ADVERTISEMENT

ಜೆಡಿಎಸ್‌ ಟಿಕೆಟ್‌ಗಾಗಿ ಪ್ರಯತ್ನ: ಕುಮಾರಸ್ವಾಮಿ ಭೇಟಿಯಾದ ಸಂದೇಶ್‌ ನಾಗರಾಜ್‌

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 12:36 IST
Last Updated 22 ನವೆಂಬರ್ 2021, 12:36 IST

ಮೈಸೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ ಸ್ಪರ್ಧೆ ವಿಚಾರವಾಗಿ ಸಂದೇಶ್‌ ನಾಗರಾಜ್‌ ಅವರು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಸೋಮವಾರ ಭೇಟಿಯಾದರು.

ವಿಧಾನ ಪರಿಷತ್‌ ಹಾಲಿ ಸದಸ್ಯರೂ ಆಗಿರುವ ಸಂದೇಶ್‌ ನಾಗರಾಜ್‌, ಬಿಜೆಪಿ ಟಿಕೆಟ್‌ಗಾಗಿ ಭಾರಿ ಪ್ರಯತ್ನ ನಡೆಸಿದ್ದರು. ಆದರೆ, ಆ ಪಕ್ಷದವರು ಆರ್‌.ರಘು (ಕೌಟಿಲ್ಯ) ಅವರಿಗೆ ‘ಬಿ’ ಫಾರಂ ನೀಡಿದ್ದಾರೆ.

ಈಗ ಅತಂತ್ರರಾಗಿರುವ ಅವರು ಎಚ್‌.ಡಿ.ರೇವಣ್ಣ ಮೂಲಕ ಮತ್ತೆ ಜೆಡಿಎಸ್‌ ಟಿಕೆಟ್‌ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕುಮಾರಸ್ವಾಮಿ ಜೊತೆ ಮೈಸೂರಿನಲ್ಲಿ ಮಧ್ಯಾಹ್ನ ಊಟ ಮಾಡಿದರು. ಜೆಡಿಎಸ್‌ಗೂ ಸಮರ್ಥ ಅಭ್ಯರ್ಥಿ ಸಿಗದ ಕಾರಣ ಸಂದೇಶ್‌ ನಾಗರಾಜ್‌ ಅವರಿಗೇ ಈ ಬಾರಿಯೂ ಮಣೆ ಹಾಕಬಹುದು ಎನ್ನಲಾಗಿದೆ. 2009 ಹಾಗೂ 2015ರಲ್ಲಿ ಅವರು ಜೆಡಿಎಸ್‌ನಿಂದ ಗೆದ್ದಿದ್ದರು.

ADVERTISEMENT

ಈ ಭೇಟಿಗೂ ಮುನ್ನವಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕುಮಾರಸ್ವಾಮಿ, ಸಂದೇಶ್‌ ನಾಗರಾಜ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅವರು ಪಕ್ಷ ತೊರೆದು ಮೂರು ವರ್ಷವಾಯಿತು ಎಂದಿದ್ದರು.

ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರುತ್ತಿರುವ ಸಿ.ಎನ್‌.ಮಂಜೇಗೌಡ ಕೂಡ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ನಾಮಪ‍ತ್ರ ಸಲ್ಲಿಸಲು ಮಂಗಳವಾರ (ನ.23) ಕೊನೆಯ ದಿನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.