ADVERTISEMENT

‘ಕ್ರೀಡೆ ಪ್ರೋತ್ಸಾಹಿಸುತ್ತಿದ್ದ ಪ್ರಸಾದ್‌, ವಾಸು’

ಮೈಸೂರು ಅಥ್ಲೆಟಿಕ್‌ ಸಂಸ್ಥೆ, ಕ್ರೀಡಾಭಿಮಾನಿಗಳ ಬಳಗದಿಂದ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 2 ಮೇ 2024, 6:08 IST
Last Updated 2 ಮೇ 2024, 6:08 IST
<div class="paragraphs"><p>ಮೈಸೂರು ಅಥ್ಲೆಟಿಕ್‌ ಸಂಸ್ಥೆ ಹಾಗೂ ಕ್ರೀಡಾಭಿಮಾನಿಗಳ ಬಳಗದಿಂದ ಸಂಸದ ವಿ. ಶ್ರೀನಿವಾಸ ಪ್ರಸಾದ್‌, ಮಾಜಿ ಶಾಸಕ ವಾಸು ಅವರಿಗೆ ಬುಧವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.  </p></div>

ಮೈಸೂರು ಅಥ್ಲೆಟಿಕ್‌ ಸಂಸ್ಥೆ ಹಾಗೂ ಕ್ರೀಡಾಭಿಮಾನಿಗಳ ಬಳಗದಿಂದ ಸಂಸದ ವಿ. ಶ್ರೀನಿವಾಸ ಪ್ರಸಾದ್‌, ಮಾಜಿ ಶಾಸಕ ವಾಸು ಅವರಿಗೆ ಬುಧವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

   

ಮೈಸೂರು: ಸಂಸದ ವಿ. ಶ್ರೀನಿವಾಸ ಪ್ರಸಾದ್‌ ಹಾಗೂ ಮಾಜಿ ಶಾಸಕ ವಾಸು ಅವರು ಕ್ರೀಡಾ ಕ್ಷೇತ್ರಕ್ಕೆ ಅಪಾರ ಉತ್ತೇಜನ ನೀಡುತ್ತಿದ್ದರು ಎಂದು ಗಣ್ಯರು ಸ್ಮರಿಸಿದರು.

ಮೈಸೂರು ಅಥ್ಲೆಟಿಕ್‌ ಸಂಸ್ಥೆ (ಎಂಡಿಎಎ) ಹಾಗೂ ಕ್ರೀಡಾಭಿಮಾನಿಗಳ ಬಳಗದಿಂದ ಮೈಸೂರು ವಿವಿ ಓವೆಲ್‌ ಮೈದಾನದ ಸಮೀಪದ ಲಯನ್ಸ್‌ ಭವನದಲ್ಲಿ ಬುಧವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ADVERTISEMENT

ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ‘ರಾಜಕಾರಣಿಗಳು ಕ್ರೀಡೆ ಬಗ್ಗೆ ಆಸಕ್ತಿ ತೋರಿಸುವುದು ಕಡಿಮೆ. ಆದರೆ, ಪ್ರಸಾದ್‌ ಹಾಗೂ ವಾಸು ಮೈಸೂರಿನಲ್ಲಿ ನಡೆಯುವ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಇಲ್ಲಿನ ಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಬೇಕು ಎನ್ನುವುದು ಅವರ ಆಶಯವಾಗಿತ್ತು’ ಎಂದು ನೆನೆದರು.

ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಸಿ. ವೆಂಕಟೇಶ್‌ ಮಾತನಾಡಿ, ‘ನಮ್ಮ ತಂದೆ (ಚಿಕ್ಕವೆಂಕಟಪ್ಪ) ಕೂಡ ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾಗಿದ್ದರು. ನಂತರ ಸಿ. ಕೃಷ್ಣ ನಿರ್ದೇಶಕರಾದರು. ಆ ಕಾಲದಿಂದಲೂ ಶ್ರೀನಿವಾಸಪ್ರಸಾದ್‌ ಹಾಗೂ ವಾಸು ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದರು’ ಎಂದು ಸ್ಮರಿಸಿದರು.

ಎಂಡಿಎಎ ಅಧ್ಯಕ್ಷ, ಅಂತರರಾಷ್ಟ್ರೀಯ ಅಥ್ಲೀಟ್‌ ಎಸ್‌. ಸೋಮಶೇಖರ್‌, ‘ವಾಸು ನಮ್ಮ ಸಂಸ್ಥೆಯ ಅಧ್ಯಕ್ಷರೂ ಆಗಿದ್ದರು. ಅವರಿಗೆ ಮೈಸೂರಿನಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು ಎಂಬ ಕನಸಿತ್ತು. ಇದನ್ನು ವಿಧಾನಸಭೆಯಲ್ಲೂ ಪ್ರಸ್ತಾಪಿಸಿದ್ದರು. ಮುಂಬರುವ ದಿನಗಳಲ್ಲಿ ಕಾರ್ಯಗತವಾಗುವಂತೆ ನೋಡಿಕೊಳ್ಳಬೇಕಾಗಿದೆ’ ಎಂದರು.

ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಸಿ. ಕೃಷ್ಣ ಮಾತನಾಡಿ, ‘ಪ್ರಸಾದ್‌ ಅವರು ಫುಟ್‌ಬಾಲ್‌ ಪಟುವಾಗಿದ್ದರು. ಅಶೋಕಪುರಂನಲ್ಲಿ ಇಂದಿಗೂ ನಡೆಯುತ್ತಿರುವ ಸಿದ್ಧಾರ್ಥ ಸ್ಪೋರ್ಟ್ಸ್‌ ಕ್ಲಬ್‌ ಸಂಸ್ಥಾಪಕರು. ಕ್ರೀಡಾ ಕೋಟಾದಲ್ಲಿ ಹಲವು ಮಂದಿಗೆ ಉದ್ಯೋಗ ದೊರೆಯಲು ಕಾರಣರಾಗಿದ್ದಾರೆ’ ಎಂದು ನೆನೆದರು.

ಎಂಡಿಎಎ ಕಾರ್ಯದರ್ಶಿ ಶ್ರೀಕಾಂತ್‌, ಉಪಾಧ್ಯಕ್ಷರಾದ ಸಿ.ಕೆ. ಮುರಳೀಧರನ್‌, ಚೈನ್‌ಸಿಂಗ್‌ ರಾಜಪುರೋಹಿತ್‌, ಜಂಟಿ ಕಾರ್ಯದರ್ಶಿ ಸಂಪಂಗಿ, ಖಜಾಂಚಿ ಉಮೇಶ್‌, ಸ್ನಾತಕೋತ್ತರ ಕ್ರೀಡಾ ಮಂಡಳಿಯ ಸಹಾಯಕ ನಿರ್ದೇಶಕ ಟಿ.ಎಸ್‌. ರವಿ, ತರಬೇತುದಾರ ಪುನೀತ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.