ADVERTISEMENT

ಮೈಸೂರು | ‘ಸ್ಪರ್ಧಾತ್ಮಕ ಜಗತ್ತಿಗೆ ಕೌಶಲ ದಾರಿ’

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 7:02 IST
Last Updated 24 ಅಕ್ಟೋಬರ್ 2024, 7:02 IST
ಮೈಸೂರು ಯುವರಾಜ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಬುಧವಾರ ನಡೆದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಪ್ರೊ.ಎನ್.ನಾಗರಾಜ ಉದ್ಘಾಟಿಸಿದರು. ಪ್ರೊ.ಸಿ.ಎ.ಶ್ರೀಧರ್, ಪ್ರೊ.ಎಚ್.ಸೋಮಶೇಖರಪ್ಪ, ಪ್ರೊ.ಎಂ.ಕೆ. ಮಹೇಶ್, ಜಿ.ಕೃಷ್ಣಮೂರ್ತಿ, ಪ್ರೊ.ಕೆ.ಅಜಯ್‌ಕುಮಾರ್, ಪ್ರೊ.ಬಿ.ಎಂ.ವೆಂಕಟೇಶ್ ಪಾಲ್ಗೊಂಡಿದ್ದರು
ಮೈಸೂರು ಯುವರಾಜ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಬುಧವಾರ ನಡೆದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಪ್ರೊ.ಎನ್.ನಾಗರಾಜ ಉದ್ಘಾಟಿಸಿದರು. ಪ್ರೊ.ಸಿ.ಎ.ಶ್ರೀಧರ್, ಪ್ರೊ.ಎಚ್.ಸೋಮಶೇಖರಪ್ಪ, ಪ್ರೊ.ಎಂ.ಕೆ. ಮಹೇಶ್, ಜಿ.ಕೃಷ್ಣಮೂರ್ತಿ, ಪ್ರೊ.ಕೆ.ಅಜಯ್‌ಕುಮಾರ್, ಪ್ರೊ.ಬಿ.ಎಂ.ವೆಂಕಟೇಶ್ ಪಾಲ್ಗೊಂಡಿದ್ದರು   

ಮೈಸೂರು: ‘ವಿದ್ಯಾರ್ಥಿಗಳು ಅಂಕ ಗಳಿಕೆಯೊಂದಿಗೆ ಉತ್ತಮ ಕೌಶಲ ಬೆಳೆಸಿಕೊಳ್ಳಲು ಗಮನ ಹರಿಸಬೇಕು. ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳು ಅಣಿಯಾಗಬೇಕು’ ಎಂದು ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ ಸಲಹೆ ನೀಡಿದರು.

ಇಲ್ಲಿನ ಯುವರಾಜ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಬುಧವಾರ ನಡೆದ ಜ್ಞಾನವಾಹಿನಿಯ ಸಾಂಸ್ಕೃತಿಕ, ಕ್ರೀಡೆ, ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಯಾವ ರೀತಿ ಸ್ಪರ್ಧೆಗಳು ಎದುರಾಗುತ್ತವೆ ಎಂಬುದನ್ನು ವಿದ್ಯಾರ್ಥಿಗಳು ಮೊದಲು ಅರ್ಥ ಮಾಡಿಕೊಳ್ಳಬೇಕು. ನಂತರ ಅದನ್ನು ಎದುರಿಸಲು ಬೇಕಾದ ತಯಾರಿ ಮಾಡಿಕೊಳ್ಳಬೇಕು. ಶಿಸ್ತು ಬೆಳೆಸಿಕೊಂಡರೆ ಸಾಧನೆ ನಿಮ್ಮದಾಗುತ್ತದೆ. ಪರಿಶ್ರಮದಿಂದ ಹಂತ ಹಂತವಾಗಿ ಬೆಳೆಯಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

ಮಹಾರಾಜ ಕಾಲೇಜು‌ ನಿವೃತ್ತ ಪ್ರಾಂಶುಪಾಲ ಪ್ರೊ.ಸಿ.ಎ.ಶ್ರೀಧರ್ ಮಾತನಾಡಿ, ‘ಗ್ರಾಮೀಣ ಪ್ರದೇಶದಿಂದ ಬಂದ ವಿದ್ಯಾರ್ಥಿಗಳು ದೃಢ ವಿಶ್ವಾಸ, ನಿರಂತರ ಪರಿಶ್ರಮದಿಂದ ವಿದ್ಯಾರ್ಜನೆ ಕೈಗೊಳ್ಳಬೇಕು. ಪ್ರಪಂಚದಲ್ಲಿನ ಉತ್ತಮ ವಿಚಾರಗಳನ್ನು ಸೆಳೆಯುವ ಧೀ ಶಕ್ತಿಯನ್ನು ಹೊಂದಬೇಕು’ ಎಂದರು.

‘ಸಮಯ ಎಂಬುದು ಅನರ್ಘ್ಯ. ಅದನ್ನು ವ್ಯರ್ಥ ಮಾಡಬೇಡಿ. ತರಗತಿಗೆ ತಪ್ಪದೆ ಹಾಜರಾಗಿ. ಗುರು, ಹಿರಿಯರನ್ನು ಗೌರವಿಸಿ. ಸಮಾಜಕ್ಕೆ ಇಂದು ಅರಿವುಳ್ಳ ವ್ಯಕ್ತಿಗಳ ಅಗತ್ಯವಿದೆ’ ಎಂದು ಹೇಳಿದರು.

‘ಸಾಹಿತ್ಯ, ನಾಟಕ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳು ನಮ್ಮಲ್ಲಿ ಸಂಸ್ಕಾರ ಉಂಟುಮಾಡುತ್ತವೆ. ಶೈಕ್ಷಣಿಕ ಸಂಪರ್ಕ ಮತ್ತು ಕ್ರೀಡೆಯು ಸಾಮಾಜಿಕ ಅಭ್ಯುದಯ, ದೈಹಿಕ ಸದೃಢತೆಗೆ ಸಹಕಾರ ನೀಡುತ್ತವೆ. ಈ ಎಲ್ಲವೂ ನಮ್ಮನ್ನು ಮಾನವರನ್ನಾಗಿ ರೂಪಿಸುತ್ತವೆ’ ಎಂದರು.

ಪ್ರಾಂಶುಪಾಲ ಪ್ರೊ.ಎಚ್.ಸೋಮಶೇಖರಪ್ಪ, ಆಡಳಿತಾಧಿಕಾರಿ ಪ್ರೊ.ಎಂ.ಕೆ. ಮಹೇಶ್, ಜ್ಞಾನವಾಹಿನಿ ಸಮಿತಿ ಸಂಚಾಲಕ ಜಿ.ಕೃಷ್ಣಮೂರ್ತಿ, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಕೆ.ಅಜಯ್‌ಕುಮಾರ್, ಐಕ್ಯೂಎಸಿ ಸಂಯೋಜಕ ಪ್ರೊ.ಬಿ.ಎಂ.ವೆಂಕಟೇಶ್ ಉಪಸ್ಥಿತರಿದ್ದರು.

ಸ್ಪರ್ಧೆಗಳನ್ನು ಅರಿತು ತಯಾರಿ ನಡೆಸಿ: ಸಲಹೆ ಗ್ರಾಮೀಣ ವಿದ್ಯಾರ್ಥಿಗಳು ದೃಢ ವಿಶ್ವಾಸ ಹೊಂದಲಿ ಸಾಂಸ್ಕೃತಿಕ ಚಟುವಟಿಕೆಯಿಂದ ಸಂಸ್ಕಾರ ವೃದ್ಧಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.