ADVERTISEMENT

ಸರ್ಕಾರಿ ಸಂಸ್ಥೆಗಳನ್ನು ಖಾಸಗಿಗೆ ವಹಿಸಿ: ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2022, 15:53 IST
Last Updated 14 ಅಕ್ಟೋಬರ್ 2022, 15:53 IST
   

ಮೈಸೂರು: ‘ಸರ್ಕಾರಿ ಸಂಸ್ಥೆಗಳನ್ನು ಮುಚ್ಚಿ ಅವುಗಳನ್ನು ಇನ್ಫೊಸಿಸ್‌ಗೋ, ಅದಾನಿ, ಅಂಬಾನಿ ಮೊದಲಾದವರ ಖಾಸಗಿ ಕಂಪನಿಗಳಿಗೋ ಕೊಡಬೇಕು. ಆಗ, ನೌಕರರೆಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ’ ಎಂದು ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ ಸಲಹೆ ನೀಡಿದರು.

ರೋಟರಿ ಮೈಸೂರು ಉತ್ತರ ವತಿಯಿಂದ ಜೆಎಲ್‌ಬಿ ರಸ್ತೆಯ ರೋಟರಿ ಕೇಂದ್ರದಲ್ಲಿ ಶುಕ್ರವಾರ ವಿಶ್ವ ಫಾರ್ಮಾಸಿಸ್ಟ್ ದಿನಾಚರಣೆ ಅಂಗವಾಗಿ, ಫಾರ್ಮಾಸಿಸ್ಟ್‌ ಎಂ.ನಿರಂಜನಮೂರ್ತಿ ಸ್ಮರಣಾರ್ಥ ಆಯೋಜಿಸಿದ್ದ ‘ರೋಟರಿ ಫಾರ್ಮಾಸಿಸ್ಟ್ ಹಾಗೂ ಕೆಮಿಸ್ಟ್ ಅವಾರ್ಡ್ - 2022’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಲ್ಲಿನ ಪ್ರಾಮಾಣಿಕತೆ ಸರ್ಕಾರಿ ಸಂಸ್ಥೆಗಳಲ್ಲಿ ಇರುವುದಿಲ್ಲ. ಮಾನಸ ಗಂಗೋತ್ರಿಯಲ್ಲಿ ₹ 2.50 ಲಕ್ಷ ಸಂಬಳ ಪಡೆಯುವವರು ಬೆಳಿಗ್ಗೆ ಬಂದು ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ಜೂಜಿಗೋ, ಚೀಟಿ ನಡೆವುದಕ್ಕೋ ಹೋಗುತ್ತಾರೆ’ ಎಂದು ವ್ಯಂಗ್ಯವಾಡಿದರು.

ADVERTISEMENT

ಕಥೆ ಏನಾಗುತ್ತಿತ್ತು?:

‘ಸರ್ಕಾರಿ ಕಾಲೇಜುಗಳಷ್ಟೇ ಇದ್ದಿದ್ದರೆ, ಖಾಸಗಿ ಸಂಸ್ಥೆಗಳು ಮತ್ತವುಗಳ ಕಾಲೇಜುಗಳು ಇಲ್ಲದಿದ್ದಿದ್ದರೆ ನಮ್ಮ ದೇಶದ ಕಥೆ ಏನಾಗುತ್ತಿತ್ತು? ಖಾಸಗಿ ಕಾಲೇಜುಗಳಲ್ಲಿ ಓದಿದವರು ಬುದ್ಧಿವಂತರಾಗಿ ವಿದೇಶಗಳಲ್ಲಿ ಒಳ್ಳೊಳ್ಳೆಯ ಸ್ಥಾನದಲ್ಲಿದ್ದಾರೆ’ ಎಂದರು.

‘ಯಾವ ದೇಶದಲ್ಲೂ ಇಲ್ಲದಷ್ಟು ಬುದ್ಧಿವಂತರು ನಮ್ಮಲ್ಲಿದ್ದಾರೆ. ಆದರೆ, ಅವರನ್ನು ಬಳಸಿಕೊಳ್ಳುವಲ್ಲಿ ವ್ಯವಸ್ಥೆ ಸೋತಿದೆಯೋ? ಸರ್ಕಾರ ವಿಫಲವಾಗಿದೆಯೋ ತಿಳಿಯದು’ ಎಂದು ವಿಷಾದಿಸಿದರು.

‘ವಿಜ್ಞಾನಿಗಳು ಮಾಡಿದ ಸಂಶೋಧನೆಯನ್ನು ಜನರಿಗೆ ತಲುಪಿಸುವ ಕೆಲಸವನ್ನು ಫಾರ್ಮಾಸಿಸ್ಟ್‌ಗಳು ಮಾಡುತ್ತಿದ್ದಾರೆ. ಹೀಗಾಗಿ, ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ವಿಜ್ಞಾನಿಗಳಂತೆಯೇ ಫಾರ್ಮಾಸಿಸ್ಟ್‌ಗಳು‌ ಕೂಡ ಮುಖ್ಯವೇ. ಅತ್ಯುನ್ನತ ಕೊಡುಗೆಯನ್ನು ಅವರು ದೇಶಕ್ಕೆ ನೀಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಕೈಜೋಡಿಸಿದರೆ:

‘ಫಾರ್ಮಾಸಿಸ್ಟ್‌ಗಳು ಎಷ್ಟು ಅವಶ್ಯ ಎನ್ನುವುದನ್ನು ಕೋವಿಡ್ ಕಾಲದಲ್ಲಿ ಜನರು ಅರಿತಿದ್ದಾರೆ. ವಿಜ್ಞಾನಿಗಳು ಹಾಗೂ ಫಾರ್ಮಾಸಿಸ್ಟ್‌ಗಳು ಕೈಜೋಡಿಸಿದರೆ ಎಂತಹ ಮಾರಕ ಕಾಯಿಲೆ ಬಂದರೂ ಹೋಗಲಾಡಿಸುವ ಶಕ್ತಿ ಇದೆ ಎಂಬುದನ್ನು ಕೋವಿಡ್–19 ಸಂದರ್ಭದಲ್ಲಿ ತೋರಿಸಿದ್ದೇವೆ. ಹಿಂದೆ ಲಸಿಕೆ ಬರಲು ಬಹಳ ವರ್ಷಗಳೇ ಬೇಕಾಗುತ್ತಿದ್ದವು. ಆದರೆ, ಕೊರೊನಾ ಬಂದಾಗ ಕೇವಲ ಒಂದು ವರ್ಷದಲ್ಲಿ ಹಲವು‌ ಕಂಪನಿಗಳು ಲಸಿಕೆಗಳನ್ನು ಸಂಶೋಧಿಸಿದವು. ಅವು ಜನರಿಗೆ ಲಭ್ಯವೂ ಆದವು. ಇದಕ್ಕೆ ವಿಜ್ಞಾನದ ಪ್ರಗತಿ ಕಾರಣವಾಗಿದೆ’ ಎಂದರು.

‘ಜನರ ಆರೋಗ್ಯ ಕಾಪಾಡುತ್ತಿರುವ ಫಾರ್ಮಾಸಿಸ್ಟ್‌ಗಳನ್ನು ಬಹಳ ಗೌರವದಿಂದ ಕಾಣಬೇಕು. ಒಳ್ಳೆಯ ಕೆಲಸ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು’ ಎಂದರು.

ರೋಟರಿ ಮೈಸೂರು ಉತ್ತರ ಅಧ್ಯಕ್ಷ ಎಚ್‌.ಎಸ್.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಲಯದ ಉಪ ಔಷಧ ನಿಯಂತ್ರಕ ಬಿ.‍ಪಿ.ಅರುಣ್, ಕಾರ್ಯದರ್ಶಿ ಕೆ.ಲೋಕನಾಥ್, ರೊಟೇರಿಯನ್ಗಳಾದ ಎ.‍ಪಿ.ವಿರೂಪಾಕ್ಷ, ರಾಜಶೇಖರ ಕದಂಬ ಇದ್ದರು.

ಕನ್ನಡ ಕಲಾ ಕೂಟದ ಅಧ್ಯಕ್ಷ ಎಂ‌.ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.