ಕೆ.ಆರ್.ನಗರ: ತಾಲ್ಲೂಕಿನ ಕಗ್ಗೆರೆ ಬಳಿ ಸಾ.ರಾ.ಸ್ನೇಹ ಬಳಗವು 200 ಹಾಸಿಗೆ ಸಾಮರ್ಥ್ಯದ ಕೋವಿಡ್ ಆರೈಕೆ ಕೇಂದ್ರ ಆರಂಭಿಸಿದ್ದು, ಜೆಡಿಎಸ್ ಶಾಸಕ ಸಾ.ರಾ.ಮಹೇಶ್, ಬುಧವಾರ ಆರೋಗ್ಯ ಇಲಾಖೆಗೆ ಇದನ್ನು ಹಸ್ತಾಂತರಿಸಲಿದ್ದಾರೆ.
ಪಟ್ಟಣದಿಂದ 8 ಕಿ.ಮೀ. ದೂರದ ಕಗ್ಗೆರೆ ಗ್ರಾಮದ ಹೊರವಲಯದಲ್ಲಿನ ಮೂರು ಎಕರೆ ಜಾಗದಲ್ಲಿ, 16 ಸಾವಿರ ಚದರ ಅಡಿಯಲ್ಲಿ ನಿರ್ಮಿಸಲಾದ ನೆಲ ಮತ್ತು ಮೊದಲ ಮಹಡಿಯ ಕಟ್ಟಡವನ್ನು ಕೋವಿಡ್ ಆರೈಕೆ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ.
ಗಾರ್ಮೆಂಟ್ಸ್ ಆರಂಭಿಸಲಿಕ್ಕಾಗಿ ಸಾ.ರಾ.ಸ್ನೇಹ ಬಳಗದಿಂದ ಈ ಕಟ್ಟಡ ನಿರ್ಮಿಸಲಾಗಿತ್ತು. ಅದಕ್ಕಾಗಿ ಯಂತ್ರೋಪಕರಣಗಳನ್ನೂ ಇಲ್ಲಿ ಅಳವಡಿಸಲಾಗಿತ್ತು. ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಹೊತ್ತಿನಲ್ಲಿ ಎಲ್ಲ ಯಂತ್ರಗಳನ್ನು ತೆರವುಗೊಳಿಸಲಾಗಿದೆ. ಕೊರೊನಾ ಸೋಂಕಿತರು ಹಾಗೂ ಆಮ್ಲಜನಕದ ಅಗತ್ಯವಿರುವವರಿಗಾಗಿ ನೂತನ ಕಟ್ಟಡವನ್ನೇ ಕೋವಿಡ್ ಆರೈಕೆ ಕೇಂದ್ರವನ್ನಾಗಿ ಮಾರ್ಪಡಿಸಲಾಗಿದೆ.
‘200 ಸಾಮಾನ್ಯ ಹಾಸಿಗೆ, ಆಮ್ಲಜನಕ ಸಹಿತ 10 ಹಾಸಿಗೆ ಕೇಂದ್ರದಲ್ಲಿವೆ. ಮಂಗಳವಾರ ರಾತ್ರಿಯೊಳಗೆ ಎಲ್ಲ ಸಿದ್ಧತೆಯೂ ಪೂರ್ಣಗೊಳ್ಳಲಿದೆ. ರೋಗಿಗಳ ಆರೈಕೆಗಾಗಿ ಮೂವರು ವೈದ್ಯರು, 10 ಜನರು ನರ್ಸ್, ಐವರು ಡಿ.ಗ್ರೂಪ್ ನೌಕರರು ಇಲ್ಲಿ ಕೆಲಸ ಮಾಡಲಿದ್ದಾರೆ. ವೈದ್ಯರು ಉಳಿದುಕೊಳ್ಳಲು ಕೊಠಡಿ, ಹೈಟೆಕ್ ಶೌಚಾಲಯ, ಜನರೇಟರ್, ಎರಡು ಆಂಬುಲೆನ್ಸ್, ಊಟದ ವ್ಯವಸ್ಥೆಯೂ ಇಲ್ಲಿರಲಿದೆ’ ಎಂದು ಶಾಸಕ ಸಾ.ರಾ.ಮಹೇಶ್ ತಿಳಿಸಿದರು.
‘ನಿಮಿಷಕ್ಕೆ 5 ಲೀಟರ್ ಆಮ್ಲಜನಕವನ್ನು ಉತ್ಪಾದಿಸುವ ತಲಾ ₹ 1.10 ಲಕ್ಷ ವೆಚ್ಚದ ನಾಲ್ಕು ಯಂತ್ರಗಳು ಕೇಂದ್ರದಲ್ಲಿವೆ. ಸೇವೆಗೆ ಯಾವೊಬ್ಬ ವೈದ್ಯರು ಮುಂದಾಗದಿದ್ದರಿಂದ ಸರ್ಕಾರ ₹ 60 ಸಾವಿರ ಸಂಬಳ ನೀಡಿದರೆ, ನಾವು ಒಬ್ಬೊಬ್ಬರಿಗೆ ತಲಾ ₹ 40 ಸಾವಿರ ಸಂಬಳ ನೀಡುತ್ತೇವೆ. ತಾಲ್ಲೂಕಿನಲ್ಲಿ ಈ ರೀತಿ ಒಟ್ಟು 7 ವೈದ್ಯರನ್ನು ನೇಮಿಸಿಕೊಳ್ಳಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಕೆ.ಆರ್.ನಗರದಲ್ಲಿನ ತಾಲ್ಲೂಕು ಕೋವಿಡ್ ಆರೈಕೆ ಕೇಂದ್ರಕ್ಕೆ ಸೋಂಕಿತರನ್ನು ಕರೆತರಲು ಹಾಗೂ ಮೃತಪಟ್ಟವರ ಶವ ಸಾಗಿಸಲು ಎರಡು ಆಂಬುಲೆನ್ಸ್ ಪ್ರತ್ಯೇಕವಾಗಿ ನೀಡಲಾಗಿದೆ’ ಎಂದು ಸಾ.ರಾ.ಸ್ನೇಹ ಬಳಗದ ಕಾರ್ಯದರ್ಶಿ ಸಿ.ಜೆ.ಆನಂದ ತಿಳಿಸಿದರು.
*
ಜನರ ಆರೋಗ್ಯದ ಕಾಳಜಿಯಿಂದ ಶಾಸಕ ಸಾ.ರಾ.ಮಹೇಶ್ ಕೋವಿಡ್ ಆರೈಕೆ ಕೇಂದ್ರ ಆರಂಭಿಸುತ್ತಿದ್ದಾರೆ. ಸರ್ಕಾರದ ಕೆಲಸಕ್ಕೆ ತಾವೂ ಕೈ ಜೋಡಿಸಿದ್ದಾರೆ.
-ಡಾ.ಕೆ.ಆರ್.ಮಹೇಂದ್ರಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ
*
ಕೇಂದ್ರದ ವೆಚ್ಚವನ್ನು ಸಾ.ರಾ. ಸ್ನೇಹ ಬಳಗವೇ ನೋಡಿಕೊಳ್ಳಲಿದೆ. ಔಷಧೋಪಚಾರದ ಹೊಣೆ ತಾಲ್ಲೂಕು ಆಡಳಿತದ್ದು. ₹ 1 ಕೋಟಿಗೂ ಹೆಚ್ಚು ವೆಚ್ಚವಾಗಲಿದೆ.
-ಸಾ.ರಾ.ಮಹೇಶ್, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.