ADVERTISEMENT

ಗರಿಗೆದರಿದ ದಸರಾ ಸಂಭ್ರಮ | ಸಾಹಿತಿ ಎಸ್‌.ಎಲ್‌. ಭೈರಪ್ಪರಿಂದ ನಾಡಹಬ್ಬಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 19:53 IST
Last Updated 29 ಸೆಪ್ಟೆಂಬರ್ 2019, 19:53 IST
ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ಎಸ್.ಎಲ್.ಭೈರಪ್ಪ ಅವರು ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿಗೆ ಪುರ್ಷ್ಪಾಚನೆ ಮಾಡುವ ಮೂಲಕ 2019ರ ದಸರಾ ಮಹೋತ್ಸವವನ್ನು ಉದ್ಘಾಟಿಸಿದರು.  -ಪ್ರಜಾವಾಣಿ ಚಿತ್ರ
ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ಎಸ್.ಎಲ್.ಭೈರಪ್ಪ ಅವರು ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿಗೆ ಪುರ್ಷ್ಪಾಚನೆ ಮಾಡುವ ಮೂಲಕ 2019ರ ದಸರಾ ಮಹೋತ್ಸವವನ್ನು ಉದ್ಘಾಟಿಸಿದರು. -ಪ್ರಜಾವಾಣಿ ಚಿತ್ರ   

ಮೈಸೂರು: ನಾಡಹಬ್ಬವಾದ ಮೈಸೂರು ದಸರಾ ಮಹೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ಭಾನುವಾರ ಚಾಲನೆ ಸಿಕ್ಕಿತು. ಇದರೊಂದಿಗೆ ನಗರದ ಎಲ್ಲೆಡೆ ನವರಾತ್ರಿಯ ಸಂಭ್ರಮ–ಸಡಗರ ಕಳೆಗಟ್ಟಿತು.

ಮೊದಲ ದಿನವೇ, ಅಪಾರ ಸಂಖ್ಯೆಯ ಜನರು ಖುಷಿಯಿಂದ ಈ ಸಂಭ್ರಮದಲ್ಲಿ ಮಿಂದೆದ್ದರು.

ಹಿರಿಯ ಸಾಹಿತಿ ಎಸ್‌.ಎಲ್‌.ಭೈರಪ್ಪ ಅವರು ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಆರತಿ ಬೆಳಗಿ, ಪುಷ್ಪಾರ್ಚನೆ ಮೂಲಕ 409ನೇ ದಸರಾ ಮಹೋತ್ಸವವನ್ನು ಉದ್ಘಾಟಿಸಿದರು. ಬೆಳಿಗ್ಗೆ 9.39ರಿಂದ 10.25ಕ್ಕೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಉದ್ಘಾಟನೆಯಾಗಬೇಕಿದ್ದ ದಸರಾ ಕಾರ್ಯಕ್ರಮ, ನಿಗದಿತ ಮುಹೂರ್ತಕ್ಕಿಂತ ನಾಲ್ಕು ನಿಮಿಷ ಮೊದಲೇ ನಡೆಯಿತು.

ADVERTISEMENT

ಬೆಳಿಗ್ಗೆಯೇ ಬೆಟ್ಟವನ್ನೇರಿ ಬಂದಿದ್ದ ನೂರಾರು ಭಕ್ತರು ದೇವಿ ಸನ್ನಿಧಿಯಲ್ಲಿ ಪೂಜಾ ಕೈಂಕರ್ಯದಲ್ಲಿ ನಿರತರಾಗಿದ್ದರು.

ಅರಮನೆ ಸೇರಿದಂತೆ ನಗರದ ವಿವಿಧೆಡೆ ದಸರಾ ಚಟುವಟಿಕೆಗಳು ಗರಿಗೆದರಿದವು. ಚಲನಚಿತ್ರೋತ್ಸವ, ಸಾಹಸ ಕ್ರೀಡೋತ್ಸವ, ಆಹಾರ ಮೇಳ, ಕುಸ್ತಿ ಪಂದ್ಯಾವಳಿ, ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಸದೃಢ ಭಾರತ ಮಕ್ಕಳ ಕ್ರೀಡಾರಂಗ, ಪುಸ್ತಕ ಮಳಿಗೆಗಳು ಒಂದರ ಬೆನ್ನಿಗೆ ಒಂದರಂತೆ ಆರಂಭಗೊಂಡವು. ಸಂಜೆ ವೇಳೆಗೆ, ಜಗಮಗಿಸುವ ವಿದ್ಯುತ್‌ ದೀಪಾಲಂಕಾರದಿಂದ ಇಡೀ ನಗರ ದೇದಿಪ್ಯಮಾನವಾಗಿ ಬೆಳಗಿತು. ಅಪರೂಪದ ಈ ದೃಶ್ಯಾವಳಿಯನ್ನು ಜನಸಮೂಹ ಕಣ್ತುಂಬಿಕೊಂಡು ಖುಷಿಪಟ್ಟಿತು. ವಿಂಟೇಜ್‌ ಕಾರುಗಳ ರ್‍ಯಾಲಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ದಸರಾ ಅಂಗವಾಗಿ ಮೈಸೂರು ಅರಮನೆ ಭಾನುವಾರ ರಾತ್ರಿ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸಿದ ಪರಿ -ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.

ರಂಗಾಸಕ್ತರು ‘ನವರಾತ್ರಿ ರಂಗೋತ್ಸವ’ದ ನಾಟಕ ವೀಕ್ಷಣೆಗೆ ಕಾತರರಾಗಿದ್ದರೆ, ಸಿನಿಪ್ರಿಯರು ದಸರಾ ಚಲನಚಿತ್ರಗಳನ್ನು ಪ್ರದರ್ಶಿಸಿದ ಸಿನಿಮಂದಿರಗಳತ್ತ ತೆರಳಿದರು. ಪಂಕಜ್‌ ಉದಾಸ್‌ ಅವರ ಗಜಲ್‌ ಆಸ್ವಾದನೆಯೂ ಇತ್ತು. ಜಗನ್ಮೋಹನ್‌ ಅರಮನೆಯ ವೇದಿಕೆಯಲ್ಲಿ ಜಯಚಾಮರಾಜ ಒಡೆಯರ್‌ ಗೀತೆಗಳು ಅನುರಣಿಸಿದವು.

ಬೆಟ್ಟದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನೆರೆ–ಬರದ ಛಾಯೆಯಲ್ಲಿ ನಲುಗಿರುವ ರಾಜ್ಯದಲ್ಲಿ ಸುಭಿಕ್ಷೆ ನೆಲೆಸಲೆಂದು ಚಾಮುಂಡೇಶ್ವರಿಯನ್ನು ಪ್ರಾರ್ಥಿಸಲು ಬಂದಿದ್ದಾಗಿ ಹೇಳಿದರು.

‘ನೆರೆ ಸಂತ್ರಸ್ತರಿಗಾಗಿ ಮಿಡಿದ ನೂರಾರು ದಾನಿಗಳು ₹ 300 ಕೋಟಿಗೂ ಹೆಚ್ಚು ಮೊತ್ತವನ್ನು ಪರಿಹಾರ ನಿಧಿಗೆ ನೀಡಿದ್ದಾರೆ. ಕರ್ತವ್ಯದ ಭಾಗವಾಗಿ ಇಲ್ಲಿಗೆ ಬಂದಿದ್ದು, ನಾಡಿದ್ದಿನಿಂದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಮತ್ತೊಂದು ಸುತ್ತಿನ ಪ್ರವಾಸ ನಡೆಸಿ, ನೆರೆ ಸಂತ್ರಸ್ತರ ಅಳಲು ಆಲಿಸುತ್ತೇನೆ. ಸರ್ಕಾರದಿಂದ ಸಾಧ್ಯವಾದ ಎಲ್ಲ ನೆರವು, ಸೌಲಭ್ಯವನ್ನೂ ಒದಗಿಸಿಕೊಡುತ್ತೇನೆ’ ಎಂದು ಭರವಸೆ ನೀಡಿದರು.

ಸಿದ್ಧಪಡಿಸಿದ ಭಾಷಣದ ಪ್ರತಿಯನ್ನು ಓದಿದ ಯಡಿಯೂರಪ್ಪ, ವಿಜಯನಗರ ಅರಸರು, ಮೈಸೂರಿನ ಅರಸರು ನಡೆಸಿದ ವೈಭವದ ದಸರೆಯನ್ನು ನೆನೆದರು. ‘ಭೈರಪ್ಪ ಅವರಂಥ ಹಿರಿಯ ಸಾಹಿತಿಗಳು ದಸರಾ ಉದ್ಘಾಟಿಸಿರುವುದು ನಮ್ಮ ಸುಕೃತ. ಸರಸ್ವತಿ ಸಮ್ಮಾನ್‌ ಪುರಸ್ಕೃತರಾದ ಅವರು ಜ್ಞಾನಪೀಠ ಗೌರವಕ್ಕೆ ಅರ್ಹರೂ ಕೂಡ’ ಎಂದರು.

ಭಾಷಣ ಮುಗಿಸಲು ಹೇಳಿದ್ದಕ್ಕೆ ಭೈರಪ್ಪ ಸಿಟ್ಟು

ದಸರಾ ಉದ್ಘಾಟಿಸಿದ ಭೈರಪ್ಪ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಮಾತನಾಡುತ್ತಿದ್ದರು. ಮುಕ್ಕಾಲು ತಾಸು ಆಗುತ್ತಿದ್ದಂತೆ, ಅವರ ಬಳಿ ಬಂದ ಸಂಸದ ಪ್ರತಾಪ್‌ ಸಿಂಹ, ‘ಸಮಯವಾಯ್ತು’ ಎಂದರು. ತಕ್ಷಣವೇ ಸಿಟ್ಟಿಗೆದ್ದ ಭೈರಪ್ಪ ತಮ್ಮ ಕೈ ಕೊಡವಿ, ‘ಸಮಯದ ಪ್ರಜ್ಞೆ ನನಗೂ ಇದೆ. ನೀವು ಹೇಳದಿದ್ದರೂ ಐದು ಸೆಕೆಂಡ್‌ನಲ್ಲಿ ನನ್ನ ಭಾಷಣ ಮುಗಿಸುತ್ತಿದ್ದೆ’ ಎಂದು ಹೇಳಿದರು.

ಚಾಮುಂಡಿ ಬೆಟ್ಟದ ಮಹಿಷ ಪ್ರತಿಮೆ ಬಳಿ ಜಮಾಯಿಸಿದ್ದ ಯುವಕರನ್ನು, ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದ ಪೊಲೀಸರು

ಪ್ರತಿಭಟನಕಾರರ ವಶ

ಮಹಿಷ ದಸರಾ ಸಮಿತಿ ಸದಸ್ಯರು ಮೈಸೂರು ದಸರಾ ಉತ್ಸವಕ್ಕೆ ಕಪ್ಪುಬಾವುಟ ಪ್ರದರ್ಶನ ಮಾಡುವುದಾಗಿ ಹೇಳಿದ್ದರಿಂದ, ಚಾಮುಂಡಿ ಬೆಟ್ಟದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. ಬೆಳಿಗ್ಗೆಯೇ ಮಹಿಷ ಪ್ರತಿಮೆ ಬಳಿ ಜಮಾಯಿಸಿದ್ದ ಹಲವು ಯುವಕರನ್ನು ಪೊಲೀಸರು ವಶಕ್ಕೆ ಪಡೆದು, ಬಸ್‌ನಲ್ಲಿ ಕರೆದೊಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.