ಮೈಸೂರು: ನಾಡನ್ನು ಉಳಿಸಿಕೊಳ್ಳಲು ಹೋರಾಡಿದ ಮಹಿಷ ದೊರೆಯು ಆರ್ಯರ ದೃಷ್ಟಿಯಲ್ಲಿ ಅಸುರನಾಗಿ ಮಾರ್ಪಟ್ಟನು ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್ ಹೇಳಿದರು.
ಮಹಿಷ ದಸರಾ ಆಚರಣಾ ಸಮಿತಿಯು ಚಾಮುಂಡಿ ಬೆಟ್ಟದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಮೂಲನಿವಾಸಿಗಳ ಮಹಿಷ ಸಾಂಸ್ಕೃತಿಕ ಹಬ್ಬ 2018’ ಹಾಗೂ ‘ಮಹಿಷ ಮಂಡಳದ ಮಹಾದೊರೆ’ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಷ ಎಮ್ಮೆಗಳ ರಾಜ. ಈ ಭಾಗದ ಪ್ರಮುಖ ಯಾದವ ದೊರೆ. ಯಾದವರಿಗೆ ಎಮ್ಮೆಗಳನ್ನು ಮೇಯಿಸಲು ಬೇಕಿದ್ದದು ಅಪಾರವಾದ ಅರಣ್ಯ. ಅದು ಮೈಸೂರು ಭಾಗದಲ್ಲಿ ಅಪಾರ ಪ್ರಮಾಣದಲ್ಲಿತ್ತು. ಆದರೆ, ಉತ್ತರ ಭಾರತದ ಕಡೆಯಿಂದ ಬಂದ ಆರ್ಯರು ಕೃಷಿಕರನ್ನು ಜತೆ ಸೇರಿಸಿಕೊಂಡು ಕೃಷಿ ಮಾಡಲು ಬಯಲು ಹುಡುಕುತ್ತಿದ್ದರು. ಅದು ಸಾಲದಾದಾಗ ಅರಣ್ಯವನ್ನು ಕಡಿದು, ಬೆಂಕಿ ಹಾಕಿ ನಾಶ ಮಾಡಿ ಬಯಲಾಗಿ ಪರಿವರ್ತಿಸಲು ಪ್ರಯತ್ನಿಸಿದರು. ಅದನ್ನು ವಿರೋಧಿಸಿದ ಮಹಿಷ ತನ್ನ ನಾಡನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದನು. ತಮ್ಮ ತಂತ್ರಗಾರಿಕೆಗೆ ವಿರೋಧ ತೋರಿದ ಮಹಿಷನನ್ನು ಆರ್ಯರು ರಾಕ್ಷಸನಂತೆ ಚಿತ್ರಿಸಿದರು ಎಂದು ಅವರು ವಿಶ್ಲೇಷಿಸಿದರು.
ಈ ಭಾಗದ ಅತಿ ಸಾಮಾನ್ಯ ನಾಯಕಿಯಾಗಿದ್ದ ಚಾಮುಂಡಿಯನ್ನು ಮಹಿಷನ ವಿರುದ್ಧ ಆರ್ಯರು ಎತ್ತಿಕಟ್ಟಿದರು. ಅವಳಿಗೆ ಬೆಂಬಲಿಸಿ ಮಹಿಷನನ್ನು ಕುತಂತ್ರದಿಂದ ಕೊಂದರು. ಆ ನಂತರವೇ ಚಾಮುಂಡಿಯನ್ನು ದೇವತೆಯೆಂದೂ ಈ ಬೆಟ್ಟವನ್ನು ಚಾಮುಂಡಿ ಬೆಟ್ಟವೆಂದೂ ಹೆಸರಿಟ್ಟರು. ಅಲ್ಲಿಯವರೆಗೂ ಮಹಾಬಲಗಿರಿಯಾಗಿದ್ದ ಬೆಟ್ಟವು ಚಾಮುಂಡಿಬೆಟ್ಟವಾಯಿತು. ದೊರೆಯಾಗಿದ್ದ ಮಹಿಷನು ಮಹಿಷಾಸುರನಾದನು ಎಂದು ಬೇಸರದಿಂದ ಹೇಳಿದರು.
ನಾಡನ್ನಾಳಿದ ಮಹಿಷ ಇಲ್ಲಿ ಬಿಸಿಲಿನಲ್ಲಿ ನಿಲ್ಲುವ ಅಗತ್ಯವಿರಲಿಲ್ಲ. ಆರ್ಯರ ತಂತ್ರ, ಜಾತಿ ಪದ್ಧತಿ, ಶೋಷಣೆಗಳಿಗೆ ಯಾರು ವಿರೋಧಿಸಿದರೊ ಅವರೆಲ್ಲ ಊರ ಆಚೆಗೆ ತಳ್ಳಲ್ಪಟ್ಟರು. ಹಾಗಾಗಿಯೇ ಹೊಲೆ–ಮಾದಿಗರು ಊರಿನ ಆಚೆಯೂ ಶೋಷಣೆಯನ್ನು ಒಪ್ಪಿಕೊಂಡ ಮೇಲ್ಜಾತಿಯವರು ಊರಿನ ಒಳಗೂ ವಾಸ ಮಾಡಿದರು. ಶೋಷಣೆಯನ್ನು ಒಪ್ಪಿ ದಾಸರಾಗುವ ಬದಲು ಹೊಲೆ– ಮಾದಿಗರಾಗಿ ಇರುವುದು ಶ್ರೇಷ್ಠ ಎಂದು ಅವರು ಅಭಿಪ್ರಾಯಪಟ್ಟರು.
ಅಶೋಕನ ಕಾಲದ ಶಾಸನಗಳಲ್ಲಿ ಮಹಿಷನ ಉಲ್ಲೇಖವಿದೆ. ಅಂದಿನ ಕಾಲದ ಶಾಸನಗಳಲ್ಲಿ ದಕ್ಷಿಣ ಭಾರತದ ಬೇರಾವ ರಾಜರ ಉಲ್ಲೇಖವೂ ಹೆಚ್ಚಾಗಿ ಇಲ್ಲದೇ ಇರುವುದೇ ಮಹಿಷನ ಶ್ರೇಷ್ಠತೆಗೆ ಹಿಡಿದ ಕನ್ನಡಿಯಾಗಿದೆ. ಇದನ್ನು ಅರ್ಥಮಾಡಿಕೊಂಡವರಿಗೆ ಮಹಿಷ ಇಲ್ಲಿನ ಬಹುಮುಖ್ಯ ಸ್ಥಳೀಯರ ದೊರೆಯಾಗಿದ್ದ ಎನ್ನುವುದು ಅರ್ಥವಾಗುತ್ತದೆ ಎಂದು ಅವರು ವ್ಯಾಖ್ಯಾನಿಸಿದರು.
ಇದೇ ಸಂದರ್ಭದಲ್ಲಿ ಸಾಹಿತಿ ಸಿದ್ದಸ್ವಾಮಿ ಅವರ ‘ಬೌದ್ಧರಾಜ ಮಹಿಷಾಸುರ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಉರಿಲಿಂಗ ಪೆದ್ದೀಮಠದ ಜ್ಞಾನಪ್ರಕಾಶ ಸ್ವಾಮಿ, ಅಷ್ಠಾಂಗ ಧ್ಯಾನ ಕೇಂದ್ರದ ಭಂತೆ ಬೋದಿ ದತ್ತ, ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಮೈಸೂರು ವಿ.ವಿ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಬಿ.ಪಿ.ಮಹೇಶಚಂದ್ರ ಗುರು, ಕಾಂಗ್ರೆಸ್ ಮುಖಂಡ ಪುರುಷೋತ್ತಮ, ಕೆ.ಎಸ್.ಶಿವರಾಮು, ಶಾಂತರಾಜು, ಹರಿಹರ ಆನಂದಸ್ವಾಮಿ, ಸೋಮಯ್ಯ ಮಲೆಯೂರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ನಡೆದ ‘ಮಹಾಬೌದ್ಧ ಭಿಕ್ಕು ಮಹಿಷ’ ಮರವಣಿಗೆಗೆ ಶಾಸಕ ಸತೀಶ ಜಾರಕಿಹೊಳಿ ಚಾಲನೆ ನೀಡಿದರು. ಪುರಭವನದಿಂದ ಹೊರಟ ಮೆರವಣಿಗೆ ಮಹಿಷಾಸುರ ಪ್ರತಿಮೆಯವರೆಗೂ ಸಾಗಿತು.
ಸಮಾನತೆಯಿಲ್ಲದ ಸಮಾಜ...:
‘ಸಮಾನತೆ, ಸ್ವಾತಂತ್ರ್ಯ ಹಾಗೂ ಭ್ರಾತೃತ್ವ ಇಲ್ಲದ ಸಮಾಜವನ್ನು ಸಹಿಸಲಾಗದು’ ಎಂದು ಮೈಸೂರು ವಿ.ವಿ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಬಿ.ಪಿ.ಮಹೇಶಚಂದ್ರ ಗುರು ಟೀಕಿಸಿದರು.
‘ನಮ್ಮ ಸಂವಿಧಾನ ಶ್ರೇಷ್ಠವಾಗಿದೆ. ಆದರೆ, ಹಿಂದಿನ ಸಮಾಜದ ಶೋಷಣೆಯ ಆಧಾರದ ಮೇಲೆ ನಿರ್ಮಾಣಗೊಂಡಿತ್ತು. ಇದೀಗ ಅದೇ ಮಾರ್ಗಕ್ಕೆ ಸಮಾಜ ಕಾಲಿಡುತ್ತಿರುವುದು ಎದೆಯಲ್ಲಿ ಆತಂಕ ಮೂಡಿಸುತ್ತಿದೆ’ ಎಂದರು.
ಸಾಮಾನ್ಯರಲ್ಲಿ ಸಾಮಾನ್ಯಳಾಗಿದ್ದ ಊರಿನ ಮಾರಿ ಚಾಮುಂಡಿ. ಅವಳನ್ನು ಅದ್ಯಾರು ನಾಡ ದೇವತೆ ಎಂದು ಕರೆದರೊ ತಿಳಿಯದಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.