ಮೈಸೂರು: ಉದ್ಯೋಗ ಸೃಷ್ಟಿಯೇ ಮೊದಲ ಆದ್ಯತೆಯಾಗಬೇಕು ಎಂಬ ಅಭಿಪ್ರಾಯ, ಮಂಗಳವಾರ ಇಲ್ಲಿ ಆಯೋಜಿಸಿದ್ದ ‘ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ): ಹಿಂದೆ ಮತ್ತು ಮುಂದೆ’ ವಿಚಾರ ಸಂಕಿರಣದಲ್ಲಿ ಧ್ವನಿಸಿತು.
‘ಪ್ರಜಾವಾಣಿ’ ವತಿಯಿಂದ, ಜ್ಞಾನ ಸರೋವರ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್ ಸಹಯೋಗದಲ್ಲಿ ಆಯೋಜಿಸಿದ್ದ ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಸಂಪನ್ಮೂಲ ವ್ಯಕ್ತಿಗಳು, ಆರ್‌ಸಿಇಪಿ ಒಪ್ಪಂದದ ವಿವಿಧ ಮಗ್ಗಲುಗಳನ್ನು ಮುಂದಿಟ್ಟು ಚರ್ಚೆಗೆ ಅವಕಾಶ ಮಾಡಿಕೊಟ್ಟರು. ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ಪ್ರಮಾಣದ ಬಗ್ಗೆ ಆತಂಕ ವ್ಯಕ್ತಪಡಿಸಿದ ವೇದಿಕೆ, ಅದನ್ನು ಎದುರಿಸಲು ಸಜ್ಜಾಗುವ ಮಾರ್ಗಗಳತ್ತಲೂ ಬೆಳಕು ಚೆಲ್ಲಿತು.
ಕಾರ್ಯಕ್ರಮದಲ್ಲಿ, ‘ಪ್ರಜಾವಾಣಿ’ ದೀಪಾವಳಿ ಕಥೆ, ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದ ಸಾಹಿತಿ ದೇವನೂರ ಮಹಾದೇವ, ಭಾರತದಲ್ಲಿ ಪೂತನಿ ಬಂಡವಾಳಶಾಹಿ (ಕ್ರೋನಿ ಕ್ಯಾಪಿಟಲ್) ಮತ್ತು ಆಳ್ವಿಕೆಯು ಜೊತೆಗೂಡಿ ‘ಉದ್ಯೋಗ ನಾಶ ಯಜ್ಞ’ ನಡೆಸುತ್ತಿವೆ ಎಂದು ಟೀಕಿಸಿದರು.
'ತಾವು ಬೀದಿಗೆ ಬೀಳುತ್ತಿರುವುದನ್ನು ಜನರು ಅರಿಯಬಾರದೆಂದು ಸರ್ಕಾರವು ಭಾವನಾತ್ಮಕ ಅಫೀಮು ಕುಡಿಸುತ್ತಿದೆ. ಟಿಪ್ಪು ವಿಷಯವನ್ನು ತರುತ್ತದೆ, ಅಂಬೇಡ್ಕರ್ ಸಂವಿಧಾನ ಬರೆದಿಲ್ಲ ಎನ್ನುತ್ತದೆ, ಪಾಕಿಸ್ತಾನದ ಭೀತಿ ತೋರಿಸುತ್ತದೆ. ಮಾದಕಲೋಕ ಸೃಷ್ಟಿಸುತ್ತಿದೆ. ಇಂಥ ವ್ಯಾಘ್ರನ ಗೋಮುಖವನ್ನು ಬಯಲಿಗೆಳೆಯುವ ಅಗತ್ಯವಿದೆ’ ಎಂದರು.
ಪ್ರತಿಭಟನೆ ಜಾರಿಯಲ್ಲಿರಲಿ:ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ದೇಶದಾದ್ಯಂತ ರೈತ ಸಂಘಟನೆಗಳು ಹೋರಾಟ ನಡೆಸಿದ ಕಾರಣ, ‘ಆರ್‌ಸಿಇಪಿ’ಗೆ ಸಹಿ ಬೀಳಲಿಲ್ಲ. ಆದರೆ, ಇದು ಮುಗಿದ ಅಧ್ಯಾಯ ಎಂದುಕೊಳ್ಳಬಾರದು. ಹೊಸದೊಂದು ರೂಪದಲ್ಲಿಯೂ ಬರಬಹುದು. ಆದ್ದರಿಂದ ಎಚ್ಚರಿಕೆಯಿಂದ ಇರಬೇಕು‘ ಎಂದರು.
ಅಭಿಪ್ರಾಯ ಮಂಡಿಸಿದ ಅರ್ಥಶಾಸ್ತ್ರಜ್ಞ ವಿಶ್ವನಾಥ ಭಟ್, ‘ಕಳೆದ ಕೆಲವು ವರ್ಷಗಳಲ್ಲಿ ತಲೆದೋರಿರುವ ನಿರುದ್ಯೋಗ ಸಮಸ್ಯೆ ವಿರುದ್ಧ ಪ್ರತಿಭಟಿಸುವುದು ಸರಿ. ಆದರೆ, ಆರ್‌ಸಿಇಪಿಯಿಂದ ದೇಶಕ್ಕೆ ಲಾಭವೂ ಇದ್ದು, ಅದನ್ನು ಒಪ್ಪಿಕೊಳ್ಳುವ ನಿಟ್ಟಿನಲ್ಲಿ ಸಿದ್ಧತೆ ಆಗಿಲ್ಲ ಎಂಬುದು ಸ್ಪಷ್ಟ ಎಂದರು. ಮುಂದೊಂದು ದಿನ ಅದನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆಯನ್ನೂ ಅವರು ಪ್ರತಿಪಾದಿಸಿದರು.
ಚಿಂತಕ ಕೆ.ಪಿ.ಸುರೇಶ್ ಮಾತನಾಡಿ, ‘ಕಾರ್ಪೋರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುವ ರೀತಿಯಲ್ಲಿರುವ ಈ ಒಪ್ಪಂದಕ್ಕೆ ಯಾವುದೇ ಗಳಿಗೆಯಲ್ಲಾದರೂ ಸಹಿ ಬಿದ್ದು ಬಿಡಬಹುದು. ಹೀಗಾಗಿ, ಅದರ ವಿರುದ್ಧ ನಿರಂತರ ಪ್ರತಿಭಟನೆ ಜಾರಿಯಲ್ಲಿರುವಂತೆ ನೋಡಿಕೊಳ್ಳಬೇಕು’ ಎಂದು ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿದ್ದ ಜ್ಞಾನ ಸರೋವರ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್ ಸಂಸ್ಥಾಪಕ ಅಧ್ಯಕ್ಷ ಸುಧಾಕರ ಶೆಟ್ಟಿ, ‘ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕಿದೆ. ಹಾಗಾದಲ್ಲಿ ಪ್ರತಿಭಾ ಪಲಾಯನ ತಪ್ಪಿಸಬಹುದು. ದೇಶದಲ್ಲಿ 48 ಕೋಟಿ ಮಂದಿ 35 ವರ್ಷ ವಯಸ್ಸಿಗಿಂತ ಕೆಳಗಿನವರು ಇದ್ದಾರೆ. ಇವರಿಗೆ ಉದ್ಯೋಗ ಸಿಗದಿದ್ದರೆ ದೇಶದ ಭವಿಷ್ಯವನ್ನು ಊಹಿಸುವುದೂ ಕಷ್ಟ’ ಎಂದು ಆತಂಕ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿಗಳ ಜತೆಗೆ ಸಂವಾದ ನಡೆಸಿದ ಸಭಿಕರು, ವಿಚಾರ ಸಂಕಿರಣವನ್ನು ಅರ್ಥಪೂರ್ಣವನ್ನಾಗಿಸಿದರು.
‘ಪ್ರಜಾವಾಣಿ’ ಸಹ ಸಂಪಾದಕ ಬಿ.ಎಂ.ಹನೀಫ್ ಪಾಲ್ಗೊಂಡಿದ್ದರು. ಚಿಂತಕರು, ಸಾಹಿತಿಗಳು, ರೈತ ಸಂಘದ ಮುಖಂಡರು, ಆರ್ಥಿಕ ತಜ್ಞರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
‘ಪ್ರಜಾವಾಣಿ ಕಥಾಸ್ಪರ್ಧೆ’ ಬಹುಮಾನ ವಿತರಣೆ
2019ನೇ ಸಾಲಿನ ‘ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ’ ಮತ್ತು ‘ಕವನ ಸ್ಪರ್ಧೆ’ ವಿಜೇತರಿಗೆ ಸಾಹಿತಿ ದೇವನೂರ ಮಹಾದೇವ ಬಹುಮಾನ ವಿತರಿಸಿದರು.
‘ಕನ್ನಡ ಕಥಾ ಕ್ಷೇತ್ರದಲ್ಲಿನ ಸೂಕ್ಷ್ಮತೆ ಮತ್ತು ಸಂವೇದನಾಶೀಲತೆಯ ಸ್ತರ ಹೆಚ್ಚಾಗಲು ‘ಪ್ರಜಾವಾಣಿ’ಯ ಕಥಾ ಸ್ಪರ್ಧೆಯ ಪಾತ್ರ ದೊಡ್ಡದು’ ಎಂದರು. ‘ನಾನೂ ಈ ಹಿಂದೆ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಗೆ ಎರಡು ಬಾರಿ ಕಥೆ ಕಳುಹಿಸಿದ್ದೆ. ಪ್ರೈಜ್ ಇರಲಿ, ಮೆಚ್ಚಿಗೇನೂ ಬರಲಿಲ್ಲ. ಆದರೆ, ಒಂದು ಕಥೆ ಸ್ವಲ್ಪ ದಿನಗಳ ಬಳಿಕ ಪುರವಣಿಯಲ್ಲಿ ಪ್ರಕಟವಾಯ್ತು’ ಎಂದು ಹೇಳಿದಾಗ ಸಭೆಯಲ್ಲಿ ನಗು ಮೂಡಿತು.
ಕಥಾ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದ ಗುರುಪ್ರಸಾದ್ ಕಂಟಲಗೆರೆ, ಮಾಧವಿ ಭಂಡಾರಿ ಮತ್ತು ಜಿ.ಆರ್.ಚಂದ್ರಶೇಖರ್ ಹಾಗೂ ಕವನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಪ್ರಕಾಶ ಪೊನ್ನಾಚಿ ಬಹುಮಾನ ಸ್ವೀಕರಿಸಿದರು. ಮೊದಲಿನ ಎರಡು ಸ್ಥಾನ ಪಡೆದ ಕೆ.ಪ್ರವೀಣ, ಎಂ.ಡಿ.ಒಕ್ಕುಂದ ಗೈರಾಗಿದ್ದರು. ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದವರಿಗೆ ಕ್ರಮವಾಗಿ ₹ 20 ಸಾವಿರ, ₹ 15 ಸಾವಿರ ಹಾಗೂ ₹ 10 ಸಾವಿರ ಮೊತ್ತದ ಚೆಕ್ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು. ಕವನ ಸ್ಪರ್ಧೆ ವಿಜೇತರಿಗೆ ಕ್ರಮವಾಗಿ ₹ 5,000, ₹ 3,000 ಹಾಗೂ ₹ 2,500 ಮೊತ್ತದ ಚೆಕ್, ಪ್ರಶಸ್ತಿ ಪತ್ರ ನೀಡಲಾಯಿತು.
*
‘ಮೊದಲು ಉದ್ಯೋಗ ನೀಡು, ಆಮೇಲೆ ಮಾತಾಡು’ ಎಂದು ಸರ್ಕಾರಕ್ಕೆ ಹೇಳಬೇಕಿದೆ. ಇದು ಸಮುದಾಯದ ಒಕ್ಕೊರಲ ಧ್ವನಿಯಾಗಬೇಕು.
-ದೇವನೂರ ಮಹಾದೇವ, ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.