ADVERTISEMENT

ಎಚ್.ಡಿ.ಕೋಟೆ | ಶಾಲೆ ಕಟ್ಟಡ ಶಿಥಿಲ: ಬಯಲಲ್ಲೇ ಪಾಠ

ಎಚ್.ಡಿ.ಕೋಟೆ ತಾಲ್ಲೂಕಿನ ಮೇಟಿಕುಪ್ಪೆ ಸರ್ಕಾರಿ ಶಾಲೆ ದುಸ್ಥಿತಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 3:52 IST
Last Updated 27 ಅಕ್ಟೋಬರ್ 2024, 3:52 IST
   

ಎಚ್.ಡಿ.ಕೋಟೆ: ಕಟ್ಟಡದ ಚಾವಣಿಯ ಗಾರೆ ಕಿತ್ತು ಬೀಳುತ್ತಿದೆ, ಮಳೆ ಬಂದರೆ ನಾಡಹೆಂಚಿನ ಎರಡು ಕೊಠಡಿಗಳೂ ಸೋರುತ್ತವೆ, ಭಯದಲ್ಲೇ ಮಕ್ಕಳನ್ನು ಕಳುಹಿಸುವ ಪೋಷಕರು. ಮತ್ತೊಂದೆಡೆ ಶಾಲೆ ಆವರಣದ ಬಯಲಲ್ಲೇ ಪಾಠ ಮಾಡುವ ಶಿಕ್ಷಕರು...

ತಾಲ್ಲೂಕಿನ ಮೇಟಿಕುಪ್ಪೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿಯಿದು.

ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿವರೆಗೆ 37 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮುಖ್ಯಶಿಕ್ಷಕ ಸೇರಿದಂತೆ ಮೂವರು ಕಾಯಂ ಹಾಗೂ ಒಬ್ಬರು ಅತಿಥಿ ಶಿಕ್ಷಕರಿದ್ದಾರೆ. ಐದು ಕೊಠಡಿಗಳಿದ್ದು, ಎಲ್ಲವೂ ಶಿಥಿಲಾವಸ್ಥೆಗೆ ತಲುಪಿವೆ. ಚಾವಣಿ ಗಾರೆ ಕಳಚಿ ಬೀಳುತ್ತಿದೆ. ಮಳೆ ಬಂದರೆ ನಾಡ ಹೆಂಚಿನ ಎರಡು ಕೊಠಡಿಗಳು ಸೋರುತ್ತವೆ. ಹೀಗಾಗಿ ಕೆಲ ಮಕ್ಕಳನ್ನು ಬಯಲಲ್ಲಿ, ಇನ್ನು ಕೆಲ ಮಕ್ಕಳಿಗೆ ವರಾಂಡದಲ್ಲಿ ಪಾಠ ಮಾಡಲಾಗುತ್ತಿದೆ. 

ADVERTISEMENT

ಮಳೆ ಬಂದರೆ ಮಕ್ಕಳು ಜೀವ ಭಯದಿಂದ ಶಾಲೆಗೆ ಬರುವುದಿಲ್ಲ, ಪೋಷಕರೂ ಸಹ ಶಾಲೆಗೆ ಮಕ್ಕಳ ಕಳುಹಿಸುತ್ತಿಲ್ಲ. ಹೀಗಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೊಡಕಾಗುತ್ತಿದೆ.

‘ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮರದ ಕೆಳಗೆ ಹಾಗೂ ವರಾಂಡದಲ್ಲಿ ಕೂರಿಸಿ ಪಾಠ ಮಾಡುತ್ತಿದ್ದೇವೆ. ಮಳೆ ಜಾಸ್ತಿ ಬಂದರೆ ಮನೆಗೆ ಕಳುಹಿಸಲಾಗುತ್ತದೆ’ ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರು ಮಾಹಿತಿ ನೀಡುತ್ತಾರೆ.

‘ಮಕ್ಕಳು ಹಾಗೂ ಶಿಕ್ಷಕರು ಭಯದಲ್ಲೇ ಕಾಲ ಕಳೆಯಬೇಕಾಗಿದೆ. ಕಟ್ಟಡ ಹಾಗೂ ಇತರೆ ಮೂಲಸೌಲಭ್ಯ ಕೊರತೆಯಿಂದ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿದೆ. ಸರ್ಕಾರಿ ಶಾಲೆಗಳ ಸುಧಾರಣೆಗೆ ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದೆ. ಕೋಟಿಗಟ್ಟಲೇ ಹಣ ವ್ಯಯಿಸುತ್ತಿದೆ. ಶಾಲೆಗಳ ಮೂಲಸೌಲಭ್ಯ ಹಾಗೂ ಶಿಕ್ಷಣದ ಗುಣಮಟ್ಟ ಮಾತ್ರ ಬದಲಾವಣೆ ಆಗುತ್ತಿಲ್ಲ’ ಎಂದು ಪೋಷಕ ಚೆನ್ನಬಸವಾಚಾರಿ ದೂರುತ್ತಾರೆ.

‘ಶಾಲೆಯ ಸ್ಥಿತಿ ಬಗ್ಗೆ ಶಾಸಕ ಅನಿಲ್ ಚಿಕ್ಕಮಾದು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ಹಲವು ಬಾರಿ ತರಲಾಗಿದೆ, ಆದರೂ ಸೂಕ್ತ ಕ್ರಮ ಕೈಗೊಳ್ಳದೆ ಮಕ್ಕಳ  ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಶಾಲೆ ಕಟ್ಟಡಕ್ಕೆ ಬೀಗ ಹಾಕಿ ಹೋರಾಟ ಮಾಡಬೇಕಾಗುತ್ತದೆ’ ಎಂದು ಚಕ್ಕೋಡನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್ ಎಚ್ಚರಿಸಿದರು.

‘ಮನವಿ ಸಲ್ಲಿಸಿದಾಗ ಕ್ಷೇತ್ರ ಶಿಕ್ಷಣಾಧಿಕಾರಿ ಬಂದು ನೋಡುತ್ತೇವೆ ಎಂದು ಹೇಳುತ್ತಾರೆ ಆದರೆ ಇಲ್ಲಿಯವರೆಗೆ ಶಾಲೆಗೆ ಬಂದಿಲ್ಲ, ಕ್ರಮ ಕೈಗೊಂಡಿಲ್ಲ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ನಿಂಗಪ್ಪ ಆರೋಪಿಸಿದರು.

ಶಾಲೆ ಕೊಠಡಿಗಳ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದ ನಂತರ ಕ್ರಮ ಕೈಗೊಳ್ಳಲಾಗುವುದು
ಕೃಷ್ಣಯ್ಯ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎಚ್.ಡಿ.ಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.