ಮೈಸೂರು: ‘ಅಧಿಕಾರಕ್ಕೆ ಬಂದ ಕೂಡಲೇ ಜಾತಿಗಣತಿ ವರದಿ ಪಡೆದು ಚರ್ಚೆಗೆ ಇಡುವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
‘ನಾನು ಅಧಿಕಾರದಲ್ಲಿದ್ದಾಗ ಜಾತಿ ಗಣತಿ ಮಾಡಿಸಿದೆ. ನಂತರ ಬಂದ ಸರ್ಕಾರಗಳು ಗಣತಿ ವರದಿಯನ್ನು ಪಡೆಯಲೇ ಇಲ್ಲ. ಅದರಲ್ಲೇನಿದೆ, ಯಾವ ಜಾತಿಯ ಸಮಾಜ ಬಡತನಲ್ಲಿದೆ ಎಂದೂ ಗೊತ್ತಾಗಿಲ್ಲ. ಎಲ್ಲ ಹಂತಗಳಲ್ಲೂ ಮೀಸಲಾತಿಯನ್ನು ವಿರೋಧಿಸಿದ ಬಿಜೆಪಿಯು ಹಿಂದುಳಿದ ವರ್ಗಗಳ ಪರವಾಗಿ ಇಲ್ಲ’ ಎಂದು ಇಲ್ಲಿ ಬುಧವಾರ ಸುದ್ದಿಗಾರರಿಗೆ ಹೇಳಿದರು.
’ಸರ್ಕಾರಕ್ಕೆ ಬದ್ಧತೆ ಇದ್ದರೆಕೇಂದ್ರ ಜಲನ್ಯಾಯ ಮಂಡಳಿಯ ಅನುಮತಿ ಪಡೆದು ಮೊದಲು ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು. ತಮಿಳುನಾಡಿಗೆ ಪತ್ರ ಬರೆದು ಅನುಮತಿ ಕೇಳುತ್ತೇವೆ ಎನ್ನುವುದು ಸರಿಯಲ್ಲ’ ಎಂದು ಪ್ರತಿಪಾದಿಸಿದರು.
ರಾಜಕೀಯದಲ್ಲಿರುವೆ; ‘ರಾಜಕೀಯದಲ್ಲಿ ಮುಂದುವರಿಯಲು ಉತ್ತಮ ಆರೋಗ್ಯ, ಕೆಲಸ ಮಾಡುವ ಉತ್ಸಾಹ ಮುಖ್ಯವೇ ಹೊರತು ವಯಸ್ಸಲ್ಲ. ನನಗೀಗ 75 ವಯಸ್ಸಾಗಿದೆ. ರಾಜಕೀಯದಲ್ಲಿ ಮುಂದುವರಿಯುವ ಆಸೆಯೂ ಇದೆ’ ಎಂದರು.
‘ಸಿಗರೇಟ್ ಸೇದುತ್ತಿದ್ದುದರಿಂದ ತೊಂದರೆಯಾಗಿ ಹೃದಯನಾಳದಲ್ಲಿ ಸ್ಟೆಂಟ್ ಅಳವಡಿಸಲಾಗಿದೆ. ಮಧುಮೇಹವಿದ್ದರೂ ಎಚ್ಚರ ವಹಿಸಿದ್ದರಿಂದ ಗಂಭೀರ ಕಾಯಿಲೆಗಳಿಲ್ಲದೆ ಗಟ್ಟಿಮುಟ್ಟಾಗಿದ್ದೇನೆ’ ಎಂದರು.
’ನನ್ನ ಜನ್ಮದಿನಾಂಕವೇ ತಪ್ಪಾಗಿದೆ’ ಎಂದು ಹಾಸ್ಯ ಚಟಾಕಿ ಹಾರಿಸಿದ ಅವರು,‘ಶಾಲೆಯ ದಾಖಲಾತಿಯಲ್ಲಿ 3-8-1947 ಅಂತ ಇದೆ. ಇದು ತಪ್ಪಾಗಿ 12–8–1947 ಅಂತ ಆಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.