ADVERTISEMENT

ಪಠ್ಯಪುಸ್ತಕದಲ್ಲಿ ಮುಖ್ಯ ಬದಲಾವಣೆ ಇಲ್ಲ: ಸಚಿವ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 28 ಮೇ 2024, 8:57 IST
Last Updated 28 ಮೇ 2024, 8:57 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಮೈಸೂರು: ‘ಕಳೆದ ವರ್ಷವೇ ಶಾಲಾ ಪಠ್ಯಪುಸ್ತಕ ಪರಿಷ್ಕರಿಸಲಾಗಿದ್ದು, ಈ ವರ್ಷ ಯಾವುದೇ ಮುಖ್ಯ ಬದಲಾವಣೆಯಿಲ್ಲ. ಕೆಲವು ಪದ ಹಾಗೂ ವಾಕ್ಯಗಳಲ್ಲಷ್ಟೇ ಬದಲಾವಣೆಯಾಗಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪರಿಷ್ಕೃತ ಪಠ್ಯಪುಸ್ತಕಗಳು ವೆಬ್‌ಸೈಟ್‌ನಲ್ಲಿ ಲಭ್ಯವಿವೆ. ಶೇ 95ರಷ್ಟು ಪಠ್ಯಪುಸ್ತಕಗಳು ಈಗಾಗಲೇ ಶಾಲೆಗಳಿಗೆ ತಲುಪಿವೆ’ ಎಂದರು.

‘ಶೈಕ್ಷಣಿಕ ಚಟುವಟಿಕೆಗಳಲ್ಲಿ ಮಕ್ಕಳು ಯಾವುದೇ ತೊಂದರೆ ಇಲ್ಲದಂತೆ ತೊಡಗಿಸಿಕೊಳ್ಳಲು ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ. ಕೋವಿಡ್‌ ನಂತರ ಶಾಲಾ ಮಕ್ಕಳಿಗೆ ಬೈಸಿಕಲ್‌ ಸಿಕ್ಕಿಲ್ಲ. ಈ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಸರ್ಕಾರ ಸಂಪುಟದಲ್ಲಿ ಚರ್ಚಿಸಿ ವಿತರಿಸಲು ನಿರ್ಧರಿಸಲಾಗುವುದು’ ಎಂದು ಮಾಹಿತಿ ನೀಡಿದರು.

ADVERTISEMENT

‘ಶೂ ವಿತರಿಸಲು ಶಾಲಾಭಿವೃದ್ಧಿ ಸಮಿತಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಸರ್ಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರ ಗೌರವಧನ ಹೆಚ್ಚಿಸಲಾಗುವುದು. ಬಿಬಿಎಂಪಿ ಶಾಲೆಗಳನ್ನು ಇಲಾಖೆ ತೆಕ್ಕೆಗೆ ತೆಗೆದುಕೊಳ್ಳಲು ಉತ್ಸುಕವಾಗಿದ್ದು, ಈ ಬಗ್ಗೆ ಜೂನ್ 4ರ ನಂತರ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು’ ಎಂದೂ ಮಾಹಿತಿ ನೀಡಿದರು.

‘ರಾಜ್ಯದಲ್ಲಿ ಸುಮಾರು 6 ಸಾವಿರ ಗ್ರಾಮ ಪಂಚಾಯಿತಿಗಳಿದ್ದು, ಎರಡು ಗ್ರಾಮ ಪಂಚಾಯಿತಿಗೊಂದಂತೆ 3 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸಲಾಗುವುದು. ಈ ಬಾರಿ 600 ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುಗುತ್ತಿದೆ. ಶಿಕ್ಷಕರ ನೇಮಕಾತಿಗೂ ಕ್ರಮವಹಿಸಲಾಗಿದೆ’ ಎಂದು ತಿಳಿಸಿದರು.

‘ಖಾಸಗಿ ಶಾಲೆಗಳಲ್ಲಿ ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿಯೂ ಬೇಸಿಗೆಯಲ್ಲಿ ವಿಶೇಷ ತರಗತಿಗಳನ್ನು ನಡೆಸುವ ಬಗ್ಗೆ ಚಿಂತಿಸಲಾಗುವುದು’ ಎಂದರು.

‘ವ್ಯಕ್ತಿಗತ ಟೀಕೆ ಬೇಡ’: ತಮ್ಮ ಕೇಶ ವಿನ್ಯಾಸದ ಕುರಿತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಟೀಕೆಗೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ‘ತಲೆಯೊಳಗಿನ ವಿಚಾರದ ಬಗ್ಗೆ ಚರ್ಚಿಸಲಿ, ತಲೆಗೂದಲ ಬಗ್ಗೆಯಲ್ಲ. ಅಬ್ದುಲ್ ಕಲಾಂ ಅವರ ಹೇರ್‌ ಸ್ಟೈಲ್‌ ಬಗ್ಗೆ ಹೀಗೆ ಮಾತನಾಡಿದ್ದಾರೆಯೇ. ಕೋವಿಡ್‌ ವೇಳೆ ಪ್ರಧಾನಿ ನರೇಂದ್ರ ಮೋದಿ ಕೂಡ ಗಡ್ಡ ಬಿಟ್ಟಿದ್ದರು’ ಎಂದರು.

‘ಡಿ.ಕೆ.ಶಿವಕುಮಾರ್ ಅವರ ಗಡ್ಡದ ಬಗ್ಗೆ ಬಿಜೆಪಿಯವರು ಮಾತನಾಡಿ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ 120ರಿಂದ 66ಕ್ಕೆ ಬಂದರು. ಇದೀಗ ನನ್ನ ಹೇರ್‌ ಸ್ಟೈಲ್‌ ಬಗ್ಗೆ ಮಾತನಾಡಿ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ 26 ಸ್ಥಾನದಿಂದ 6ಕ್ಕೆ ಬರಲಿದ್ದಾರೆ’ ಎಂದರು.

‘ವ್ಯಕ್ತಿಗತ ಟೀಕೆ ಬಿಡಬೇಕು. ಹಾಸನ ಪ್ರಕರಣದ ರಾಡಿ ಎಷ್ಟಾಗಿದೆ. ನಾನು ಆ ಬಗ್ಗೆಯೆಲ್ಲ ಮಾತನಾಡುವುದಿಲ್ಲ. ಅದಕ್ಕೆಲ್ಲ ಕಾನೂನಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಗೌರವದಿಂದ ಅವರು ನಡೆದುಕೊಳ್ಳಬೇಕು. ಶೇ 40 ಕಮಿಷನ್‌ನಲ್ಲಿ ಅವರು ಹೇರ್ ಕಟ್‌ ಮಾಡುವುದು ಬೇಡ’ ಎಂದು ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.