ADVERTISEMENT

ಸರ್ವಂ ಸಾಮಾಜಿಕ ಮಾಧ್ಯಮಮಯಂ

ಪವನ ಎಚ್.ಎಸ್
Published 29 ಜೂನ್ 2019, 9:31 IST
Last Updated 29 ಜೂನ್ 2019, 9:31 IST
ಸಾಮಾಜಿಕ ಜಾಲತಾಣಗಳ ಲೋಗೊ
ಸಾಮಾಜಿಕ ಜಾಲತಾಣಗಳ ಲೋಗೊ   

ಯಾವುದೇ ವಿಷಯವನ್ನು ಒಬ್ಬರಿಂದ ಮತ್ತೊಬ್ಬರಿಗೆ ವ್ಯವಸ್ಥಿತವಾಗಿ ತಲುಪಿಸುವುದೇ ಮಾಧ್ಯಮ. ಈ ಹಿಂದೆ ಜನಪದ ಕಥೆಗಳು, ಗಮಕಗಳು, ಹರಿಕಥೆ, ಯಕ್ಷಗಾನ, ಬಯಲು ನಾಟಕ ಮುಂತಾದವುಗಳು ಸಾಮಾಜಿಕ ಮಾಧ್ಯಮಗಳಾಗಿದ್ದವು.

ರಾಜರ ಆಳ್ವಿಕೆ ಕಾಲದಲ್ಲಿ ಪ್ರಾಣಿ, ಪಕ್ಷಿಗಳನ್ನು ಮಾಹಿತಿ ರವಾನೆ ಮಾಡಲು ಬಳಸಲಾಗುತ್ತಿತ್ತು ಎನ್ನುವುದು ಇತಿಹಾಸ. ಸಾರಿಗೆ ಕ್ರಾಂತಿಯ ಬಳಿಕ ಸಂದೇಶ ರವಾನೆ ಹೊಸ ರೂಪ ತಳೆಯಿತು. ಅದರಲ್ಲೂ ಬ್ರಿಟಿಷರು ಭಾರತಕ್ಕೆ ಪದಾರ್ಪಣೆ ಮಾಡಿ ಅಂಚೆ ಎಂಬ ವ್ಯವಸ್ಥಿತ ಜಾಲವನ್ನು ರಚಿಸಿದರು. ಆ ಮೂಲಕ ಪತ್ರಗಳು ಮಾಧ್ಯಮಗಳಾದವು. ಪತ್ರಿಕೆಗಳೂ ಒಂದು ಊರಿನ ಸುದ್ದಿಯನ್ನು ಇನ್ನೊಂದು ಊರಿಗೆ ತಲುಪಿಸತೊಡಗಿದವು. ಈ ನಡುವೆ ಟೆಲಿಗ್ರಾಫ್‌ ಎನ್ನುವ ಯಂತ್ರ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು ಆರಂಭಿಸಿತ್ತು.

ನಂತರ ಸ್ಥಿರ ದೂರವಾಣಿಗಳು ಪ್ರವರ್ಧಮಾನಕ್ಕೆ ಬಂದವು. ಈ ವೇಳೆಗಾಗಲೇ ಆಕಾಶವಾಣಿ, ದೂರವಾಣಿಗಳು ಮನೆಗಳಲ್ಲಿಯೂ ರಿಂಗಣಿಸುತ್ತಿದ್ದವು. ಪೇಜರ್‌, ಇ–ಮೇಲ್‌ಗಳೂ ಹಳತಾದವು. ನಂತರ ನಡೆದದ್ದೇ ಚಮತ್ಕಾರ. ಮೊಬೈಲ್‌ ಎನ್ನುವ ಮಾಯಾವಿ ಆವಿಷ್ಕಾರವಾದ ನಂತರ ಮಾಹಿತಿ ರವಾನೆ ಚಿಟಿಕೆ ಹೊಡೆದಷ್ಟು ಸುಲಭವಾಗಿದೆ.

ADVERTISEMENT

ಈಗಿನ ಸ್ಮಾರ್ಟ್‌ಫೋನ್ ಯುಗದಲ್ಲಂತೂ ಸಾಮಾಜಿಕ ಮಾಧ್ಯಮಗಳು ಉನ್ನತಿಯ ಶಿಖರದಲ್ಲಿವೆ. ಈ ನಿಟ್ಟಿನಲ್ಲಿ ವಿವಿಧ ಕಂಪನಿಗಳು ತಾ ಮುಂದು ನಾ ಮುಂದು ಎಂಬಂತೆ ಅಗ್ಗದ ಬೆಲೆಗೆ ವಿವಿಧ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಜತೆಗೆ ಅಗ್ಗದ ಬೆಲೆಗೆ ಇಂಟರ್‌ನೆಟ್ ಕೂಡ ಸಿಗುವುದರಿಂದ ಸಾಮಾಜಿಕ ಮಾಧ್ಯಮಕ್ಕೆ ಹೊಸ ಆಯಾಮ ಸಿಕ್ಕಂತಾಗಿದೆ. ಹೊಸ ಅಪ್ಲಿಕೇಷನ್‌ಗಳು ತಣಿಸಲಾರದಷ್ಟು ಕುತೂಹಲ, ಆಸಕ್ತಿಯನ್ನು ಮೂಡಿಸುತ್ತಲೇ ಇದ್ದು, ಟಿ.ವಿ, ರೇಡಿಯೊ, ಪತ್ರಿಕೆಗಳೆಲ್ಲವನ್ನೂ ಸ್ಮಾರ್ಟ್‌ ಫೋನ್‌ನಲ್ಲೇ ಕಂಡು, ಕೇಳಿ,
ಓದುತ್ತಿದ್ದಾರೆ.

ಯುವಜನರ ನೆಚ್ಚಿನ ಸಾಮಾಜಿಕ ಜಾಲತಾಣ:ಸಾಮೂಹಿಕವಾಗಿ ಒಂದು ವಿಷಯದ ಕುರಿತು ಚರ್ಚಿಸುವ, ಅದಕ್ಕೆ ಪ್ರತಿಕ್ರಿಯಿಸಲು ಅವಕಾಶವಿರುವ ಪ್ರತಿಯೊಂದು ತಾಣವೂ ಸಾಮಾಜಿಕ ತಾಣವಾಗಿದೆ. ಸಾಮಾಜಿಕ ತಾಣ ಅಂದ ಕೂಡಲೇ ನೆನಪಿಗೆ ಬರುವುದು ಫೇಸ್‌ಬುಕ್, ವಾಟ್ಸ್‌ಆ್ಯಪ್, ಟ್ವಿಟರ್, ಯೂಟ್ಯೂಬ್‌ ಇತ್ಯಾದಿ. ಅವುಗಳ ಬಳಕೆಯಲ್ಲಿ ಸಿಂಹಪಾಲು ಯುವಪೀಳಿಗೆಯದ್ದೇ ಆಗಿದೆ.

ಫೇಸ್‌ಬುಕ್ ಹಾಗೂ ಟ್ವಿಟರ್‌ ದಿನದಿಂದ ದಿನಕ್ಕೆ ಹೆಚ್ಚಾಗಿ ಬೆಳೆಯುತ್ತಿರುವ, ಎಲ್ಲರಿಗೂ ಚಿರಪರಿಚಿತವಾಗಿರುವ ಜಾಲತಾಣಗಳು. ನಮ್ಮಲ್ಲಿರುವ ಪ್ರಶ್ನೆ, ವಿಷಯ, ವಿಸ್ಮಯ, ಜನರಿಗೆ ತಿಳಿಯಪಡಿಸಲು, ಮನರಂಜನೆ ಹೊಂದುವ, ಹಂಚುವ, ಜಗತ್ತಿನ ಆಗು–ಹೋಗುಗಳನ್ನು ಮನುಕುಲಕ್ಕೆ ತಲುಪಿಸುವ ಉತ್ತಮ ಮಾಧ್ಯಮಗಳಾಗಿವೆ.

ಕ್ಷಣಮಾತ್ರದಲ್ಲಿ ಸಂದೇಶಗಳನ್ನು ಕಳುಹಿಸುವಲ್ಲಿ ಮೊದಲ ಸ್ಥಾನ ಪಡೆದಿರುವುದು ವಾಟ್ಸ್‌ಆ್ಯಪ್. ಸಂದೇಶಗಳನ್ನು ಬರೆಯಲು, ಕಳುಹಿಸಲು ಸರಳವಾಗಿದ್ದರಿಂದ ಹೆಚ್ಚು ಜನ ಇದರತ್ತ ಒಲವು ಹೊಂದಿದ್ದಾರೆ. ಇದನ್ನು ಬಳಸಲು ಅಗಾಧ ಜ್ಞಾನದ ಅವಶ್ಯಕತೆ ಇಲ್ಲದಿದ್ದರಿಂದ ಫೇಸ್‌ಬುಕ್ ಬಳಸದವರೂ ವಾಟ್ಸ್‌ಆ್ಯಪ್ ಬಳಸುತ್ತಾರೆ. ಟೆಲಿಗ್ರಾಫ್‌, ಇನ್‌ಸ್ಟಾಗ್ರಾಮ್‌ ಕೂಡ ಪ್ರಚಲಿತದಲ್ಲಿದ್ದು, ಸಂದೇಶ ಕಳುಹಿಸಲು ಅನೇಕರು ಇವುಗಳನ್ನು ಆಯ್ಕೆ
ಮಾಡಿಕೊಂಡಿದ್ದಾರೆ.

ಹೀಗೆ, ದಿನದಿಂದ ದಿನಕ್ಕೆ ಆವಿಷ್ಕಾರಗಳು ಹೆಚ್ಚಾಗುತ್ತಿದ್ದು, ಪತ್ರ ಬರೆಯುತ್ತಿದ್ದ ಕೈಗಳು ಇಂದು ಟೈಪ್ ಮಾಡುತ್ತಿವೆ.

ಇಷ್ಟೆಲ್ಲ ಬೆಳವಣಿಗೆಗಳ ನಡುವೆ ಸದ್ದಿಲ್ಲದೇ ಸಾಮಾಜಿಕ ಮಾಧ್ಯಮದ ಸಂಪೂರ್ಣ ಲಾಭವನ್ನು ಪಡೆಯುತ್ತಿರುವುದು ವಾಣಿಜ್ಯ ಕ್ಷೇತ್ರ. ಇತ್ತೀಚಿನ ದಿನಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳು, ಬೃಹತ್‌ ಹೂಡಿಕೆದಾರರು ಮಾತ್ರವಲ್ಲದೇ ಸಣ್ಣ–ಪುಟ್ಟ ಉದ್ದಿಮೆಗಳು ಸಹ ತಮ್ಮ ಮಾರುಕಟ್ಟೆಯನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಸೃಷ್ಟಿಸಿಕೊಳ್ಳುತ್ತಿವೆ. ಮಾತ್ರವಲ್ಲ, ಗುಡಿಕೈಗಾರಿಕೆಗಳು, ಗೃಹ ಉತ್ಪನ್ನಗಳಿಗೂ ಈ ಸಾಮಾಜಿಕ ಮಾಧ್ಯಮಗಳು ಗ್ರಾಹಕರಿಗೆ ಮತ್ತು ತಯಾರಕರಿಗೆ ಕೊಂಡಿಯಾಗಿವೆ.

ಯಾವುದೇ ಒಂದು ಸುದ್ದಿಯನ್ನು ಓದಲು ತೆಗೆದರೆ ನೂರಾರು ಬಗ್‌ಗಳು, ಲಿಂಕ್‌ಗಳು ಇಣುಕಿ ನೋಡುತ್ತವೆ. ಜಾಹೀರಾತುಗಳು ಆವರಿಸಿಕೊಳ್ಳುತ್ತವೆ. ಕಂಪನಿಗಳು ಹೊಸ ಹೊಸ ಅಪ್ಲಿಕೇಶನ್‌ಗಳಿಗಾಗಿ ಕೋಟಿ ಕೋಟಿ ಬಂಡವಾಳವನ್ನು ಸುರಿಯುತ್ತಿವೆ. ನಾವು ಆ ಜಾಹೀರಾತುಗಳನ್ನು ಮನಸ್ಸಿನಲ್ಲೇ ಬೈದುಕೊಂಡರೂ ಸಾಮಾಜಿಕ ಜಾಲತಾಣಗಳಿಗೆ ಭೇಟಿ ನೀಡುವುದನ್ನು ಮಾತ್ರ ಬಿಡುತ್ತಿಲ್ಲ.

ನಾಳೆ ಸಾಮಾಜಿಕ ಮಾಧ್ಯಮ ದಿನ
ಜೂನ್‌ 30ರಂದು ಸಾಮಾಜಿಕ ಮಾಧ್ಯಮ ದಿನವನ್ನು (ಎಸ್‌ಎಂ ಡೇ) ವಿಶ್ವದಾದ್ಯಂತ ಆಚರಿಸಲಾಗುತ್ತಿದ್ದು, ಮಾಧ್ಯಮ ಮತ್ತು ಮನರಂಜನಾ ಕಂಪನಿಗಳು ಅದ್ಧೂರಿಯಾಗಿ ಈ ದಿನವನ್ನು ಆಚರಿಸುತ್ತವೆ. ಮೇಶೆಬಲ್‌ ಎಂಬ ಕಂಪನಿ 2010ರಲ್ಲಿ ಮೊದಲ ಬಾರಿಗೆ ಆಚರಿಸಿತು.

ಇತ್ತೀಚಿನ ವರ್ಷಗಳಲ್ಲಿ SMDay (ಎಸ್‌ಎಂಡೇ) ಎಂಬ ಹ್ಯಾಶ್‌ಟ್ಯಾಗ್‌ ಅನ್ನು ಬಳಸಿಕೊಳ್ಳುವ ಮೂಲಕ ಪ್ರಚಾರ ಮಾಡಲಾಗುತ್ತಿದ್ದು, ಜಾಗತಿಕ ಮಟ್ಟದಲ್ಲಿ ಭಾರಿ ಹೆಸರು ಮಾಡುತ್ತಿದೆ.

ಮಾಧ್ಯಮ ಕ್ಷೇತ್ರದಲ್ಲಿರುವ ಅವಕಾಶಗಳು, ಜವಾಬ್ದಾರಿ, ಬಳಸುವ ರೀತಿಯನ್ನು ‘ಸಾಮಾಜಿಕ ಮಾಧ್ಯಮ ದಿನ’ ಆಯೋಜಿಸುವ ಮೂಲಕ ಅರಿವು ಮೂಡಿಸಲಾಗುತ್ತಿದೆ. ಇದಕ್ಕಾಗಿ ಅನೇಕ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಉಪನ್ಯಾಸ, ಕಾರ್ಯಾಗಾರಗಳನ್ನು ಹಮ್ಮಿಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.