದಲೇ, ಅನುಷ್ಠಾನಕ್ಕಾಗಿ ಒಳಮೀಸಲಾತಿ ಬೆಂಬಲಿಸುವಂತಹ ಮಾದಿಗ ಮಾದಿಗ ಸಂಬಂಧಿತ ಜಾತಿಗಳು ಆಗ್ರಹಿಸುತ್ತಿವೆ. ಅಲ್ಲಲ್ಲಿ ಹೋರಾಟವೂ ನಡೆಯುತ್ತಿದೆ. ಸರ್ಕಾರವು ಬೇಗ ಎಚ್ಚೆತ್ತುಕೊಂಡು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಅವಕಾಶವನ್ನು ತಪ್ಪಿಸಿಕೊಂಡರೆ ಬಹುದೊಡ್ಡ ಶೋಷಿತ ಸಮಾಜವು ಕಾನೂನಾತ್ಮಕ ಹೋರಾಟಗಳಿಗೆ ಅಣಿಯಾಗಿ, ಹೋರಾಟ ತೀವ್ರಗೊಳ್ಳಬಹುದು. ಇದನ್ನು ಸೂಕ್ಷ್ಮವಾಗಿ ಗಮನಿಸಿ ಮುಂದಿನ ಸಚಿವ ಸಂಪುಟ ಸಭೆಯಲ್ಲೇ ಮಂಡಿಸಿ, ಅಂಗೀಕರಿಸಿ ಒಳಮೀಸಲಾತಿ ಜಾರಿಗೆ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.

ವಕೀಲರಾದ ದಾಸಯ್ಯ, ಶಿವಕುಮಾರ್, ಮಾಳಪ್ಪ, ವಿನಾಯಕ, ಸುರೇಂದ್ರ, ಪುಟ್ಟುರಾಜ್, ಪಿಳ್ಳಳ್ಳಿ ಶಿವಣ್ಣ, ಲಕ್ಷ್ಮಣ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.