ಮೈಸೂರು: ಜಾನಪದ ಕಲಾವಿದ ತಂಬೂರಿ ಗುರುಸಿದ್ದಯ್ಯ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2023ನೇ ಸಾಲಿನ ಈ ಪ್ರಶಸ್ತಿಗೆ ಆಯ್ಕೆಯಾಗಿರುವುದಾಗಿ ಅಕಾಡೆಮಿಯು ಸೋಮವಾರ ಘೋಷಿಸಿದೆ.
ನಂಜನಗೂಡು ತಾಲ್ಲೂಕಿನ ಬದನವಾಳಿನ ಗುರು ಸಿದ್ಧಯ್ಯ ಅವರ ನಾಲಿಗೆಯಲ್ಲಿ ಧರೆಗೆ ದೊಡ್ಡವರು ಮಂಟೇಸ್ವಾಮಿ, ಸಿದ್ದಪ್ಪಾಜಿ, ಚನ್ನಿಗರಾಮ, ಮೈದಾಳರಾಮ, ಬಾಲ ನಾಗಮ್ಮ ಮೊದಲಾದ ಜಾನಪದ ಕಾವ್ಯಗಳು ನಲಿಯುತ್ತವೆ.
ಜಾನಪದ ಗಾಯಕ ಮೈಸೂರು ಗುರುರಾಜ್ ಅವರ ತಂದೆ ಗುರು ಬಸವಯ್ಯ ಅವರೊಂದಿಗೆ ತಂಬೂರಿ ಮೀಟುತ್ತಾ, ಅವರ ಹಿಮ್ಮೇಳದ ಒಡನಾಡಿಯಾಗಿದ್ದ ಅವರಿಗೀಗ 94 ವರ್ಷ. ಈಗಲೂ ತಂಬೂರಿ, ಘಟಂ, ಖಂಜಿರಾ ಸೇರಿದಂತೆ ಎಲ್ಲ ವಾದ್ಯಗಳನ್ನು ನುಡಿಸಬಲ್ಲರು.
ನಡಿಗೆಯಲ್ಲೇ ದಾವಣಗೆರೆವರೆಗೂ ಹಳ್ಳಿ– ಹಳ್ಳಿಗಳಿಗೆ ತೆರಳಿ ಕಾವ್ಯವನ್ನು ಹಾಡುತ್ತಾ ಶ್ರಮಿಕರ ಎದೆಯೊಳಗೆ ದಂತಕಥೆಗಳಾಗಿರುವ ಮಂಟೇಸ್ವಾಮಿ, ಮಲೆ ಮಹದೇಶ್ವರರ ಕಥೆಗಳನ್ನು ಬಿತ್ತಿ ಅಚ್ಚೊತ್ತಿದ್ದಾರೆ. ಹಲವರು ಅವರ ಗರಡಿಯಲ್ಲಿ ಪಳಗಿದ್ದಾರೆ.
16ನೇ ವಯಸ್ಸಿನಲ್ಲಿ ತಂದೆ ದೊಡ್ಡ ಸಿದ್ದಯ್ಯ, ತಾಯಿ ಚಿಕ್ಕಮ್ಮ ಅವರು ಪದ ಹೇಳಲು ದೀಕ್ಷೆ ಕೊಡಿಸಿದರು. ಅಲ್ಲಿಂದಲೂ ಇವರ ಗಾಯನವು ನಡೆದಿದೆ. ಗ್ರಾಮಗಳಲ್ಲಿ ರಾತ್ರಿ ಇಡೀ ಪದವನ್ನು ಹಾಡುವುದರಲ್ಲಿ ತನ್ಮಯರಾಗಿರುತ್ತಿದ್ದರು. ಗುರು ಬಸವಯ್ಯ ಅವರೊಂದಿಗೆ ಪದಕ್ಕೆ ಸೊಲ್ಲಾಗುತ್ತಿದ್ದರು.
ಶ್ರೀರಂಗಪಟ್ಟಣ, ಮದ್ದೂರು, ಚನ್ನಪಟ್ಟಣ ಸೇರಿದಂತೆ ಎಲ್ಲ ಊರುಗಳಲ್ಲೂ ಸಿದ್ದಯ್ಯ ಅವರು ಕಾರ್ಯಕ್ರಮ ನೀಡುತ್ತಿದ್ದರಂತೆ. ಸ್ವಾತಂತ್ರ್ಯ ಹೋರಾಟವನ್ನೂ ಕಂಡಿದ್ದಾರೆ. ಗಾಂಧೀಜಿ ಬದನವಾಳಿಗೆ ಬಂದಾಗ ಎರಡು ವರ್ಷವೆಂದು ನೆನಪಿಸಿಕೊಳ್ಳುತ್ತಾರೆ.
ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರಿದ್ದು, ಅವರಲ್ಲಿ ಮಂಟೇಲಿಂಗು ಮಾತ್ರ ಪರಂಪರೆಯನ್ನು ಮುಂದುವರಿಸಿದ್ದಾರೆ. ಹಣವನ್ನು ಅಪೇಕ್ಷಿಸುತ್ತಿರಲಿಲ್ಲ. ಪದ ಕೇಳುವವರು ಬೇಕು. ಎದೆಯೊಳಗಿನ ಪದ ಎಲ್ಲರಿಗೂ ದಾಟಬೇಕೆಂಬುದೇ ಅವರ ಆಶಯ. 3 ಎಕರೆ ಹೊಲವಿದ್ದು, ತೋಳಿನಲ್ಲಿ ಬಲವಿರುವವರೆಗೂ ದುಡಿಸಿದ್ದಾರೆ. ಬೆಳಿಗ್ಗೆ ಭೂಮಿಯಲ್ಲಿ ಬೆವರು ಸುರಿಸಿ ರಾತ್ರಿ ಪದ ಹೇಳಲು ಹೋಗುತ್ತಿದ್ದರು. ಪದ ಕೇಳಿದವರು ಕೊಡುವ ಅಕ್ಕಿ, ರಾಗಿಯಲ್ಲೇ ಬದುಕು ನಡೆಸಿದ್ದರು.
‘ಪದ್ವ ಯೋಳಲು ಸುರು ಮಾಡ್ದಾಗ ಅದ್ನಾರು ವರ್ಸ. ಆಗ ಸಿದ್ದಯ್ಯ, ರಾಮ ಎಲ್ರೂ ಬರೋರು. ಬೆಳಗಾನ ಹಾಡಿ ಭಿಕ್ಷೆ ಕೊಟ್ಟದನ್ನ ತತ್ತಿದ್ದೋ. ಆ ಕಾಲ ವೋಯ್ತು. ಈಗ ಮೂರ್ ಗಂಟೆ ಕೇಳೋರೂ ಕಮ್ಮಿಯೇ. ನಾ ಪಟ್ ಭಯಂಕರ ಕಷ್ಟಗಳಿಗೆ ಈಗ ಪ್ರಶಸ್ತಿ ಬಂತು ನೋಡಿ. ಸ್ವಂತೋಸ’ ಎಂದು ಸಿದ್ದಯ್ಯ ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು.
‘ತಂದೆ ಬಸವಯ್ಯ ಅವರೊಂದಿಗೆ ಹಾಡುತ್ತಿದ್ದರು. ಸೋಮವಾರ ರಾತ್ರಿಯೂ ಹಂಚ್ಯಾ ಗ್ರಾಮದಲ್ಲಿ ಅವರ ಕಾರ್ಯಕ್ರಮವಿತ್ತು. ಈ ವಯಸ್ಸಿನಲ್ಲೂ ಘಟಂ ಅನ್ನು ನುಡಿಸುತ್ತಾರೆ. ಆಕಾಶವಾಣಿ, ಕ್ಯಾಸೆಟ್‌ಗಳಿಗೂ ಹಾಡಿದ್ದಾರೆ’ ಎಂದು ಮೈಸೂರು ಗುರುರಾಜ್ ಹೇಳಿದರು.
Highlights - 2023ನೇ ಸಾಲಿನ ಪ್ರಶಸ್ತಿಗೆ ಭಾಜನ 94 ವರ್ಷದಲ್ಲೂ ಘಟಂನಲ್ಲಿ ಜಾದೂ ಎಲ್ಲ ವಾದ್ಯ ನುಡಿಸುವ ಕಲಾವಿದ
ವ.ನಂ.ಶಿವರಾಮು ಕೃತಿಗೆ ‘ಪುಸ್ತಕ ಬಹುಮಾನ’
ಲೇಖಕ ವ.ನಂ.ಶಿವರಾಮು ಅವರ ‘ಜನಪದ - ಜಾನಪದ ಅಧ್ಯಯನ ಕ್ಷೇತ್ರ ಕಾರ್ಯ’ ಸಂಶೋಧನಾ ಕೃತಿಗೆ 2023ನೇ ಸಾಲಿನ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ವಟ್ಟದಹಳ್ಳಿಯಲ್ಲಿ 1957ರ ಜುಲೈ 27ರಂದು ಶಿಕ್ಷಕ ನಂಜೇಗೌಡ– ನಾಗಮ್ಮ ದಂಪತಿ ಪುತ್ರನಾಗಿ ಜನಿಸಿದ ಅವರು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ಸದ್ಯ ಮೈಸೂರಿನಲ್ಲಿ ವಾಸವಿದ್ದಾರೆ. ಬುಡವೊಂದು ಕವಲೆಂಟು ದಕ್ಷಿಣ ಕರ್ನಾಟಕದ ಒಡಪುಗಳು ಜಾನಪದ ಕಾವೇರಿ- ಹನ್ನೊಂದು ತೊರೆಗಳು ಕನ್ನಡ ಜಾನಪದ ಹನ್ನೊಂದು ಮುಖಗಳು ಹಗೇವು ತುಂಬ್ಯಾವೆ ಅವರ ಪ್ರಮುಖ ಕೃತಿಗಳು. ‘ಜಾನಪದ ಕ್ಷೇತ್ರ ಕಾರ್ಯ ಮಾಡುವಾಗ ಪಾರಿಭಾಷಿಕ ಪದಗಳ ಅರ್ಥ ವ್ಯಾಖ್ಯಾನದ ಬಗ್ಗೆ ಇದ್ದ ವಿದ್ಯಾರ್ಥಿಗಳು ಸಂಶೋಧಕರ ಗೊಂದಲಗಳನ್ನು ಕೃತಿಯು ನಿವಾರಿಸಿದೆಯೆಂದು ನಂಬಿದ್ದೇನೆ. ಜಾನಪದ ಕ್ಷೇತ್ರದಲ್ಲಿ ಮಾಡಿದ ಕೆಲಸಕ್ಕೆ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ’ ಎಂದು ಶಿವರಾಮು ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.