ADVERTISEMENT

ಮೈಸೂರು | ಹೊರೆ ತಗ್ಗಿಸಿ, ಕೈಗಾರಿಕೆಗಳನ್ನು ರಕ್ಷಿಸಿ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2023, 6:18 IST
Last Updated 28 ಆಗಸ್ಟ್ 2023, 6:18 IST
ಮೈಸೂರು ಕೆಆರ್‌ಎಸ್‌ ರಸ್ತೆಯಲ್ಲಿ ಆಟೊಮೊಬೈಲ್ ಬಿಡಿಭಾಗಗಳ ಉತ್ಪಾದನೆಯಲ್ಲಿ ತೊಡಗಿರುವ ಮಹಿಳಾ ಕಾರ್ಮಿಕರು   ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರು ಕೆಆರ್‌ಎಸ್‌ ರಸ್ತೆಯಲ್ಲಿ ಆಟೊಮೊಬೈಲ್ ಬಿಡಿಭಾಗಗಳ ಉತ್ಪಾದನೆಯಲ್ಲಿ ತೊಡಗಿರುವ ಮಹಿಳಾ ಕಾರ್ಮಿಕರು   ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.   

ಮೈಸೂರು: ಈಶಾನ್ಯ ಏಷ್ಯಾದಲ್ಲೇ ಅತ್ಯಂತ ಬೃಹತ್ತಾದ ಕೈಗಾರಿಕಾ ಪ್ರದೇಶ ಮೈಸೂರು. ಒಂದೇ ತೆಕ್ಕೆಯಲ್ಲಿ ಹಲವು ಕೈಗಾರಿಕಾ ಪ್ರದೇಶಗಳು ಇಲ್ಲಿವೆ. ಇಲ್ಲಿನ ವಿಶೇಷ ಎಂದರೆ ಗುಂಡುಸೂಜಿ, ನಟ್ ಬೋಲ್ಟ್‌‌ನಿಂದ ಬೃಹತ್ ಕಂಟೇನರ್, ಬಿಎಂಎಲ್ ಎಂಜಿನ್‌, ಟ್ರಕ್‌ಗಳು, ಆಟೊಮೊಬೈಲ್‌ಗೆ ಅಗತ್ಯ ಬಿಡಿ ಭಾಗಗಳ ತಯಾರಿ ಜೊತೆಗೇ ನೋಟು ಮುದ್ರಣವೂ ನಡೆಯುತ್ತದೆ.

ಇದಲ್ಲದೆ ವಿಕ್ರಾಂತ್ ಟೈರ್ (ಜೆಕೆ ಟೈರ್), ನೋಟು ಮುದ್ರಣ, ಅದಕ್ಕೆ ಬೇಕಾಗುವ ಪೇಪರ್ ಹೀಗೆ ಎಲ್ಲವನ್ನೂ ಉತ್ಪಾದಿಸುವ ಕಾರ್ಖಾನೆಗಳು, ಇನ್ಫೊಸಿಸ್ ದಿಗ್ಗಜರು, ಎಲ್‌.ಟಿ., ವಿಪ್ರೊ  ಎಲ್ಲ ಪ್ರಕಾರಗಳ ಸಾಫ್ಟ್‌ವೇರ್, ಹಾರ್ಡವೇರ್ ಯುನಿಟ್‌ಗಳು, ಸ್ಟಾರ್ಟ್‌ಅಪ್‌ಗಳು ಇಲ್ಲಿವೆ.

ಕೈಗಾರಿಕಾ ಪಟ್ಟಣ ಪ್ರಾಧಿಕಾರ (ಟೌನ್‌ಶಿಪ್) ರಚಿಸಲು 2003ರಲ್ಲಿ ಗೆಜೆಟ್ ಅಧಿಸೂಚನೆ ಬಂದಿದ್ದರೂ ಪ್ರಾಧಿಕಾರ ರಚನೆಯಾಗಿಲ್ಲ. ಅದರಿಂದ ಕೈಗಾರಿಕೋದ್ಯಮಿಗಳು ಕೆಐಎಡಿಬಿ, ಗ್ರಾ.ಪಂ ಅಥವಾ ನಗರಸಭೆ, ಪಾಲಿಕೆ ಹೀಗೆ ಸ್ಥಳೀಯ ಸಂಸ್ಥೆಗಳಿಗೆ ಆಸ್ತಿಕರ ತುಂಬುವಂತಾಗಿದೆ. ಮೂರು ರೀತಿ ಕರ ತುಂಬುವುದು ತಪ್ಪಿಸಬೇಕು. ‘ಅದಕ್ಕೆ ಪ್ರಾಧಿಕಾರ ರಚನೆಯೊಂದೆ ಮಾರ್ಗ’ ಎನ್ನುತ್ತಾರೆ ಕೈಗಾರಿಕೋದ್ಯಮಿಗಳು.

ADVERTISEMENT

‘ಎಂಎಸ್‌ಎಂಇ  ಅಡಿಯಲ್ಲಿ ಜಿಲ್ಲೆಯಲ್ಲಿ 21 ಬೃಹತ್ ಕೈಗಾರಿಕೆ, 38 ಮಧ್ಯಮ ಹಾಗೂ 53,886ಕ್ಕೂ ಹೆಚ್ಚು ಸಣ್ಣ ಕೈಗಾರಿಕೆಗಳಿವೆ’ ಎಂದು ಕೈಗಾರಿಕಾ ಇಲಾಖೆ ಉಪ ನಿರ್ದೇಶಕ ವರದೇಗೌಡ ತಿಳಿಸಿದ್ದಾರೆ.

‘ಕೈಗಾರಿಕೆಗಳ ಸ್ಥಾಪನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಆನ್‌ಲೈನ್‌ ಅರ್ಜಿಯನ್ನು ಸಲ್ಲಿಸಬಹುದು. ಅದನ್ನು ಪರಾಮರ್ಶಿಸಿ ವರದಿ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಸರ್ಕಾರಿ ಭೂಮಿ ಹಾಗೂ ಕೈಗಾರಿಕೆಗಳ ಪ್ರದೇಶದ  ಹತ್ತಿರದ ಜಮೀನಿನ ರೈತರೊಂದಿಗೆ (214 ಎಕರೆ  ಹಿಮ್ಮಾವು ಹಾಗೂ ಅಡಕನಹಳ್ಳಿ ಗ್ರಾಮಗಳಲ್ಲಿ) ಮಾತುಕತೆ ನಡೆದಿದೆ.’ ಎಂದು ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಟಿ.ದಿನೇಶ್ ತಿಳಿಸಿದರು.

‘ಜಿಲ್ಲೆಯಲ್ಲಿರುವ ಒಟ್ಟು ಕೈಗಾರಿಕೆಗಳಲ್ಲಿ ಶೇ 40 ಮಾತ್ರ ಆರೋಗ್ಯಕರವಾಗಿವೆ. ಶೇ 30 ಮುಚ್ಚಿದ್ದರೆ, ಶೇ 30 ರೋಗಗ್ರಸ್ತವಾಗಿವೆ’ ಎಂಬುದು ಮೈಸೂರು ಕೈಗಾರಿಕೆಗಳ ಸಂಘದ ಹೇಳಿಕೆ.

ಜಿಲ್ಲೆಯ 8 ಸಾವಿರ ಎಕರೆ ಪ್ರದೇಶದಲ್ಲಿ, ಮೈಸೂರು ವ್ಯಾಪ್ತಿಯಲ್ಲಿ 5,400 ಎಕರೆ ಪ್ರದೇಶದಲ್ಲಿ ಸಣ್ಣ ಕೈಗಾರಿಕೆಗಳಿಗೆ ಗೃಹೋದ್ಯಮಿಗಳಿಗೆ ಸಿಕ್ಕ ಜಾಗ ಕಡಿಮೆ. ಬಹುತೇಕ ಮನೆಗಳಲ್ಲಿ, ಹಳ್ಳಿಗಳಲ್ಲಿ, ಸ್ವಂತ ಜಮೀನುಗಳಲ್ಲಿ, ಕೊಳೆಗೇರಿಗಳಲ್ಲಿ ಗುಡಿ ಕೈಗಾರಿಕೆಗಳಂತೆ ತಲೆ ಎತ್ತಿವೆ. ಅವು ಸಂಘಟನೆಗಳ ವ್ಯಾಪ್ತಿಯಲ್ಲಿಲ್ಲ.

ಸಮಸ್ಯೆಗಳ ಉದ್ದಿಮೆಗಳನ್ನು, ಉದ್ದಿಮೆದಾರರನ್ನು ಹೈರಾಣಾಗಿವೆ. ಎಲ್ಲ ಕೈಗಾರಿಕಾ ಉದ್ಯಮಿಗಳಿಗೆ ಸರ್ಕಾರದ ನೆರವು, ಸಾಲ ಸಿಗುವುದಿಲ್ಲ. ಅನಿವಾರ್ಯವಾಗಿ, ಕೈಸಾಲ, ಖಾಸಗಿ ಫೈನಾನ್ಸ್, ಮೀಟರ್ ಬಡ್ಡಿ ಸಾಲಕ್ಕೆ ಮೊರೆ ಹೋಗುತ್ತಿದ್ದಾರೆ. ಕಷ್ಟಪಟ್ಟು ಉತ್ಪಾದಿಸಿದ ವಸ್ತುಗಳಿಗೆ ಬೇಡಿಕೆ ಬಂದಾಗ ಅನುಕೂಲ ಇಲ್ಲದಿದ್ದರೆ ಕಷ್ಟಗಳು ಹಿಂಬಾಲಿಸುತ್ತವೆ.

ಆಡಳಿತ ನೀತಿ ಬದಲಾದಾಗ ಉದ್ಯಮಗಳು ಸಂಕಷ್ಟಕ್ಕೆ ಸಿಲುಕುತ್ತವೆ. ಪ್ಲಾಸ್ಟಿಕ್‌ ಆಧಾರಿತ ಕೈಗಾರಿಕೆಗಳನ್ನು ಉತ್ತೇಜಿಸಲು ಸಿಪೆಟ್ (ಕೇಂದ್ರೀಯ ಪ್ಲಾಸ್ಟಿಕ್ ತಂತ್ರಜ್ಞಾನ ಸಂಶೋಧನಾ ಸಂಸ್ಥೆ) ಆರಂಭಿಸಲಾಗಿತ್ತು. ಈಗ 20 ಮೈಕ್ರಾನ್‌ಗಿಂತ ಕಡಿಮೆ ಪ್ಲಾಸ್ಟಿಕ್ ಉತ್ಪಾದನೆ ನಿಲ್ಲಿಸುವಂತೆ ಹೇಳಿದಾಗ ನಿಲ್ಲಿಸುವುದು ಅನಿವಾರ್ಯ. ಆದರೆ, ಮಾಡಿದ ಸಾಲ ತೀರಿಸುವುದು ಹೇಗೆ ಎಂಬುದು ಸವಾಲು.

ಕಾಡಿದ ಕೊರೊನಾ

ಮೂರು ವರ್ಷಗಳ ಹಿಂದೆ ಕೊರೊನಾ ಲಾಕ್‌ಡೌನ್ ಆದಾಗ ಹಲವು ಕೈಗಾರಿಕೆಗಳು ಬಾಗಿಲು ಮುಚ್ಚಿದವು. ಆಗ ಆದ ಸಮಸ್ಯೆಯಿಂದ ಹೊರಬರಲು ಮೂರು ವರ್ಷ ಬೇಕಾಯಿತು. ಈಗ ಉದ್ಯಮಗಳು ಹಳಿಗೆ ಬರುತ್ತಿವೆ. ಅದರೊಂದಿಗೆ ಜಿಎಸ್‌ಟಿ ಕೂಡಾ ಉದ್ಯಮಿಗಳಿಗೆ ಅರ್ಥವಾಗದ ವಿಷಯವಾಯಿತು. ಎಲ್ಲದಕ್ಕೂ ಲೆಕ್ಕ ಇಡಬೇಕೆಂದರೆ ಕೈಸಾಲ, ಬಡ್ಡಿ ಸಾಲ ಲೆಕ್ಕಕ್ಕೆ ಹತ್ತುವುದಿಲ್ಲ. ಇದು ತಲೆ ನೋವಾಗಿ ಕಾಡಿತು. ಈಗ ಅದಕ್ಕೂ ಎಲ್ಲರೂ ಹೊಂದಿಕೊಳ್ಳುತ್ತಿದ್ದಾರೆ.

‘ಫೈಟ್ ವಿತ್ ಚೀನಾ ಗೂಡ್ಸ್‌ ಎಂದು ‌‌‌ಕೇಂದ್ರ ಸರ್ಕಾರ ಘೋಷಿಸಿತು. ಆದರೆ, ಅಲ್ಲಿ ಸಿಗುವ ಮೂಲ ಸೌಲಭ್ಯ, ಕಡಿಮೆ ದರದಲ್ಲಿ ಕಚ್ಚಾ ವಸ್ತುಗಳು ಇಲ್ಲ ಸಿಗಲ್ಲ. ಕಾರ್ಮಿಕರು ಕೂಡಾ ಸಿಗುವುದಿಲ್ಲ. ಹೀಗಾದಾಗ ಉತ್ಪಾದನೆ ವೆಚ್ಚ ತಗ್ಗಿಸಲು ಆಗದೆ ಅನಿವಾರ್ಯವಾಗಿ ಬೆಲೆ ಹೆಚ್ಚಾಗುತ್ತದೆ’ ಎಂಬುದು ಉದ್ದಿಮೆದಾರರ ಅಭಿಪ್ರಾಯ.

₹ 2,134 ಕೋಟಿ ಸಾಲ: ‘ಜಿಲ್ಲೆಯಲ್ಲಿ 2022–23ರಲ್ಲಿ  ಪಿಎಂಇಜಿಪಿ ಯೋಜನೆಗೆ 8 ಸಾವಿರ ಅರ್ಜಿ ಸಲ್ಲಿಕೆಯಾಗಿವೆ. ವಿವಿಧ ಯೋಜನೆಗಳಲ್ಲಿ 53 ಸಾವಿರ ‌ಫಲಾನುಭವಿಗಳು ಜೂನ್‌ ಅಂತ್ಯದವರೆಗೆ ₹ 2,134 ಕೋಟಿ ಸಾಲವನ್ನು ವಿವಿಧ ಬ್ಯಾಂಕ್‌ಗಳಿಂದ ನೀಡಲಾಗಿದೆ’ ಎಂದು ಲೀಡ್ ಬ್ಯಾಂಕ್ ಮಾಹಿತಿ ನೀಡಿದೆ.

500 ಮಂದಿಗೆ ತರಬೇತಿ

‘ಕೇಂದ್ರ ಸರ್ಕಾರ ವಿಶ್ವ ಬ್ಯಾಂಕ್ ನೆರವಿನೊಂದಿಗೆ ‘ಅಪ್ರೆಂಟಿಶಿಪ್ ಯೋಜನೆ’ ಜಾರಿಗೆ ತಂದಿದ್ದು ಮೈಸೂರು ಕೈಗಾರಿಕೆಗಳ ಸಂಘವು ಆಯ್ಕೆಯಾಗಿರುವುದು ಖುಷಿಯ ವಿಷಯ. ₹ 1 ಕೋಟಿ ನೆರವನ್ನು ಕೇಂದ್ರ ನೀಡಲಿದ್ದು ಈಗಾಗಲೇ ₹ 40 ಲಕ್ಷ ಬಿಡುಗಡೆಯಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 250 ಕೈಗಾರಿಕೆಗಳ ನೆರವಿನೊಂದಿಗೆ 500 ಜನರಿಗೆ ತರಬೇತಿ ನೀಡುವ ಗುರಿ ಇದೆ’ ಎಂದು ಮೈಸೂರು ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಸುರೇಶ್‌ಕುಮಾರ್ ಜೈನ್ ಹೇಳಿದರು. ‘ಸಣ್ಣ ಉದ್ಯಮದ ಜೊತೆಗೆ ಮನೆಗೆಲಸ ಹೋಟೆಲ್ ಪೆಟ್ರೋಲ್‌ ಬಂಕ್ ಸೆಕ್ಯುರಿಟಿ ಹೀಗೆ ವಿವಿಧ ಕಾರ್ಯ ನಿರ್ವಹಿಸಲು ಬೇಕಾಗುವ ಕೌಶಲಗಳ ಬಗ್ಗೆ ತರಬೇತಿ ನೀಡಲಾಗುವುದು’ ಎಂದರು.

ಅನ್ಯ ಉದ್ದೇಶಕ್ಕೆ ಕೈಗಾರಿಕೆ ಭೂಮಿ

ಹುಣಸೂರು: ತಾಲ್ಲೂಕಿನಲ್ಲಿ ಬಹುತೇಕ ಸಣ್ಣ ಕೈಗಾರಿಕೆ ಪ್ರದೇಶವನ್ನು ಇತರೆ ಉದ್ಯಮಗಳಿಗೆ ಬಳಸಿಕೊಳ್ಳುತ್ತಿದ್ದು ಸ್ಥಳೀಯ ಯುವಕರಿಗೆ ಉದ್ಯೋಗವಿಲ್ಲವಾಗಿದೆ. 3 ದಶಕಗಳ ಹಿಂದೆ 10 ಎಕರೆಯಲ್ಲಿ ಸಣ್ಣ ಕೈಗಾರಿಕೆ ವಲಯ ಸ್ಥಾಪಿಸಿದ್ದು ನಿವೇಶನ ಪಡೆದ 89 ಉದ್ಯಮಿಗಳು ಹೋಟೆಲ್ ಕಾರು ಟ್ರಾಕ್ಟರ್ ಶೋ ರೂಮ್‌ಗಳಿಗೆ ಬಾಡಿಗೆ ನೀಡಿದ್ದಾರೆ.

ಉದ್ಯೋಗ ಬಯಸದೇ ಉದ್ದಿಮೆದಾರರಾಗಿ

ಯುವಜನತೆ ಪದವಿ ಮುಗಿದಾಕ್ಷಣ ನೌಕರಿ ಅರಸುವುದನ್ನು ಬಿಡಿ. ಕೌಶಲ ಅಳವಡಿಸಿಕೊಂಡು ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಬಂದು ಮಾರ್ಗದರ್ಶನದೊಂದಿಗೆ ಯೋಜನೆಗಳ ಲಾಭ ಪಡೆದು ಉದ್ದಿಮೆದಾರರಾಗಿ ಹಲವರಿಗೆ ಉದ್ಯೋಗ ನೀಡುವಂತಾಗಿರಿ ಟಿ.ದಿನೇಶ್ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ** ಸಿಬ್ಬಂದಿ ತರಬೇತಿ ಬೇಕು 2012ನೇ ಸಾಲಿನಲ್ಲಿ ನಡೆದ ಸರ್ವೆ ಪ್ರಕಾರ ತಾಲ್ಲೂಕಿನಲ್ಲಿ ಸುಮಾರು 5ಸಾವಿರ ಕುಶಲಕರ್ಮಿಗಳಿದ್ದರು. ನಂತರ ಸಮೀಕ್ಷೆ ನಡೆದಿಲ್ಲ. ನಂಜನಗೂಡು ಪಿರಿಯಾಪಟ್ಟಣ ಮತ್ತು ಕೆ.ಆರ್.ನಗರ ತಾಲ್ಲೂಕು ಪ್ರಭಾರವೂ ಇದೆ. ಹೆಚ್ಚಿನ ಸಿಬ್ಬಂದಿಬೇಕು. ಸಂಶೋಧನೆ ಆಧುನಿಕ ತಂತ್ರಜ್ಞಾನದ ಬಗ್ಗೆ ತರಬೇತಿ ಸಿಗಬೇಕು. ಸೋಮಶೇಖರ್ ಕೈಗಾರಿಕಾ (ಪ್ರಭಾರ) ವಿಸ್ತರಣಾಧಿಕಾರಿ. ಕೆ.ಆರ್.ನಗರ.

ಕಾಡುವ ಸಿಬ್ಬಂದಿ ಕೊರತೆ

‘ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಕುಶಲಕರ್ಮಿ ತರಬೇತಿ ಸಂಸ್ಥೆ ಕಚೇರಿ ಇದ್ದರೂ ಒಬ್ಬ ಅಧಿಕಾರಿ 7 ತಾಲ್ಲೂಕು ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಸಕಾಲಕ್ಕೆ ಕಚೇರಿ ತೆರೆಯಲು ಸಿಬ್ಬಂದಿ ಇಲ್ಲದೆ ಇಲಾಖೆ ಮಾಹಿತಿ ಸಾರ್ವಜನಿಕರಿಗೆ ನೀಡಲು ಸಾಧ್ಯವಿಲ್ಲದೆ ಏಕಾಂಗಿಯಾಗಿಯಾಗಿರುವೆ - ಅಶ್ವಿನಿ, ಸಹಾಯಕ ನಿರ್ದೇಶಕಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಕುಶಲಕರ್ಮಿ ತರಬೇತಿ ಸಂಸ್ಥೆ

ಅರ್ಜಿ ಸಲ್ಲಿಸುವುದೇ ಸಮಸ್ಯೆ

ಗ್ರಾಮದಲ್ಲಿ ವೆಲ್ಡಿಂಗ್ ಘಟಕ ತೆರೆಯಲು ಅರ್ಜಿ ಸಲ್ಲಿಸಲು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಕುಶಲಕರ್ಮಿ ತರಬೇತಿ ಸಂಸ್ಥೆ ಕಚೇರಿಗೆ ತಿರುಗುತ್ತಿದ್ದು ವಾರದಲ್ಲಿ ಒಂದು ದಿನ ಕಚೇರಿ ತೆರೆಯುತ್ತಿದೆ. ಅರ್ಜಿ ಸಲ್ಲಿಸಲು ಪರದಾಡುತ್ತಿದ್ದೇನೆ - ಶಿವಮೂರ್ತಿ, ತೆಂಕಲಕೊಪ್ಪಲು ಗ್ರಾಮ

ಲಭ್ಯ ಕಚ್ಚಾವಸ್ತು ಆಧಾರಿತ ಉದ್ಯಮಕ್ಕೆ ಆದ್ಯತೆ ನೀಡಿ

ಸ್ಥಳೀಯ ಕಚ್ಚಾ ಪದಾರ್ಥಗಳಿಗೆ ಅನುಕೂಲವಾಗುವ ರೀತಿ ಸಣ್ಣ ಕೈಗಾರಿಕೆ ಆರಂಭಿಸಲು ಪ್ರೋತ್ಸಾಹಿಸಬೇಕು. ನಿವೇಶನಗಳು ಅನ್ಯ ಉದ್ಯಮಕ್ಕೆ ಬಳಸದಂತೆ ಕಾಯ್ದೆ ಬಿಗಿಗೊಳಿಸಬೇಕು - ಮೂರ್ತಿ, ಮಾಲೀಕ ಮಾರುತಿ ಇಂಡಸ್ಟ್ರೀಸ್‌.

ಬೇಡಿಕೆಯಂತೆ ಗ್ರಾನೈಟ್‌ ಪೂರೈಕೆ

ತಿ.ನರಸೀಪುರದ ನಂಜನಗೂಡು ರಸ್ತೆಯಲ್ಲಿ ಐದು ವರ್ಷಗಳಿಂದ ಗ್ರಾನೈಟ್ ಉದ್ಯಮ ನಡೆಸುತ್ತಿದ್ದೇನೆ. ದೊಡ್ಡ ದೊಡ್ಡ ಗ್ರಾನೈಟ್‌ಗಳನ್ನು ನಾವು ಬೇರೆಡೆಯಿಂದ ಖರೀದಿಸಿ ತಂದು ಗ್ರಾಹಕರಿಗೆ ಅಗತ್ಯವಿರುವ ಪ್ರಮಾಣಗಳಲ್ಲಿ ಪೂರೈಸುತ್ತಿದ್ದೇವೆ.‌ ಸುಮಾರು 30 ಮಂದಿಗೆ ಉದ್ಯೋಗ ದೊರಕಿದೆ - ಚಂದ್ರಶೇಖರ, ತೇಜ ಗ್ರಾನೈಟ್ಸ್ ಉದ್ಯಮಿ, ತಿ.ನರಸೀಪುರ

ಗುಣಮಟ್ಟಕ್ಕೆ ಆದ್ಯತೆ

50 ವರ್ಷಕ್ಕಿಂತ ಹೆಚ್ಚು ವರ್ಷದಿಂದ ಯುಸಿ ಕೆಪಾಸಿಟರ್‌ಗೆ ಸರ್ಕಾರದಿಂದ ಬಹಳ ಬೇಡಿಕೆಯಿದೆ - ಸಿ.ಚನ್ನಯ್ಯ, ಶ್ರೀ ಚಾಮುಂಡೇಶ್ವರಿ ಎಲೆಕ್ಟ್ರಾನಿಕ್ಸ್‌ ಮಾಲೀಕ

ಬಿಡಿಭಾಗ ಉತ್ಪಾದಿಸುವೆವು

18 ಬಗೆಯ ಬೇರಿಂಗ್ ಕ್ಯಾಪ್, ಫುಲ್ಲಿ, ಫ್ಯಾಂಚಿಸ್, ಜೊಯಿಂಟ್ಸ್‌ ಹೀಗೆ 50ಕ್ಕೂ ಹೆಚ್ಚು ಬಿಡಿ ಭಾಗಗಳನ್ನು  ಸಿದ್ಧಪಡಿಸಿ ಹಲವು ಪ್ರತಿಷ್ಠಿತ ಆಟೊಮೊಬೈಲ್ ಕಂಪನಿಗಳಿಗೆ ನೀಡುತ್ತೇವೆ - ರಾಹುಲ್ ರಾಜು, ಮಾಲೀಕರ ತ್ರಿಶೂಲ್ ಎಂಜಿನಿಯರಿಂಗ್ ಮೈಸೂರು

ನಿರ್ವಹಣೆ: ಪ್ರದೀಪ ಕುಂದಣಗಾರ

ಪೂರಕ ಮಾಹಿತಿ: ಪ್ರಕಾಶ್, ಎಸ್‌.ಎಚ್‌.ಸಚ್ಚಿತ್, ಪಂಡಿತ್ ನಾಟೀಕರ್, ಎಂ.ಮಹದೇವ್

ಮೈಸೂರು ಕೆಆರ್‌ಎಸ್‌ ರಸ್ತೆಯಲ್ಲಿ ಆಟೊಮೊಬೈಲ್ ಬಿಡಿಭಾಗಗಳ ಉತ್ಪಾದನೆಯಲ್ಲಿ ತೊಡಗಿರುವ ಮಹಿಳಾ ಕಾರ್ಮಿಕರು   ಪ್ರಜಾವಾಣಿ ಚಿತ್ರ/ಅನೂಪ್ ರಾಘ.
ಅಡಕನಹಳ್ಳಿಯಲ್ಲಿರುವ ದೇಸಿರಿ ಘಟಕದಲ್ಲಿ ಡತ್ತುಗಳನ್ನು ಬಳಸಿ ಗಾಣದ ಎಣ್ಣೆ ತೆಗೆಯುತ್ತಿರುವುದು
ಸ್ಥಳೀಯವಾಗಿ ಲಭ್ಯವಿರುವ ಕಚ್ಚಾ ಪದಾರ್ಥ ಮರ ಬಳಸಿ ಸಿದ್ಧಪಡಿಸಿ ಮಾರಾಟ ಮಳಿಗೆಯಲ್ಲಿ ಜೋಡಿಸಿರುವ ಎಚ್.ಎಂ.ಎಸ್. ಮೂರ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.