ಮೈಸೂರು: ವಿಶ್ವಮಾನವರನ್ನು ಜಾತಿ ಮಾನವರನ್ನಾಗಿಸುವ ಪ್ರಯತ್ನಗಳು ನಡೆಯುತ್ತಿರುವುದು ವಿಷಾದದ ಸಂಗತಿ ಎಂದು ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಟೀಕಿಸಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಶನಿವಾರ ಹಮ್ಮಿಕೊಂಡಿರುವ ‘ವಿದ್ಯಾರ್ಥಿ ಸಂಸ್ಕೃತಿ ಚಳವಳಿ– 2’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.
‘ರಾಮಾಯಣ ರಚಿಸಿದ ವಿಶ್ವಕವಿ ವಾಲ್ಮೀಕಿಯನ್ನು ಇದೀಗ ವಾಲ್ಮೀಕಿ ಪಂಗಡದ ಗುಂಪು ಇವ ನಮ್ಮವ ಎಂದು ಹೇಳಿಕೊಳ್ಳುತ್ತಿದೆ. ಕ್ರಾಂತಿಯೋಗಿ ಬಸವಣ್ಣನನ್ನು ಲಿಂಗಾಯತರು ಇವ ನಮ್ಮವ ಎನ್ನುತ್ತಿದ್ದಾರೆ. ಕುಲದ ಮಹಿಮೆಯ ಬಗ್ಗೆ ಸಾರಿದ ಕನಕದಾಸರನ್ನು ಕುರುಬರು ಇವ ನಮ್ಮವ ಎನ್ನುತ್ತಿದ್ದಾರೆ. ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರನ್ನು ಒಕ್ಕಲಿಗರು ಇವ ನಮ್ಮವ ಎನ್ನುತ್ತಿದ್ದಾರೆ. ಅಂಬೇಡ್ಕರ್ ಅವರನ್ನು ದಲಿತರು ನಮ್ಮವ ಎನ್ನುತ್ತಿದ್ದಾರೆ. ಎಲ್ಲರಿಗೂ ಸೇರಿದ ಈ ಮಹಾಪುರುಷರನ್ನು ಜಾತಿ ಸಂಕೋಲೆಯಲ್ಲಿ ಬಂಧಿಸುವುದು ಮುಂದುವರೆದರೆ ನಮ್ಮ ಸಂಸ್ಕೃತಿ ಎತ್ತ ಸಾಗುತ್ತದೆ ಎಂಬ ಚಿಂತೆ ಆವರಿಸಲು ಶುರುವಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕೆಲಸವನ್ನು ವಿದ್ಯಾರ್ಥಿಗಳೇ ಮಾಡಬೇಕು. ಅದು ಚಳವಳಿ ಸ್ವರೂಪದಲ್ಲಿ ನಡೆಯುವುದು ಒಳ್ಳೆಯದೇ’ ಎಂದರು.
ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಮಾತನಾಡಿ, ‘ದೇಶದ ವಿಕಾಸ ನಮ್ಮ ಆಶಯ; ವಿನಾಶವಲ್ಲ. ಜೆಎನ್‌ಯುಗೆ ಹೇಳಬಯಸುವೆ, ನಮ್ಮದು ರಕ್ತದಾನ ಮಾಡುವ ಸಂಸ್ಕೃತಿ; ರಕ್ತ ಹರಿಸುವ ಸಂಸ್ಕೃತಿಯಲ್ಲ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.