ADVERTISEMENT

ಹುಣಸೂರು ನಾಲೆಯಲ್ಲಿ ಹೂಳು: ರೈತರ ಅಳಲು

ಕಟ್ಟೆಮಳಲವಾಡಿ ಮುಖ್ಯ ನಾಲೆ ವ್ಯಾಪ್ತಿಯಲ್ಲಿ ಭತ್ತಕ್ಕೆ ನೀರಿನ ಅಭಾವ

ಎಚ್.ಎಸ್.ಸಚ್ಚಿತ್
Published 15 ಅಕ್ಟೋಬರ್ 2024, 8:43 IST
Last Updated 15 ಅಕ್ಟೋಬರ್ 2024, 8:43 IST
ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಲಕ್ಷ್ಮಣತೀರ್ಥ ನದಿ ಅಣೆಕಟ್ಟೆಯ ಬಲದಂಡೆ ನಾಲೆಯಲ್ಲಿ ಹೂಳು ತುಂಬಿರುವುದು
ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಲಕ್ಷ್ಮಣತೀರ್ಥ ನದಿ ಅಣೆಕಟ್ಟೆಯ ಬಲದಂಡೆ ನಾಲೆಯಲ್ಲಿ ಹೂಳು ತುಂಬಿರುವುದು   

ಹುಣಸೂರು: ನೀರಿನ ಸರಾಗ ಹರಿವಿಗೆ ಅಡ್ಡಿಯಾದ ಹೂಳು, ಆಳೆತ್ತರ ಬೆಳೆದ ಗಿಡಗಂಟಿಗಳು, ನಾಲೆ ಕೊನೆಯ ಭಾಗದವರೆಗೆ ಹರಿಯದ ಜಲ...

ಇದು ಹಾರಂಗಿ 3ನೇ ವಿಭಾಗಕ್ಕೆ ಸೇರಿದ ಕಟ್ಟೆಮಳಲವಾಡಿ ಮುಖ್ಯ ನಾಲೆಯ ಸ್ಥಿತಿ.

ಈ ನಾಲೆಯು 27 ಕಿ.ಮಿ ವ್ಯಾಪ್ತಿಯಲ್ಲಿ 1,060 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸುತ್ತದೆ. ಈಗಾಗಲೇ ಈ ಪ್ರದೇಶದಲ್ಲಿ ಭತ್ತ ನಾಟಿ ಪ್ರಕ್ರಿಯೆ ಮುಗಿದಿದ್ದು, ಗೊಬ್ಬರ ನೀಡಿದ ರೈತರು ಫಸಲಿಗೆ ನೀರು ಹರಿಸಲು ಮುಂದಾಗಿದ್ದಾರೆ. ಹೊಳೆಯಲ್ಲಿ ನೀರು ಹರಿದರೂ ಹೂಳು ತುಂಬಿ ನಾಲೆಗೆ ಹರಿಯದ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

‘ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿ ಕಳೆದ ಮೂರು ತಿಂಗಳಿಂದ ನಿರಂತರವಾಗಿ ಹೊಳೆಯಲ್ಲಿ ನೀರು ಹರಿದು ಕಾವೇರಿ ನದಿ ಸೇರುತ್ತಿದೆ. ಆದರೆ ಅಚ್ಚುಕಟ್ಟು ಪ್ರದೇಶದ ರೈತರು ನೀರಿನ ಬವಣೆ ಎದುರಿಸುವ ಸ್ಥಿತಿ ಉಂಟಾಗಿದೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಇತ್ತ ಗಮನಹರಿಸಬೇಕು’ ಎಂದು ಅಚ್ಚುಕಟ್ಟು ಪ್ರದೇಶದ ರೈತ ಕೃಷ್ಣೇಗೌಡ ಆಗ್ರಹಿಸಿದರು.

ತಾಲ್ಲೂಕಿನ ಮಾರಗೌಡನಹಳ್ಳಿ, ತೊಂಡಾಳು, ಉಂಡವಾಡಿ, ಶಿರಿಯೂರು ಗ್ರಾಮಗಳ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಯದೆ ಭತ್ತದ ಕೃಷಿಗೆ ಸಮಸ್ಯೆಯಾಗಿದೆ.

‘ನಾಲೆಯ ಹೂಳು ಮತ್ತು ಜೊಂಡು ತೆರವುಗೊಳಿಸುವ ಬಗ್ಗೆ ಮೂರು ತಿಂಗಳ ಹಿಂದೆ ಇಲಾಖೆ ಕ್ರಮ ವಹಿಸಿದ್ದರೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ’ ಎಂದು ಸತ್ಯ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಆರೋಪಿಸಿದರು.

‘ಕಟ್ಟೆಮಳಲವಾಡಿ ಅಣೆಕಟ್ಟೆ ಕಳೆದ 5 ವರ್ಷಗಳ ಹಿಂದೆ ಸಂಪೂರ್ಣ ಜೀರ್ಣೋದ್ಧಾರಗೊಂಡು ಸುಭದ್ರವಾಗಿದೆ. ಈ ಕಟ್ಟೆಗೆ ಹೊಂದಿಕೊಂಡಿರುವ ಬಲದಂಡೆ ನಾಲೆ ಸಂಪೂರ್ಣ ಶಿಥಿಲವಾಗಿದ್ದು, ಜಿ.ಟಿ.ದೇವೇಗೌಡ ಅವರು ಶಾಸಕರಾಗಿದ್ದ ಅವಧಿಯಲ್ಲಿ ಅಲ್ಪ ಪ್ರಮಾಣದಲ್ಲಿ ಆಧುನೀಕರಣಗೊಳಿಸಲಾಗಿತ್ತು. ನಂತರದಲ್ಲಿ ನಾಲೆ ಆಧುನೀಕರಣಗೊಂಡಿಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು’ ಎಂದು  ಪ್ರಗತಿಪರ ರೈತ ರಾಮೇಗೌಡ ಆಗ್ರಹಿಸುತ್ತಾರೆ.

‘ನಾಲೆಯಲ್ಲಿನ ಹೂಳು ಮತ್ತು ಗಿಡಗಂಟಿಗಳನ್ನು ಒಮ್ಮೆ ತೆರವುಗೊಳಿಸಿದ್ದೇವೆ. ಡಿಸೆಂಬರ್ ಮೊದಲ ವಾರದಲ್ಲಿ ಹೊಡೆ ಕಟ್ಟುವ ಸಮಯಕ್ಕೆ ಮತ್ತೊಮ್ಮೆ ಹೂಳು ತೆರವುಗೊಳಿಸಿ ರೈತರಿಗೆ ನೀರು ತಲುಪಿಸಲು ಕ್ರಮ ವಹಿಸಲಾಗುವುದು’ ಎಂದು ಹಾರಂಗಿ ನೀರಾವರಿ ವಿಭಾಗದ ಎಇಇ ಸಂತೋಷ್‌ ‍ಪ್ರತಿಕ್ರಿಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.