ಮೈಸೂರು: ‘ಬಡವರು ಹಾಗೂ ಎಲ್ಲ ವರ್ಗದವರಿಗೂ ಅನುಕೂಲ ಕಲ್ಪಿಸಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಹಾಸ್ಯ ಮಾಡುತ್ತಿರುವ ಬಿಜೆಪಿಯವರು, ರಾಜ್ಯದಲ್ಲಿ ಯಾವ ಅಭಿವೃದ್ಧಿ ಕೆಲಸ ಸ್ಥಗಿತವಾಗಿದೆ ಎಂಬುದನ್ನು ತೋರಿಸಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ವಿದ್ಯಾರಣ್ಯಪುರಂನ ಭೂತಾಳೆ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ‘ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ’ದಲ್ಲಿ ಪಕ್ಷದ ಅಭ್ಯರ್ಥಿ ಎಂ.ಲಕ್ಷ್ಮಣ ಪರವಾಗಿ ಮತ ಯಾಚಿಸಿ ಅವರು ಮಾತನಾಡಿದರು.
‘ಈ ಕ್ಷೇತ್ರದಲ್ಲಿ ಬಿಜೆಪಿಯ ಪ್ರತಾಪ ಸಿಂಹ ಲೋಕಸಭಾ ಸದಸ್ಯರಾಗಿದ್ದರು. ಹಾಸನದ ಸಕಲೇಶಪುರದವರಾದರೂ ಉದಾರವಾಗಿ ಅವರನ್ನು ಗೆಲ್ಲಿಸಿದ್ರಿ. ಆದರೆ, ಸಂಸತ್ತಿನಲ್ಲಿ ಅವರ ಪಾತ್ರ ಏನೇನೂ ಇಲ್ಲ. ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಮೋದಿ ಅವರಿಗೆ ಹೆದರಿಕೊಂಡು ಪ್ರಶ್ನಿಸಲೂ ಇಲ್ಲ. ಅವರ ಸಾಧನೆ ಶೂನ್ಯ. ಅವರು ಕೆಲಸ ಮಾಡಿದ್ದರೆ ಅಭ್ಯರ್ಥಿ ಬದಲಾವಣೆ ಮಾಡುತ್ತಿದ್ದರೇಕೆ? ಅವರು ಸೋಲುತ್ತಾರೆಂಬ ಮಾಹಿತಿ ಸಿಕ್ಕಿದ್ದರಿಂದಲೇ ಬದಲಾವಣೆ ಮಾಡಿದ್ದಾರೆ. ಕರ್ನಾಟಕ ಹಿತ ಕಾಪಾಡಲು ಸಾಧ್ಯ ಆಗದೇ ಇದ್ದ ಬಿಜೆಪಿಯವರಿಗೆ ಮತ್ತೆ ಮತ ಹಾಕಬೇಕಾ?’ ಎಂದು ಕೇಳಿದರು.
ಸತ್ಯವನ್ನು ತಿಳಿಸಿ
‘ಬಿಜೆಪಿಯವರಿಗೆ ಸುಭದ್ರ, ಜನಪರ ಹಾಗೂ ಬಡವರ ಪರವಾದ ಸರ್ಕಾರ ಕೊಡಲು ಸಾಧ್ಯವಾಗಲಿಲ್ಲ. ಕಾರ್ಯಕರ್ತರು ಮತದಾರರಿಗೆ ಈ ಸತ್ಯವನ್ನು ತಿಳಿಸಿ ಮತ ಕೇಳಬೇಕು’ ಎಂದು ತಿಳಿಸಿದರು.
‘ಕೃಷ್ಣರಾಜ ಕ್ಷೇತ್ರದಲ್ಲಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಜೊತೆ ‘ಮುಡಾ’ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಸೇರಿದ್ದರಿಂದ ಪಕ್ಷಕ್ಕೆ ಆನೆಬಲ ಬಂದಿಂತಾಗಿದೆ’ ಎಂದರು.
‘ನರೇಂದ್ರ ಮೋದಿ ಎರಡು ಬಾರಿ ಈ ಪ್ರಧಾನಿಯಾದರು. ಗುಜರಾತ್ ಮಾದರಿ ಅಭಿವೃದ್ಧಿ ಮಾಡಿಬಿಡುತ್ತೇವೆ ಎಂದು ಹೇಳಿದ್ದರು. ಆದರೆ, ಪ್ರಮುಖ ಭರವಸೆಗಳನ್ನು ಕೂಡ ಈಡೇರಿಸಲಿಲ್ಲ’ ಎಂದು ವಾಗ್ದಾಳಿ ನಡೆಸಿದರು. ‘ಪ್ರತಿಯೊಬ್ಬರಿಗೂ ₹ 15 ಲಕ್ಷ ಕೊಡುತ್ತೇನೆ ಎಂದಿದ್ದರು. ಆದರೆ, ಈಗ ಅದರ ಬಗ್ಗೆ ಮಾತಾಡುವುದೇ ಇಲ್ಲ’ ಎಂದು ಟೀಕಿಸಿದರು.
ನೀವೆಲ್ಲರೂ ಕೇಳಬೇಕು
‘ಕಾಂಗ್ರೆಸ್ ಸರ್ಕಾರಕ್ಕೆ ತೊಂದರೆ ಕೊಡಬೇಕು ಎಂಬ ಕಾರಣದಿಂದಲೇ ಬರ ಪರಿಹಾರ ಕೊಡುತ್ತಿಲ್ಲ’ ಎಂದು ಆರೋಪಿಸಿದರು. ‘ಮೈಸೂರಿಗೆ ಬರುವ ಅವರನ್ನು, ನಿಮ್ಮ ಕೊಡುಗೆ ಏನೆಂಬ ಪ್ರಶ್ನೆಯನ್ನು ನೀವೆಲ್ಲರೂ ಕೇಳಬೇಕು’ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
‘ಬಿಜೆಪಿ ಸರ್ಕಾರದಿಂದ ಒಳ್ಳೆಯ ದಿನಗಳು ಬಂದಿವೆಯೇ? ಉದ್ಯೋಗ ಸೃಷ್ಟಿಸುತ್ತೇವೆಂದು ಯುವಕರಿಗೆ ಮೂರು ನಾಮ ಹಾಕಿದ್ದಾರಷ್ಟೆ’ ಎಂದು ಟೀಕಿಸಿದರು.
‘ಮೋದಿ ಏನೂ ಕೊಡದಿದ್ದರೂ ಜನರು ಕೇಳುತ್ತಿಲ್ಲವಲ್ಲವೇಕೆ’ ಎಂದು ಅಚ್ಚರಿಯಿಂದ ಪ್ರಶ್ನಿಸಿದರು.
ಎಷ್ಟೇ ಖರ್ಚಾದರೂ ನಿಲ್ಲಿಸುವುದಿಲ್ಲ
‘ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ವಿದ್ಯುತ್ ಉಚಿತವಾಗಿ ಕೊಡುತ್ತಿದ್ದೇವೆ. ಬಿಲ್ ಕಟ್ಟದಿದ್ದರೆ, ವಿದ್ಯುತ್ ಸಂಪರ್ಕ ಕಡಿತಗೊಳಿಸಿಸುತ್ತಾರೆ ಎಂಬ ಭಯ ಯಾರಿಗೂ ಇಲ್ಲ. ಆದರೆ, ಗ್ಯಾರಂಟಿಗಳ ವಿಷಯದಲ್ಲಿ ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ಎಷ್ಟೇ ಖರ್ಚಾಗಲಿ, ಏನೇ ಆಗಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ’ ಎಂದು ಭರವಸೆ ನೀಡಿದರು.
‘ಬರ ಪರಿಹಾರ ನೀಡಿ ಕೇಂದ್ರ ಸ್ಪಂದಿಸಲಿಲ್ಲ. ಆದ್ದರಿಂದ ನಾವು 44 ಲಕ್ಷ ರೈತರಿಗೆ ₹ 650 ಕೋಟಿ ಬರ ಪರಿಹಾರ ಕೊಟ್ಟಿದ್ದೇವೆ’ ಎಂದು ತಿಳಿಸಿದರು.
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಮಾಜಿ ಸಚಿವ ಬಿ. ಸೋಮಶೇಖರ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಮುಖಂಡ ಎಚ್.ವಿ. ರಾಜೀವ್ ಮಾತನಾಡಿದರು.
ಶಾಸಕ ಕೆ.ಹರೀಶ್ ಗೌಡ, ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಮುಡಾ ಅಧ್ಯಕ್ಷ ಕೆ.ಮರೀಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಶುಶ್ರುತ್ ಗೌಡ, ವಕ್ತಾರ ಎಚ್.ಎ. ವೆಂಕಟೇಶ್, ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಮುಖಂಡರಾದ ರಾಮಸ್ವಾಮಿ, ಭಾರತಿ ಶಂಕರ್, ಕೆ.ಆರ್. ಮೋಹನ್‌ಕುಮಾರ್, ಪುರುಷೋತ್ತಮ್, ಕೆ.ಎಸ್.ಶಿವರಾಮು, ಎನ್.ಆರ್. ನಾಗೇಶ್, ಸಿದ್ದರಾಜು, ಈಶ್ವರ ಚಕ್ಕಡಿ ಪಾಲ್ಗೊಂಡಿದ್ದರು.
ಅಭ್ಯರ್ಥಿ ಹೆಸರು, ಫೋಟೊ ಮುಚ್ಚಿದರು!
ವೇದಿಕೆಯಲ್ಲಿ ಹಾಕಿದ್ದ ಅಭ್ಯರ್ಥಿ ಎಂ. ಲಕ್ಷ್ಮಣ ಫೋಟೊ ಹಾಗೂ ಹೆಸರನ್ನು ಕಾರ್ಯಕರ್ತರು ಸಮಾವೇಶಕ್ಕೆ ಮುನ್ನ ಬಿಳಿಪಟ್ಟಿ ಅಂಟಿಸಿ ಮುಚ್ಚಿದರು. ಖರ್ಚು–ವೆಚ್ಚ ಅಭ್ಯರ್ಥಿಯ ಲೆಕ್ಕಕ್ಕೆ ಬರುವುದನ್ನು ತಪ್ಪಿಸಲು ಈ ಕಸರತ್ತು ನಡೆಸಲಾಯಿತು ಎನ್ನಲಾಗಿದೆ. ಸಮಾವೇಶದಲ್ಲಿ ಅಭ್ಯರ್ಥಿ ಲಕ್ಷ್ಮಣ ಪಾಲ್ಗೊಂಡಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.