ADVERTISEMENT

ಸಿದ್ದರಾಮಯ್ಯ ವಿರುದ್ಧ EDಗೆ ದೂರು ನೀಡಿದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ‌ ಕೃಷ್ಣ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 4:52 IST
Last Updated 29 ಸೆಪ್ಟೆಂಬರ್ 2024, 4:52 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಕೋರಿ ಇಲ್ಲಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ‌ ಕೃಷ್ಣ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಶನಿವಾರ ದೂರು ಸಲ್ಲಿಸಿದ್ದಾರೆ.

ನಿರ್ದೇಶನಾಲಯದ ಬೆಂಗಳೂರು ಕಚೇರಿ ಜಂಟಿ ನಿರ್ದೇಶಕರಿಗೆ ಇ-ಮೇಲ್ ಹಾಗೂ ಅಂಚೆ ಮೂಲಕ 16 ಪುಟಗಳ ದೂರು ಸಲ್ಲಿಕೆ ಆಗಿದೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಪಡಿಸಿಕೊಂಡು ಪತ್ನಿ ಬಿ.ಎಂ. ಪಾರ್ವತಿ ಹೆಸರಿ
‌ನಲ್ಲಿ ಮುಡಾದಿಂದ 14 ನಿವೇಶನಗಳನ್ನು ಅಕ್ರಮವಾಗಿ ಪಡೆದಿದ್ದಾರೆ. ಈ ನಿವೇಶನಗಳ ಮೂಲಕ ಅವರು ₹55.80 ಕೋಟಿ ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿದ್ದಾರೆ. ಮುಡಾದಲ್ಲಿ ಇಂತಹ ಸಾಕಷ್ಟು ಅಕ್ರಮಗಳು ನಡೆದಿವೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು' ಎಂದು ದೂರಿನಲ್ಲಿ ಕೋರಿದ್ದಾರೆ.

ADVERTISEMENT

ಕೊಟ್ಟಾಕ್ಷಣ ತನಿಖೆ ಆಗುತ್ತದೆಯೇ?–ಸಿದ್ದರಾಮಯ್ಯ:

ಸ್ನೇಹಮಯಿ ಕೃಷ್ಣ ತಮ್ಮ ವಿರುದ್ಧ ಇ.ಡಿ.ಗೆ ದೂರು ಸಲ್ಲಿಸಿರುವ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ದೂರು ನೀಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ಯಾರೋ ಇ.ಡಿ.ಗೆ ದೂರು ಕೊಟ್ಟಾಕ್ಷಣವೇ ತನಿಖೆ ಆಗುತ್ತದೆಯೇ?’ ಎಂದು ಕೇಳಿದರು.

‘ನನ್ನ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ಮಾಡಿದ್ದಾರೆ. ಆ ವಿಷಯದಲ್ಲಿ ಹಸ್ತಕ್ಷೇಪ ಮಾಡುವು
ದಿಲ್ಲ. ಹೆಚ್ಚು ಪ್ರತಿಕ್ರಿಯೆಯನ್ನೂ ಕೊಡುವುದಿಲ್ಲ. ಸ್ನೇಹಮಯಿ ಕೃಷ್ಣ ಯಾರೆಂದು ಗೊತ್ತಿಲ್ಲ; ಆತನ ವಿರುದ್ಧ ದೂರುಗಳು ದಾಖಲಾಗಿರುವುದೂ ತಿಳಿದಿಲ್ಲ’ ಎಂದರು.

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್‌ ದಾಖಲಾಗಿರುವುದರಿಂದ ಅವರು ಯಾವುದೇ ಸರ್ಕಾರಿ ಆದೇಶಗಳಿಗೆ, ಪತ್ರಗಳಿಗೆ ಸಹಿ ಹಾಕಬಾರದು. ದಸರಾ ಉದ್ವಾಟನೆಯಲ್ಲಿ ಪಾಲ್ಗೊಳ್ಳಬಾರದು
ಪ್ರಲ್ಹಾದ ಜೋಶಿ, ಕೇಂದ್ರ ಸಚಿವ
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಗಮನಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಮುಡಾ ಪ್ರಕರಣ ಸಣ್ಣದು
ಡಾ.ಶರಣಪ್ರಕಾಶ್‌ ಪಾಟೀಲ, ಉನ್ನತ ವೈದ್ಯಕೀಯ ಶಿಕ್ಷಣ ಖಾತೆ ಸಚಿವ
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂಬ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸಲಹೆಯನ್ನು ಗೌರವಿಸುತ್ತೇವೆ. ಆದರೆ, ಕೇಂದ್ರ ಸಚಿವರ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರ ರಾಜೀನಾಮೆಯನ್ನೂ ಕೇಳಲಿ ಎ.ಎಸ್.ಪೊನ್ನಣ್ಣ, ಮುಖ್ಯಮಂತ್ರಿ ಕಾನೂನು ಸಲಹೆಗಾರ
ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಆರೋಪ ಕೇಳಿಬಂದಾಗ, ನೈತಿಕತೆಯ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದರು. ಈಗ ಅವರ ನೈತಿಕತೆ ಎಲ್ಲಿ ಹೋಗಿದೆ
ಅಭಯ ಪಾಟೀಲ, ಶಾಸಕ
ಸ್ನೇಹಮಯಿ ಕೃಷ್ಣ ವಿರುದ್ಧ ಎಫ್‌ಐಆರ್‌
ನಂಜನಗೂಡು (ಮೈಸೂರು ಜಿಲ್ಲೆ): ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಕೊಲೆ ಬೆದರಿಕೆ ಒಡ್ಡಿದ ಆರೋಪದ ಮೇಲೆ ಇಲ್ಲಿನ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಮಹಿಳೆಯು ಕೃಷ್ಣ ಸೇರಿದಂತೆ ನಾಲ್ವರ ವಿರುದ್ಧ ದೂರು ನೀಡಿದ್ದಾರೆ. ‘ಪತಿ 2020ರಲ್ಲಿ ನಿಧನರಾದರು. ಮಾವ, ಅತ್ತೆ ಹಾಗೂ ಮೈದುನ ಮನೆಕಟ್ಟಲು ನನ್ನಿಂದ ₹ 80 ಲಕ್ಷ ಮೌಲ್ಯದ ಚಿನ್ನವನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ₹ 35 ಲಕ್ಷ ಸಾಲ ಪಡೆದಿದ್ದರು. ನಂತರ, ಆಭರಣಗಳನ್ನು ಅತ್ತೆ ಹೆಸರಿಗೆ ಮಾಡಿಕೊಂಡು ಬೆದರಿಕೆ ಹಾಕಿದ್ದರು. ಈ ಬಗ್ಗೆ 2021ರಲ್ಲಿ ದೂರು ಸಲ್ಲಿಸಿದ್ದೆ. ಆ ಪ್ರಕರಣದ ವಿಚಾರಣೆಗೆ ಹಾಜರಾಗಿ ನ್ಯಾಯಾಲಯದಿಂದ ವಾಪಸಾಗುವಾಗ, ಜುಲೈ 18ರಂದು ಮೈದುನ ಡಾಬಾ ಜಯಕುಮಾರ್‌ ಹಾಗೂ ಕೃಷ್ಣ ಜೀವ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಎಸ್‌ಪಿ ಕಚೇರಿಗೆ ದೂರು ನೀಡಿದ್ದೆ’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸ್‌ ವರಿಷ್ಠಾಧಿಕಾರಿಗೆ ನೀಡಿದ್ದ ದೂರು ಆಧರಿಸಿ, ನಂಜನಗೂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.