ADVERTISEMENT

ಸ್ವಕ್ಷೇತ್ರಕ್ಕೆ ಸಿದ್ದರಾಮಯ್ಯ ಬಂಪರ್ ಕೊಡುಗೆ

₹ 501 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ, ಉದ್ಘಾಟನೆ, ಸೌಲಭ್ಯ ವಿತರಣೆ ಇಂದು

ಎಂ.ಮಹೇಶ
Published 22 ಅಕ್ಟೋಬರ್ 2024, 6:46 IST
Last Updated 22 ಅಕ್ಟೋಬರ್ 2024, 6:46 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ‌ಅವರು ತಮ್ಮ ವರುಣ ಕ್ಷೇತ್ರಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಮೂಲಕ ‘ಬಂಪರ್ ಕೊಡುಗೆ’ ನೀಡಲು ವೇದಿಕೆ ಸಜ್ಜಾಗಿದೆ. ಒಟ್ಟು 2,616 ಫಲಾನುಭವಿಗಳಿಗೆ ಸಹಾಯಧನ, ಪ್ರೋತ್ಸಾಹಧನ ಹಾಗೂ ಸವಲತ್ತು ವಿತರಿಸುವ ಕೆಲಸವೂ ನಡೆಯಲಿದೆ.

ಅವರು ಮಂಗಳವಾರ (ಅ.22)ರಂದು ತಿ.ನರಸೀಪುರ–ನಂಜನಗೂಡು ರಸ್ತೆಯ ತಾಯೂರು ಗೇಟ್‌ ಬಳಿ ಆಯೋಜಿಸಿರುವ ಸಮಾರಂಭದಲ್ಲಿ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ. 2024–25ನೇ ಸಾಲಿನಲ್ಲಿ ವಿವಿಧ ಇಲಾಖೆಗಳಿಂದ ಅಂದಾಜು ಮೊತ್ತ ₹ 471.20 ಕೋಟಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ₹ 19.78 ಕೋಟಿ ವೆಚ್ಚದ ಕಟ್ಟಡ ಕಾಮಗಾರಿಗಳ ಉದ್ಘಾಟನೆ ಅಧಿಕೃತವಾಗಿ ನಡೆಯಲಿದೆ. ವಿವಿಧ ಇಲಾಖೆಗಳ ಸವಲತ್ತು ವಿತರಣೆ (ಒಟ್ಟು ₹ 10.83 ಕೋಟಿ ಮೊತ್ತ) ನಡೆಯಲಿದೆ. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.

‌ಮುಖ್ಯಮಂತ್ರಿ ಸ್ವಗ್ರಾಮ ಸಿದ್ದರಾಮನಹುಂಡಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡಲಾಗುತ್ತಿದೆ. ಇದರಿಂದ ಆ ಭಾಗದ ಹಳ್ಳಿಗಳ ಜನರಿಗೂ ಅನುಕೂಲವಾಗಲಿದೆ.

ADVERTISEMENT

ಕೆರೆಗಳ ಅಭಿವೃದ್ಧಿಗೆ...: ಆಯಾ ಭಾಗದ ಜನರ ಬೇಡಿಕೆಗೆ ತಕ್ಕಂತೆ, ತಗಡೂರು ಕೊಮ್ಮಗೆರೆ, ಹಡಜನ, ದೇವಲಾಪುರ, ಉತ್ತನಹಳ್ಳಿ, ಹನುಮಪುರ ಹಲಸ್ತಿಕಟ್ಟೆ ಕೆರೆಗಳ ಅಭಿವೃದ್ಧಿ ಕಾಮಗಾರಿಯನ್ನು ಸಣ್ಣ ನೀರಾವರಿ ಇಲಾಖೆಯಿಂದ ಕೈಗೆತ್ತಿಕೊಳ್ಳಲಾಗುತ್ತಿದ್ದು, ಜಲಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ಹಾಡ್ಯ ಬಳಿ ಚೆಕ್‌ಡ್ಯಾಂ, ನಂಜನಗೂಡು ತಾಲ್ಲೂಕು ಗಿರಿಬೆಟ್ಟ ಕೆರೆಹಳ್ಳಕ್ಕೆ ದುದ್ದಗೆರೆ ಬಳಿ ಚೆಕ್‌ಡ್ಯಾಂ, ಚಟ್ನಹಳ್ಳಿಯ ಸರ್ವೇ ನಂ.290ರಲ್ಲಿ 2 ಚೆಕ್ ಡ್ಯಾಂ, ಸೋಮೇಶ್ವರಪುರ, ನಂದಿಗುದ್ದ, ದಾಸನೂರು, ಕಾಮಹಳ್ಳಿ, ಕಿರಗುಂದದಲ್ಲೂ ಚೆಕ್‌ ಡ್ಯಾಂ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ.

ಚುಂಚನಕಟ್ಟೆ, ಕರ್ಕರಟ್ಟಿ ಹಾಗೂ ದಾಸನೂರು, ಲಕ್ಷ್ಮೀಪುರ ಮತ್ತು ಯಡಕೋಲ, ಮರೀಗೌಡನಹುಂಡಿ, ಕೆ.ಮೂಕನಹಳ್ಳಿ ಹಾಗೂ ತಾಯೂರು ಹತ್ತಿರ ಹರಿಯುವ ಹಳ್ಳಕ್ಕೆ ಸರಣಿ ಚೆಕ್‌ ಡ್ಯಾಂಗಳ ನಿರ್ಮಾಣಕ್ಕೂ ಚಾಲನೆ ದೊರೆಯಲಿದೆ. ವಿವಿಧೆಡೆ ತಡೆಗೋಡೆಗಳನ್ನೂ ಕಟ್ಟಲಾಗುತ್ತಿದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ: ನಂಜನಗೂಡು ತಾಲ್ಲೂಕು ತಾಂಡವಪುರ ಹಾಗೂ ಇತರ 31 ಗ್ರಾಮಗಳು ಮತ್ತು ಮೈಸೂರು ತಾಲ್ಲೂಕಿನ ಉಂಡವಾಡಿ ಮತ್ತು ಇತರ 67 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ ನೆರವೇರಲಿದೆ.

ಆರ್‌ಡಿಪಿಆರ್‌ ವತಿಯಿಂದ ಮುಖ್ಯಮಂತ್ರಿಯವರ ವಿಶೇಷ ಮಂಜೂರಾತಿ ಆಧರಿಸಿ ವಿವಿಧ ಹಳ್ಳಿಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿಗಳನ್ನು ನಿರ್ಮಿಸಲು ಅನುದಾನ ಒದಗಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗಿದೆ. ವಿವಿಧೆಡೆ ಅಂಬೇಡ್ಕರ್‌ ಭವನ, ಬಾಬು ಜಗಜೀವನರಾಂ ಹಾಗೂ ವಾಲ್ಮೀಕಿ ಸಮುದಾಯ ಭವನಗಳ ಮುಂದುವರಿದ ಕಾಮಗಾರಿಗಳಿಗೆ ಹಣ ನೀಡಲಾಗಿದೆ.

ತಿ.ನರಸೀ‍‍ಪುರ ಅಂಬೇಡ್ಕರ್‌ ಸಮುದಾಯ ಭವನದ ಹೆಚ್ಚುವರಿ ಕೊಠಡಿ, ಮೈಸೂರು ತಾಲ್ಲೂಕು ಚಿಕ್ಕಹಳ್ಳಿ, ನಂಜನಗೂಡು ತಾಲ್ಲೂಕಿನ ಆಲತ್ತೂರು ಹಾಗೂ ಕುಪ್ಯ ಗ್ರಾಮದಲ್ಲಿ ನಡೆದಿರುವ ಅಂಬೇಡ್ಕರ್‌ ಭವನದ ಮುಂದುವರಿದ ಕಾಮಗಾರಿಯನ್ನು ಸಿಎಂ ಉದ್ಘಾಟಿಸಲಿದ್ದಾರೆ.

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ: ನಂಜನಗೂಡು ತಾಲ್ಲೂಕು ದಾಸನೂರು ಗ್ರಾಮದ ಸರ್ಕಾರಿ ಪಿಯು ಕಾಲೇಜು ಕಟ್ಟಡಕ್ಕೆ ನಿರ್ಮಿಸಿರುವ 6 ಹೆಚ್ಚುವರಿ ಕೊಠಡಿ ಹಾಗೂ 2 ಶೌಚಾಲಯ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ನಿರ್ಮಿಸಿರುವ ಕಟ್ಟಡಗಳ ಉದ್ಘಾಟನೆಯಾಗಲಿದೆ. ನಂಜನಗೂಡು ತಾಲ್ಲೂಕು ಬಿದರಗೂಡಿನ ಅಂಗನವಾಡಿ, ಕೊಂತಯ್ಯನಹುಂಡಿಯ ಬಸವ ಭವನ, ಆಲತ್ತೂರಿನ ಕುಂಬಾರ ಸಮದಾಯ ಭವನದ ಮುಂದುವರಿದ ಕಾಮಗಾರಿ ಮತ್ತು ಹದಿನಾರು ಗ್ರಾಮದಲ್ಲಿ ಮಡಿವಾಳ ಸಮುದಾಯ ಭವನವನ್ನು ಉದ್ಘಾಟಿಸಲಿದ್ದಾರೆ.

182 ರೈತರಿಗೆ ಕೃಷಿ ಯಂತ್ರೋಪಕರಣ ವಿತರಿಸಲಿದ್ದಾರೆ. ತೋಟಗಾರಿಕೆ ಇಲಾಖೆಯಿಂದ ಪ್ಯಾಕ್‌ಹೌಸ್ ನಿರ್ಮಾಣಕ್ಕೆ ಸಾಂಕೇತಿಕವಾಗಿ ಮೂವರಿಗೆ ಕಾರ್ಯಾದೇಶ ನೀಡಲಿದ್ದಾರೆ. ರೇಷ್ಮೆ ಇಲಾಖೆಯಿಂದ ಹುಳು ಸಾಕಣೆ ಶೆಡ್ ನಿರ್ಮಿಸಲು 32 ಫಲಾನುಭವಿಗಳಿಗೆ ಸಹಾಯಧನ ವಿತರಣೆಗೆ ಚಾಲನೆ ಕೊಡಲಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕೆರೆಗಳ ಅಭಿವೃದ್ಧಿಗೂ ಕ್ರಮ ನೀರು ಸರಬರಾಜು ಯೋಜನೆಗೂ ಕ್ರಮ

ಗಿರಿರಾಜ ಕೋಳಿಮರಿ ವಿತರಣೆ 2024–25ನೇ ಸಾಲಿನಲ್ಲಿ ಮಹಿಳಾ ಸಬಲೀಕರಣ ಹಾಗೂ ಜೀವನಮಟ್ಟ ಸುಧಾರಣೆಗಾಗಿ ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆಯಿಂದ ಗ್ರಾಮೀಣ ರೈತ ಮಹಿಳೆಯರಿಗೆ ಗಿರಿರಾಜ ಕೋಳಿ ಮರಿಗಳನ್ನು ವಿತರಿಸಲಾಗುತ್ತಿದೆ. ಜಿಲ್ಲೆಗೆ 3500 ಗುರಿ ನೀಡಲಾಗಿದ್ದು ವರುಣ ಕ್ಷೇತ್ರದ 2ಸಾವಿರ ಫಲಾನುಭವಿಗಳಿಗೆ ಘಟಕ ವೆಚ್ಚ ₹ 2600ರಂತೆ ಉಚಿತವಾಗಿ 5 ವಾರದ 20 ನಾಟಿ ಅಥವಾ ಗಿರಿರಾಜ ಕೋಳಿಗಳನ್ನು ಕೊಡಲಾಗುವುದು. 19 ಅಂಗವಿಕಲರಿಗೆ ದ್ವಿಚಕ್ರವಾಹನ 36 ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ 8 ಮಂದಿಗೆ ಗಂಗಾ ಕಲ್ಯಾಣ ಯೋಜನೆಯಡಿ ಪರಿಕರ ವಿತರಿಸಲಾಗುವುದು. 2022-23ನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆಯಡಿ ವರುಣ ಕ್ಷೇತ್ರಕ್ಕೆ 4819 ಮನೆಗಳ ಗುರಿ ನಿಗದಿಯಾಗಿದ್ದು ಈವರೆಗೆ 270 ಮನೆಗಳು ಪೂರ್ಣಗೊಂಡಿವೆ. 4549 ಮನೆಗಳು ವಿವಿಧ ಹಂತದಲ್ಲಿವೆ. ಸಾಂಕೇತಿಕವಾಗಿ 7 ಮಂದಿಗೆ ಮನೆ ಮಂಜೂರಾತಿ ಹಾಗೂ ಆದೇಶಪತ್ರವನ್ನು ವಿತರಿಸಲಾಗುವುದು ಎಂದು ಜಿಲ್ಲಾಡಳಿತದ ಮೂಲಗಳು ಮಾಹಿತಿ ನೀಡಿವೆ.

ಹಲವು ಗ್ರಾಮಗಳವರಿಗೆ ಅನುಕೂಲ ‘ಸಿದ್ದರಾಮನಹುಂಡಿ ಪ್ರಾಥಮಿಕ ಅರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವುದರಿಂದ ಸುತ್ತಲಿನ ಯಡಕೊಳ ಕುಪ್ಪೇಗಾಲ ಹೊಸಹಳ್ಳಿ ರಂಗನಾಥಪುರ ಶ್ರೀನಿವಾಸಪುರ ದೇವೇಗೌಡಹುಂಡಿ ತುಮ್ಮನೇರಳೆ ನಂದಿಗುಂದಿ ಮರಡಿಹುಂಡಿ ಗ್ರಾಮಗಳ ಜನರಿಗೆ ಬಹಳ ಅನುಕೂಲವಾಗಲಿದೆ’ ಎಂದು ಸಿದ್ದರಾಮನಹುಂಡಿ ಗ್ರಾಮದ ಕಾಂಗ್ರೆಸ್ ಮುಖಂಡ ಮಂಜುನಾಥ್‌ ಸಿ.ರಾ.ಹುಂಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.