ADVERTISEMENT

ಮೈಸೂರು ದಸರಾ| ದಾಂಡಿಯಾ ನೃತ್ಯದ ಸೊಬಗು ಇಲ್ಲ

ನವರಾತ್ರಿ ಆಚರಣೆ ಸಂಪ್ರದಾಯ, ಪೂಜೆಗಷ್ಟೇ ಸೀಮಿತ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 2:21 IST
Last Updated 24 ಅಕ್ಟೋಬರ್ 2020, 2:21 IST
ದುರ್ಗಾಮಾತೆಯ ಪ್ರತಿಮೆ –ಸಂಗ್ರಹ ಚಿತ್ರ
ದುರ್ಗಾಮಾತೆಯ ಪ್ರತಿಮೆ –ಸಂಗ್ರಹ ಚಿತ್ರ   

ಮೈಸೂರು: ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದ ದಸರಾ ಹಬ್ಬದ ಸಂಭ್ರಮವನ್ನು ಈ ಬಾರಿ ಕೋವಿಡ್‌ ಕಸಿದುಕೊಂಡಿದೆ. ಅದೇ ರೀತಿ ಮೈಸೂರಿನಲ್ಲಿ ನವರಾತ್ರಿ ಸಂಭ್ರಮ ಕೂಡಾ ಸಂಪ್ರದಾಯ ಮತ್ತು ಪೂಜೆಗಷ್ಟೇ ಸೀಮಿತವಾಗಿದೆ.

ನಗರದಲ್ಲಿ ನವರಾತ್ರಿ ಹಬ್ಬವನ್ನು ಸರಳವಾಗಿ ಆಚರಿಸಲು ಮೈಸೂರು ಗುಜರಾತಿ ಸಮಾಜ ಮತ್ತು ಬಂಗಾಳಿ ಅಸೋಸಿಯೇಷನ್‌ ನಿರ್ಧರಿಸಿತ್ತು. ಆದ್ದರಿಂದ ಪ್ರತಿವರ್ಷ ಕಾಣುತ್ತಿದ್ದ ದಾಂಡಿಯಾ ನೃತ್ಯದ ಸೊಬಗು ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ವೈಭವ ಈ ಬಾರಿ ಕಂಡುಬಂದಿಲ್ಲ.

‘ಈ ಬಾರಿ ಸಂಭ್ರಮದ ಆಚರಣೆ ಇಲ್ಲ. ದಾಂಡಿಯಾ ನೃತ್ಯ ಮತ್ತು ಗರ್ಬಾ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಸಮಾಜದ ಸದಸ್ಯರು ಮತ್ತು ಅವರ ಕುಟುಂಬದವರು ಪ್ರತಿದಿನ ರಾತ್ರಿ 8.30ಕ್ಕೆ ನಡೆಯುವ ಆರತಿ ಬೆಳಗುವ ಕಾರ್ಯಕ್ರಮದಲ್ಲಿ ಮಾತ್ರ ಪಾಲ್ಗೊಂಡಿದ್ದಾರೆ. ಮುಂದಿನ ವರ್ಷ ಸಂಭ್ರಮದ ಆಚರಣೆ ಸಾಧ್ಯ ಎಂಬ ವಿಶ್ವಾಸ ನಮ್ಮದು’ ಎಂದು ಮೈಸೂರು ಗುಜರಾತಿ ಸಮಾಜದ ಸದಸ್ಯ ಗೌರವ್‌ ಶಾ ತಿಳಿಸಿದರು.

ADVERTISEMENT

ಗುಜರಾತಿ ಸಮಾಜ ಪ್ರತಿ ವರ್ಷ ನಡೆಸುವ ನವರಾತ್ರಿ ಉತ್ಸವ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯ್ರಮಗಳಿಂದ ರಂಗೇರುತ್ತಿತ್ತು. ಉತ್ಸವದ ಎಲ್ಲ ಒಂಬತ್ತು ದಿನಗಳಲ್ಲೂ ದಾಂಡಿಯಾ ಮತ್ತು ಗರ್ಬಾ ನೃತ್ಯ ಎಲ್ಲರನ್ನೂ ಆಕರ್ಷಿಸುತ್ತಿತ್ತು. ಯುವಕ, ಯುವತಿಯರು ಸಂಭ್ರಮದಿಂದ ಪಾಲ್ಗೊಳ್ಳುತ್ತಿದ್ದರು. ಕೋವಿಡ್‌ನಿಂದಾಗಿ ಸಂಭ್ರಮ ಮಾಯವಾಗಿದೆ.

ದುರ್ಗಾ ಪೂಜೆ ಸರಳ ಆಚರಣೆ: ನವರಾತ್ರಿ ಅವಧಿಯಲ್ಲಿ ನಡೆಯುತ್ತಿದ್ದ ದುರ್ಗಾ ಪೂಜೆ ಕೂಡಾ ಈ ಬಾರಿ ಸರಳವಾಗಿ ಆಯೋಜನೆಯಾಗಿದೆ.

‘ನವರಾತ್ರಿ ಸಮಯದಲ್ಲಿ ಬಂಗಾಳದವರಿಗೆ ದುರ್ಗಾ ಪೂಜೆ ಪ್ರಮುಖ ಉತ್ಸವ ಅಗಿದೆ. ಪ್ರತಿವರ್ಷವೂ ಕೆಆರ್‌ಎಸ್‌ ರಸ್ತೆಯ ಚೌಲ್ಟ್ರಿಯಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದ ದುರ್ಗಾ ಪೂಜೆ ಈ ಬಾರಿ ಕೆಲವೇ ಮಂದಿಗೆ ಸೀಮಿತವಾಗಿದೆ’ ಎಂದು ಮೈಸೂರು ಬಂಗಾಳಿ ಅಸೋಸಿಯೇಷನ್‌ನ ಸದಸ್ಯ ದೇಬಶಿಷ್ ಸಿನ್ಹಾ ತಿಳಿಸಿದರು.

‘ಬೆಳಿಗ್ಗೆ ಪೂಜೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತಿದ್ದವು. ಜತೆಗೆ ಮನರಂಜನೆಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗುತ್ತಿತ್ತು. ಕೋವಿಡ್‌ ಹರಡುವಿಕೆ ತಡೆಯುವ ಉದ್ದೇಶದಿಂದ ಎಲ್ಲ ಮನರಂಜನಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಸಿಎಫ್‌ಟಿಆರ್‌ಐ ಬಳಿಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಅ.22 ರಿಂದ 26ರ ವರೆಗೆ ಪೂಜೆ ಮಾತ್ರ ಏರ್ಪಡಿಸಲಾಗಿದೆ’ ಎಂದರು.

ಬಂಗಾಳಿ ಅಸೋಸಿಯೇಷನ್‌ನವರು ಪ್ರತಿವರ್ಷ ದುರ್ಗೆ, ಲಕ್ಷ್ಮಿ, ಸರಸ್ವತಿ ಮತ್ತು ಗಣೇಶನ ವಿಗ್ರಹ ನಿರ್ಮಿಸಲು ಶಿಲ್ಪಿಗಳನ್ನು ಬಂಗಾಳದಿಂದ ಕರೆತರುತ್ತಿದ್ದರು. ವಿಜಯದಶಮಿ ದಿನ ವಿಗ್ರಹಗಳ ವಿಸರ್ಜನೆಗೆ ವಿಜೃಂಭಣೆಯ ಮೆರವಣಿಗೆ ನಡೆಯುತ್ತಿತ್ತು. ಈ ಬಾರಿ ಮೆರವಣಿಗೆ ಆಯೋಜಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.