ADVERTISEMENT

ಮೌಢ್ಯ ನಿಷೇಧ ಕಾನೂನು ಕಟ್ಟುನಿಟ್ಟಾಗಿ ಜಾರಿಗೊಳಿಸಿ: ವಿಜ್ಞಾನ ಸಮ್ಮೇಳನ ನಿರ್ಣಯ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 12:34 IST
Last Updated 10 ಸೆಪ್ಟೆಂಬರ್ 2022, 12:34 IST
ಮೈಸೂರಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಆಯೋಜಿಸಿದ್ದ 14ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನದಲ್ಲಿ ಪ್ರೊ.ಬಿ.ಕೆ.ಚಳಗೇರಿ, ಪ್ರೊ.ಡಿ.ಆರ್.ಬಳೂರಗಿ, ಪ್ರೊ.ಎಂ.ಆರ್.ನಾಗರಾಜು ಹಾಗೂ ಶ್ರೀಮತಿ ಹರಿಪ್ರಸಾದ್ ಅವರಿಗೆ ‘ಡಾ.ಎಚ್.ನರಸಿಂಹಯ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯೆ ಮೀನಾಕ್ಷಿ ಕುಡುಸೋಮಣ್ಣವರ, ಅಧ್ಯಕ್ಷ ಗಿರೀಶ್ ಕಡ್ಲೆವಾಡ, ಕೆಎಸ್‌ಒಯು ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್‌, ವಿಧಾನಪರಿಷತ್‌ ಸದಸ್ಯ ಎ.ಎಚ್.ವಿಶ್ವನಾಥ್, ಭಾರತ್ ಸ್ಕೌಟ್ ಅಂಡ್ ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ಇಸ್ರೋ ನಿವೃತ್ತ ಅಧ್ಯಕ್ಷ ಎ.ಎಸ್.ಕಿರಣ್‌ಕುಮಾರ್, ಸಮ್ಮೇಳನದ ರಾಜ್ಯ ಸಂಯೋಜಕ ಎ.ಎನ್.ಮಹೇಶ್ ಇದ್ದಾರೆ/ ಪ್ರಜಾವಾಣಿ ಚಿತ್ರ

ಮೈಸೂರು: ರಾಜ್ಯದಲ್ಲಿ ಮೌಢ್ಯ ನಿಷೇಧ ಕಾನೂನನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸುವುದು ಸೇರಿದಂತೆ 10 ನಿರ್ಣಯಗಳನ್ನು 14ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ ತೆಗೆದುಕೊಂಡಿತು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು (ಕೆಆರ್‌ವಿಪಿ) ಇಲ್ಲಿನ ಕೆಎಸ್‌ಒಯು ಘಟಿಕೋತ್ಸವದಲ್ಲಿ ಶನಿವಾರ ಆಯೋಜಿಸಿದ್ದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪರಿಷತ್ತಿನ ಖಜಾಂಚಿ ಈ.ಬಸವರಾಜು ಮಂಡಿಸಿದರು. ನೆರೆದಿದ್ದವರು ಚಪ್ಪಾಳೆಯ ಮೂಲಕ ಅನುಮೋದಿಸಿದರು. ನಿರ್ಣಯಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಆಯೋಜಕರು ತಿಳಿಸಿದರು.

ನಿರ್ಣಯಗಳು:

ADVERTISEMENT

ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳನ್ನು ಸ್ಥಾಪಿಸಬೇಕು. ಅದನ್ನು ಬಳಸಿಕೊಂಡು ಮಕ್ಕಳಿಗೆ ಕಲಿಸಲು ವಿಜ್ಞಾನ ಶಿಕ್ಷಕರಿಗೆ ತರಬೇತಿ ನೀಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು.

ಏಕ ಬಳಕೆ ಪ್ಲಾಸ್ಟಿಕ್‌ ಅನ್ನು ದೇಶದಾದ್ಯಂತ ನಿಷೇಧಿಸಿದ್ದರೂ ಹಲವೆಡೆ ಇನ್ನೂ ಬಳಕೆಯಾಗುತ್ತಿದ್ದು, ಮಾರಾಟಗಾರರು ಹಾಗೂ ತಯಾರಕರ ಮೇಲೆ ಕಠಿಣ ಕ್ರಮ ಜರುಗಿಸಬೇಕು.

ಜೀವ ವೈವಿಧ್ಯದ ಜೀವಾಳವಾಗಿರುವ ಪಶ್ಚಿಮ ಘಟ್ಟಗಳಲ್ಲಿನ ಅರಣ್ಯ ರಕ್ಷಣೆಗೆ ಹಾಗೂ ಅಲ್ಲಿ ಅರಣ್ಯೀಕರಣಕ್ಕೆ ವಿಶೇಷ ಯೋಜನೆ ಜಾರಿಗೊಳಿಸಬೇಕು. ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಪಠ್ಯೇತರ ಚಟುವಟಿಕೆಯ ಭಾಗವಾಗಿ ವಿದ್ಯಾರ್ಥಿಗಳಿಗೆ ಕೆರೆ ಸಮೀಕ್ಷೆ–ಅಧ್ಯಯನ ನಡೆಸಲು ವಿಶೇಷ ಕಾರ್ಯಕ್ರಮ ರೂ‍ಪಿಸಬೇಕು. ಕೆರೆಗಳ ಅತಿಕ್ರಮಣ ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು.

ಮಹಿಳೆಯರು ವಿಜ್ಞಾನ ಕ್ಷೇತ್ರದಲ್ಲಿ ಅದರಲ್ಲೂ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಪೂರಕವಾದ ವಾತಾವರಣ ನಿರ್ಮಿಸಬೇಕು.

ವಿದ್ಯಾರ್ಥಿಗಳನ್ನು ಖಗೋಳ ವಿಜ್ಞಾನದೆಡೆಗೆ ಆಕರ್ಷಿಸುವ ನಿಟ್ಟಿನಲ್ಲಿ ಸಂಚಾರಿ ತಾರಾಲಯ ಯೋಜನೆ ಬಲಪಡಿಸಬೇಕು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆ ಎಂದು ಪರಿಗಣಿಸಿ, ವಾರ್ಷಿಕ ಅನುದಾನ ಒದಗಿಸಬೇಕು.

ಅಖಿಲ ಕರ್ನಾಟಕ ಕನ್ನಡ ವಿಜ್ಞಾನ ಸಮ್ಮೇಳನವನ್ನು ಪ್ರತಿ ವರ್ಷ ಒಂದೊಂದು ಜಿಲ್ಲೆಯಲ್ಲಿ ಆಯೋಜಿಸಲು ಕನ್ನಡ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಸರ್ಕಾರ ಅನುದಾನ ನೀಡಬೇಕು.

‘ಜೇಮ್ಸ್‌ ವೆಬ್ ದೂರದರ್ಶಕ’ ಮಾದರಿಯಂತೆ ಇಸ್ರೋನಿಂದಲೂ ಬಾಹ್ಯಾಕಾಶ ದೂರದರ್ಶಕ ಉಡಾವಣೆಗೆ ಅನುದಾನ ಒದಗಿಸಬೇಕು ಎಂದು ಸಮ್ಮೇಳನ ಒತ್ತಾಯಿಸಿತು.

ವಿಜ್ಞಾನ ಜನಪ್ರಿಯಗೊಳಿಸಲು ಶ್ರಮಿಸಿದ ಮೈಸೂರಿನ ಸಿಎಫ್‌ಟಿಆರ್‌ಐ ನಿವೃತ್ತ ವಿಜ್ಞಾನಿ ಶ್ರೀಮತಿ ಹರಿಪ್ರಸಾದ್, ಬೆಂಗಳೂರಿನ ವಿಜ್ಞಾನ ಸಂವಹನಕಾರ ಪ್ರೊ.ಎಂ.ಆರ್.ನಾಗರಾಜು, ವಿಜಯಪುರದ ನಿವೃತ್ತ ಪ್ರಾಧ್ಯಾಪಕ ಪ್ರೊ.ಡಿ.ಆರ್.ಬಳೂರಗಿ ಮತ್ತು ಕುಲಬುರಗಿಯ ಶಿಕ್ಷಣ ತಜ್ಞ ಪ್ರೊ.ಬಿ.ಕೆ.ಚಳಗೇರಿ ಅವರಿಗೆ ಪರಿಷತ್ತಿನಿಂದ ಇದೇ ಮೊದಲಿಗೆ ರಾಜ್ಯಮಟ್ಟದ ‘ಡಾ.ಎಚ್.ನರಸಿಂಹಯ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಇಸ್ರೋ ನಿವೃತ್ತ ಅಧ್ಯಕ್ಷ, ಖ್ಯಾತ ವಿಜ್ಞಾನಿ ಎ.ಎಸ್.ಕಿರಣ್‌ಕುಮಾರ್‌ ಸರ್ವಾಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್‌ ಸದಸ್ಯ ಎ.ಎಚ್.ವಿಶ್ವನಾಥ್, ಭಾರತ್ ಸ್ಕೌಟ್ ಅಂಡ್ ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ಪರಿಷತ್ತಿನ ಅಧ್ಯಕ್ಷ ಗಿರೀಶ್ ಕಡ್ಲೆವಾಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.