ಮೈಸೂರು: ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಪಕ್ಷ ಸಂಘಟನೆಯ ದೃಷ್ಟಿಯಿಂದ ಬಿಜೆಪಿಯು ವಿವಿಧ ನಿಗಮ–ಮಂಡಳಿಗಳಿಗೆ ಅಧ್ಯಕ್ಷರನ್ನು ಸೋಮವಾರ ನೇಮಕ ಮಾಡಿದ್ದು, ಜಿಲ್ಲೆಯ ಮೂವರಿಗೆ ಅವಕಾಶ ಸಿಕ್ಕಿದೆ.
ಮೈಲ್ಯಾಕ್ (ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ) ಅಧ್ಯಕ್ಷರನ್ನಾಗಿ ರಘು ಆರ್.ಕೌಟಿಲ್ಯ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಎಂ.ಕೆ.ಶ್ರೀನಿವಾಸ್(ಮಿರ್ಲೆ ಶ್ರೀನಿವಾಸಗೌಡ) ಮತ್ತು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನಗರಪಾಲಿಕೆ ಮಾಜಿ ಸದಸ್ಯ ಎಂ.ಶಿವಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ರಘು ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತ ಬಳಗದಲ್ಲೂ ಗುರುತಿಸಿಕೊಂಡಿದ್ದಾರೆ. ಉಳಿದವರು ಪಕ್ಷದ ಸಂಘಟನೆಗಾಗಿ ಹಲವು ವರ್ಷಗಳಿಂದ ಕೆಲಸ ಮಾಡಿದವರಾಗಿದ್ದಾರೆ. ಹಿಂದುಳಿದ ವರ್ಗಗಳ ನಾಯಕರಿಗೆ ಮಣೆ ಹಾಕಲಾಗಿದೆ.
2019ರಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿನ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಲಾಗಿತ್ತು. ಅವರಲ್ಲಿ 52 ಮಂದಿಯ ನೇಮಕಾತಿಯನ್ನು ರದ್ದುಗೊಳಿಸಿ ಜುಲೈ 12ರಂದು ಸರ್ಕಾರ ಆದೇಶ ಹೊರಡಿಸಿತ್ತು. ಆಗ ತೆರವಾಗಿದ್ದ ಸ್ಥಾನಕ್ಕೆ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಇದರಿಂದಾಗಿ, ಜಿಲ್ಲೆಯಲ್ಲಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿರುವ, ವಿವಿಧ ಹುದ್ದೆಗಳ ಆಕಾಂಕ್ಷಿಗಳಲ್ಲಿ ನಿರೀಕ್ಷೆಗಳು ಗರಿಗೆದರಿವೆ.
ಚುನಾವಣೆಯಲ್ಲಿ ಸ್ಪರ್ಧೆಗಾಗಿ:
ರಘು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಅಧ್ಯಕ್ಷರಾಗಿದ್ದರು. ಮೈಸೂರು-ಚಾಮರಾಜನಗರ ಜಿಲ್ಲಾ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಅವಕಾಶ ಸಿಕ್ಕಿದ್ದರಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಚುನಾವಣೆಯಲ್ಲಿ ಸೋತಿದ್ದರು. ಆದರೆ, ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದರು. ಇದು ಅವರ ಕೈಹಿಡಿದಿದೆ. ಮಹತ್ವದ ಮೈಲ್ಯಾಕ್ ಸಾರಥ್ಯವನ್ನು ಅವರಿಗೆ ಕೊಡಲಾಗಿದೆ.
ಎಂ.ಕೆ.ಶ್ರೀನಿವಾಸ್ ಪಕ್ಷದ ಮೈಸೂರು ಗ್ರಾಮಾಂತರ ಜಿಲ್ಲಾ ಘಟಕದ ವಕ್ತಾರರೂ ಆಗಿದ್ದಾರೆ. ಕೆ.ಆರ್.ನಗರ ತಾಲ್ಲೂಕಿನ ಕನಕ ನಗರ ಬಡಾವಣೆಯ ನಿವಾಸಿಯಾದ ಅವರು, ಗ್ರಾಮಾಂತರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.
ನಗರ ಘಟಕದ ಅಧ್ಯಕ್ಷರಾಗಿದ್ದರು:
ಕುವೆಂಪುನಗರದ ನಿಮಿಷಾಂಬ ಬಡಾವಣೆಯ ನಿವಾಸಿಯಾದ ಎಂ.ಶಿವಕುಮಾರ್ ಬಿಜೆಪಿ ನಗರ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಸಂಘಟನೆ ಬಲಗೊಳಿಸಲು ಶ್ರಮಿಸಿದ್ದರು. ಮಹಾನಗರಪಾಲಿಕೆ ಸದಸ್ಯರಾಗಿಯೂ ಕೆಲಸ ಮಾಡಿದ್ದರು. ಪಕ್ಷದ ಮುಖಂಡರೊಂದಿಗೆ ಉತ್ತಮ ಒಡನಾಟ ಹೊಂದಿರುವುದು ಗಾದಿವರೆಗೆ ಕರೆತಂದಿದೆ. ಕುರುಬ ಸಮಾಜದ ಮುಖಂಡರೂ ಹೌದು.
ಅಭಿನಂದನೆ: ನೇಮಕಾತಿ ಆದೇಶ ಹೊರಬಿದ್ದ ನಂತರ ಪಕ್ಷದ ಕಚೇರಿಗೆ ಭೇಟಿ ನೀಡಿದ ಎಂ.ಶಿವಕುಮಾರ್ ಅವರನ್ನು ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ನೇತೃತ್ವದಲ್ಲಿ ಕಾರ್ಯಕರ್ತರು ಅಭಿನಂದಿಸಿದರು.
ನಗರ ಘಟಕದ ಪ್ರಧಾನ ಕಾರ್ಯದರ್ಶಿ ವಾಣಿ ಸುಕುಮಾರ್, ಮುಖಂಡರಾದ ಜಯರಾಮ್, ಮಹೇಂದ್ರ ಎಸ್.ಡಿ., ನಗರ ಘಟಕದ ಸಹ ವಕ್ತಾರ ಕೇಬಲ್ ಮಹೇಶ್, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಜೋಗಿ ಮಂಜು, ರೈತ ಮೋರ್ಚಾ ಅಧ್ಯಕ್ಷ ದೇವರಾಜ್, ಪರಿಶಿಷ್ಟ ಜಾತಿ ಮೋರ್ಚಾ ಉಪಾಧ್ಯಕ್ಷ ಸೋಮು, ಮಧುರಾಜ್, ನಗರಪಾಲಿಕೆ ಸದಸ್ಯರಾದ ರಮೇಶ್ ಹಾಗೂ ಜಗದೀಶ್ ಉಪಸ್ಥಿತರಿದ್ದರು.
‘ಮುಡಾ’ ಮೇಲೆ ಹಲವರ ಕಣ್ಣು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಅಧ್ಯಕ್ಷ ಸ್ಥಾನಕ್ಕೆ ನೇಮಕಾತಿ ಬಾಕಿ ಉಳಿದಿದ್ದು, ಅದರ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ನಾಯಕರ ಹಂತದಲ್ಲಿ ಲಾಬಿ ನಡೆಸುತ್ತಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಎಚ್.ವಿ.ರಾಜೀವ್ ಅವರನ್ನೇ ಮರು ನೇಮಕ ಮಾಡಬೇಕು ಎಂಬ ಒತ್ತಾಯವನ್ನೂ ಕೆಲವರು ಮಾಡಿದ್ದಾರೆ.
ಮುಖಂಡರಾದ ಯಶಸ್ವಿನಿ ಸೋಮಶೇಖರ್, ಎಸ್.ಡಿ.ಮಹೇಂದ್ರ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.
ಸದ್ಯ, ಮುಡಾದಲ್ಲಿರುವ 14 ಸದಸ್ಯರ ಪೈಕಿ 10 ಮಂದಿ ಒಕ್ಕಲಿಗ ಸಮಾಜಕ್ಕೆ ಸೇರಿದವರಾಗಿದ್ದಾರೆ. ಉಳಿದ ನಾಲ್ವರು ಬ್ರಾಹ್ಮಣ, ಮುಸ್ಲಿ, ಕುರುಬ ಹಾಗೂ ಪರಿಶಿಷ್ಟ ಜಾತಿಗೆ ಸೇರಿದ್ದಾರೆ. ಪ್ರಸ್ತುತ ವೀರಶೈವ ಲಿಂಗಾಯತ ಸಮಾಜದಿಂದ ಯಾವುದೇ ಪ್ರತಿನಿಧಿ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.