ADVERTISEMENT

ಮೈಸೂರಿನಲ್ಲಿ ನ. 25ರಂದು ಎಸ್‌ಡಿಪಿಐ ರಾಜ್ಯ ಪ್ರತಿನಿಧಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 7:37 IST
Last Updated 24 ನವೆಂಬರ್ 2024, 7:37 IST
<div class="paragraphs"><p>ಅಬ್ದುಲ್ ಮಜೀದ್</p></div>

ಅಬ್ದುಲ್ ಮಜೀದ್

   

ಮೈಸೂರು: ‘ಎಸ್‌ಡಿಪಿಐ (ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ) ರಾಜ್ಯ ಪ್ರತಿನಿಧಿಗಳ ಸಭೆಯನ್ನು ನ.25 ಹಾಗೂ 26ರಂದು ಇಲ್ಲಿನ ಮಣಿಪಾಲ್ ಆಸ್ಪತ್ರೆ ಸಮೀಪದ ರಿಂಗ್‌ ರಸ್ತೆಯಲ್ಲಿರುವ ವೈಟ್‌ ಪ್ಯಾಲೇಸ್ ಕನ್ವೆನ್ಸನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ’ ಎಂದು ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ತಿಳಿಸಿದರು.

ಇಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘‌25ರಂದು ಬೆಳಿಗ್ಗೆ 10.30ಕ್ಕೆ ಸಭೆ ಆರಂಭಗೊಳ್ಳಲಿದೆ. 31 ಸಂಘಟನಾತ್ಮಕ ಜಿಲ್ಲಾ ಸಮಿತಿಗಳ 500 ಪದಾಧಿಕಾರಿಗಳು ಹಾಗೂ ಮಹಿಳಾ ಘಟಕದ 50 ಮಂದಿ ಭಾಗವಹಿಸುತ್ತಾರೆ. ಸಂಘಟನೆ ಬಲಪಡಿಸುವ ಬಗ್ಗೆ ಚರ್ಚೆ ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.

ADVERTISEMENT

‘ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಂ‌.ಕಾಂಬ್ಳೆ ಉದ್ಘಾಟಿಸುವರು. ರಾಜ್ಯ ಉಸ್ತುವಾರಿ ಅಬ್ದುಲ್ ಮಜೀದ್ ಫೈಜಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲಿಯಾಸ್ ಮಹಮ್ಮದ್, ರಾಷ್ಟ್ರೀಯ ಕಾರ್ಯದರ್ಶಿ ಆಲ್ಫೋನ್ಸೊ ಫ್ರಾಂಕೋ, ರಾಜ್ಯ ಘಟಕದ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ವಿಷಯಗಳನ್ನು ಮಂಡಿಸುವರು. ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಸಮಾಲೋಚನೆ ನಡೆಯಲಿದೆ. ಮುಂಬರುವ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸುವ ಕುರಿತು ನಿರ್ಣಯ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ವಕ್ಫ್ ಮಂಡಳಿಯ ನಿರ್ಲಕ್ಷ್ಯ ಹಾಗೂ ತಪ್ಪಿನಿಂದಾಗಿ ಅದರ ಆಸ್ತಿ ಒತ್ತುವರಿ‌ ಆಗುತ್ತಿದೆ. ನೋಟಿಸ್ ನೀಡಿ ಒತ್ತುವರಿದಾರರ ಬಳಿ ಇರುವ ದಾಖಲೆಗಳನ್ನು ಪಡೆದು ಪರಿಶೀಲಿಸುವುದೇ ತಪ್ಪೆಂದರೆ ಹೇಗೆ? ನೋಟಿಸ್ ಕೊಡುವುದು ಒಂದು ಪ್ರಕ್ರಿಯೆಯಷ್ಟೆ. ರೈತರು ಅಥವಾ ನೋಟಿಸ್ ಪಡೆದವರು ಸಮರ್ಪಕ ದಾಖಲೆ ಕೊಟ್ಟು ಸ್ಪಷ್ಟಪಡಿಸಿಕೊಳ್ಳಬೇಕು. ಆದರೆ, ಬಿಜೆಪಿಯವರು ಅದನ್ನೇ ದೊಡ್ಡ ವಿವಾದ ಎಂಬಂತೆ ಬಿಂಬಿಸಿ, ಬೂಟಾಟಿಕೆ ಮಾಡುತ್ತಿದ್ದಾರೆ’ ಎಂದು ದೂರಿದರು.

ಪ್ರತಾಪ ಸಿಂಹಗೆ ಸವಾಲು:

‘ರೈತರ ಪರವಾಗಿ ಬಿಜೆಪಿಯವರಿಗೆ ಹಿಂದೆಂದೂ ಇಲ್ಲದ ಪ್ರೇಮ ಈಗ ಬಂದಿರುವುದೇಕೆ? ನಾವು ರೈತರ ಪರ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ತಂದಿದ್ದೇಕೆ. ಆಗ, ಪ್ರತಾಪ ಸಿಂಹ ಮೊದಲಾದವರು ಏನು ಮಾಡುತ್ತಿದ್ದರು? ದೆಹಲಿಯಲ್ಲಿ ರೈತರು ನಿರಂತರವಾಗಿ ಹೋರಾಡುತ್ತಲೇ ಇದ್ದಾರೆ. ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟು ಈಡೇರಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ಅವರ ಅಹವಾಲುಗಳನ್ನು ಕೇಳುವ ಕಾಳಜಿಯನ್ನು ಬಿಜೆಪಿ ಮುಖಂಡರು ತೋರುತ್ತಿಲ್ಲವೇಕೆ?’ ಎಂದು ಅಬ್ದುಲ್ ಮಜೀದ್ ಕೇಳಿದರು.

‘ಈಗ ರೈತರ ಬಗ್ಗೆ ಮಾತನಾಡುವ ಪ್ರತಾಪ ಸಿಂಹ ಸಂಸದರಾಗಿದ್ದಾಗ ಕೊಡಗು ಜಿಲ್ಲೆಯ ಅದೆಷ್ಟು ಬಹರ್‌ಹುಕುಂ ರೈತರಿಗೆ ಸಾಗುವಳಿ ಚೀಟಿ ಕೊಡಿಸಿದ್ದಾರೆ? ಕ್ಷೇತ್ರದ ಎಷ್ಟು ಮಂದಿ ಕೃಷಿಕರಿಗೆ ಭೂಮಿ ಮಂಜೂರು ಮಾಡಿಸಿದ್ದಾರೆ ಎಂಬುದರ ಅಂಕಿ–ಅಂಶಗಳನ್ನು ಬಿಡುಗಡೆ ಮಾಡಲಿ’ ಎಂದು ಸವಾಲು ಹಾಕಿದರು.

‘ಕೇಂದ್ರ ಸರ್ಕಾರವು ರೈತರಿಗೆ ಮಾರಕವಾದ ಕರಾಳ ಕಾಯ್ದೆಗಳನ್ನು ತಂದಾದ ಪ್ರತಾಪ ಸಿಂಹ ಮೊದಲಾದವರು ಎಲ್ಲಿ ಹೋಗಿದ್ದರು? ವಿರೋಧಿಸಲಿಲ್ಲವೇಕೆ? ರೈತರು ದೆಹಲಿಯಲ್ಲಿ ಸರ್ಕಾರದ ವಿರುದ್ಧ ಚಳಿ, ಗಾಳಿ, ಮಳೆ ಎನ್ನದೇ ಹೋರಾಟ ಮಾಡಿದರು. ಪ್ರಾಣವನ್ನೂ ಕಳೆದುಕೊಂಡರು. ಹೋರಾಟಕ್ಕೆ ಮಣಿದ ಸರ್ಕಾರ ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡಿದ್ದಾಗಿ ಹೇಳಿತು. ಬಿಜೆಪಿಯ ಬೂಟಾಟಿಕೆಯನ್ನು ಜನರು ಅರ್ಥ ಮಾಡಿಕೊಳ್ಳಬೇಕು’ ಎಂದು ಕೋರಿದರು.

ನ್ಯಾಯಾಲಯವೇ ಹೇಳಿದೆ:

‘ಮಠ, ಮಂದಿರ, ಚರ್ಚ್ ಅಥವಾ ಮಸೀದಿ ಸೇರಿದಂತೆ ಯಾವುದೇ ಧಾರ್ಮಿಕ ಕೇಂದ್ರಗಳಿಗೆ ಅಥವಾ ಆ ವಿಷಯಕ್ಕೆ ಜಮೀನನ್ನು ದಾನ ಕೊಟ್ಟಿದ್ದರೆ ಅದು ಉಳುತ್ತಿರುವವರಿಗೆ ಯಾವುದೇ ಕಾರಣಕ್ಕೂ ಸಿಗುವುದಿಲ್ಲ. ಉಳುವವನೇ ಜಮೀನಿನ ಒಡೆಯ ಎಂಬುದು ಕೂಡ ಅನ್ವಯವಾಗುವುದಿಲ್ಲ. ಭೂಸುಧಾರಣಾ ಕಾಯ್ದೆಯೂ ಅನ್ವಯ ಆಗುವುದಿಲ್ಲ. ಅದನ್ನು ನ್ಯಾಯಾಲಯಗಳ ಹಲವು ತೀರ್ಪಿನಲ್ಲಿ ಹೇಳಲಾಗಿದೆ’ ಎಂದು ತಿಳಿಸಿದರು.

‘ವಕ್ಫ್ ಆಸ್ತಿ ಒತ್ತುವರಿದಾರರಿಗೆ ನೀಡಿರುವ ನೋಟಿಸ್‌ ವಾಪಸ್ ಪಡೆಯುತ್ತೇವೆ ಎಂದು ಹೇಳಿರುವ ಸಿದ್ದರಾಮಯ್ಯ ಅವರು ‘ಯೂಟರ್ನ್’ ಮುಖ್ಯಮಂತ್ರಿ. ವಕ್ಫ್‌ ಆಸ್ತಿ ಒತ್ತುವರಿಯನ್ನು ತೆರವುಗೊಳಿಸುವ ಬಗ್ಗೆ ಬಿಜೆಪಿ ಹಿಂದೆ ಪ್ರಣಾಳಿಕೆಯಲ್ಲೇ ಹೇಳಿತ್ತು’ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಫತ್‌ ಖಾನ್‌, ರಾಜ್ಯ ಸಮಿತಿ ಸದಸ್ಯ ಅಮ್ಜದ್ ಖಾನ್, ಜಿಲ್ಲಾ ಘಟಕದ ಕಾರ್ಯದರ್ಶಿ ಫರ್ದೀನ್, ಜಿಲ್ಲಾ ಘಟಕದ ಉಪಾಧ್ಯಕ್ಷ ಎಸ್. ಸ್ವಾಮಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.