ADVERTISEMENT

HC ಮಹದೇವಪ್ಪ ಸೇರಿದಂತೆ ಕಾಂಗ್ರೆಸ್ ನಾಯಕರ ನಿವಾಸಗಳಿಗೆ ಭೇಟಿ ನೀಡಿದ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 14:12 IST
Last Updated 8 ಅಕ್ಟೋಬರ್ 2024, 14:12 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಮೈಸೂರು: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ನಗರದಲ್ಲಿ ಮಂಗಳವಾರ ಸಚಿವ ಎಚ್.ಸಿ. ಮಹದೇವಪ್ಪ ಸೇರಿದಂತೆ ಕಾಂಗ್ರೆಸ್ ನಾಯಕರ ನಿವಾಸಗಳಿಗೆ ಭೇಟಿ ಕೊಟ್ಟು ಪ್ರತ್ಯೇಕವಾಗಿ ಚರ್ಚಿಸಿದರು.

ಮುಖ್ಯಮಂತ್ರಿ ಬದಲಾವಣೆಯ ಊಹಾಪೋಹಗಳು ಹಾಗೂ ದಲಿತ ಮುಖ್ಯಮಂತ್ರಿ ಕೂಗಿನ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಅವರ ಭೇಟಿ ಮಹತ್ವ ಪಡೆದುಕೊಂಡಿದೆ.

ಸೋಮವಾರ ಶ್ರೀರಂಗಪಟ್ಟಣ ದಸರಾದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಅವರು, ಮಂಗಳವಾರ ಬೆಳಿಗ್ಗೆ ಮೈಸೂರಿನಲ್ಲಿರುವ ಸಮಾಜಕಲ್ಯಾಣ ಸಚಿವ ಮಹದೇವಪ್ಪ ನಿವಾಸಕ್ಕೆ ಭೇಟಿ ನೀಡಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಮಾತುಕತೆ ನಡೆಸಿದರು.

ADVERTISEMENT

ನಂತರ, ಶಾಸಕರಾದ ಕೆ. ಹರೀಶ್‌ಗೌಡ, ಡಿ. ರವಿಶಂಕರ್, ಅನಿಲ್ ಚಿಕ್ಕಮಾದು, ಮುಡಾ ಅಧ್ಯಕ್ಷ ಕೆ.ಮರೀಗೌಡ, ಮುಖಂಡರಾದ ಕೋಟೆ ಶಿವಣ್ಣ, ಎಂ.ಕೆ. ಸೋಮಶೇಖರ್ ಸೇರಿದಂತೆ ಹಲವು ಮುಖಂಡರೊಂದಿಗೆ ಚರ್ಚಿಸಿದರು. ಲೋಕಸಭೆ ಚುನಾವಣೆಯಲ್ಲಿ ಮೈಸೂರು–ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್‌ ಸೋಲಿನ ಕುರಿತು ಮಾಹಿತಿ ಪಡೆದರು.

ಕೆ.ಜಿ. ಕೊ‍ಪ್ಪಲಿನಲ್ಲಿರುವ ಶಾಸಕ ಕೆ. ಹರೀಶ್ ಗೌಡ ನಿವಾಸಕ್ಕೆ ಭೇಟಿ ನೀಡಿದ ಜಾರಕಿಹೊಳಿ, ಸುಣ್ಣದಕೇರಿಯಲ್ಲಿರುವ ಕಾಂಗ್ರೆಸ್ ಮುಖಂಡ ಲೋಕೇಶ್‌ ಪಿಯಾ ಅವರ ಮನೆಯಲ್ಲಿ ಉಪಾಹಾರ ಸೇವಿಸಿದರು. ಸಂಜೆ ವಸ್ತು‍ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ದಸರಾ ಕುಸ್ತಿ ವೀಕ್ಷಿಸಿದರು.

ಅವರ ಭೇಟಿ ಕುರಿತು ಪ್ರತಿಕ್ರಿಯಿಸಿದ ಶಾಸಕ ಹರೀಶ್‌ ಗೌಡ, ‘ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಈವರೆಗೆ ನಮ್ಮಲ್ಲಿ ಚರ್ಚೆ ನಡೆದಿಲ್ಲ. ಜಾರಕಿಹೊಳಿ ನಮ್ಮ ನಾಯಕರಾಗಿದ್ದು, ಸೌಜನ್ಯದ ಭೇಟಿ ನೀಡಿದ್ದಾರೆ. ಮುಂದಿನ ಐದು ವರ್ಷ ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.