ಮೈಸೂರು: ‘ಹೊಸ ಕಾಲಕ್ಕೆ ಕನ್ನಡವನ್ನು ಅಣಿಗೊಳಿಸಲು ಸಾಮಾಜಿಕ ಜಾಲತಾಣಗಳನ್ನು ಭಾಷಾ ಸಾಂಸ್ಕೃತಿಕ ತಾಣವಾಗಿ ಮಾಡಬೇಕಿದೆ. ಅದಕ್ಕಾಗಿ ಈ ತಂತ್ರಜ್ಞಾನ ಯುಗದಲ್ಲಿ ಸ್ಪಷ್ಟ, ದೃಢ, ನಿಖರವಾದ ಹಾಗೂ ಕನ್ನಡದ್ದೇ ಆದ ತಂತ್ರಾಂಶ ಬೇಕಿದೆ’ ಎಂದು ಲೇಖಕ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಪ್ರತಿಪಾದಿಸಿದರು.
ನಗರದ ಕ್ರಾಫರ್ಡ್ ಭವನದಲ್ಲಿ ಮೈಸೂರು ವಿಶ್ವವಿದ್ಯಾಲಯವು ಗುರುವಾರ ಆಯೋಜಿಸಿದ್ದ 69ನೇ ಕರ್ನಾಟಕ ರಾಜ್ಯೋತ್ಸವ ಉದ್ಘಾಟಿಸಿ, ‘ನಮ್ಮ ಕನ್ನಡವನ್ನು ವಿಶ್ವದರ್ಜೆಗೇರಿಸುವ ಸಾಧ್ಯತೆಗಳು’ ಕುರಿತು ಉಪನ್ಯಾಸ ನೀಡಿದರು.
‘ಬೆಂಗಳೂರಿನಲ್ಲಿ ಅನೇಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳು, ತಂತ್ರಜ್ಞರಿದ್ದು, ಸರ್ಕಾರವು ಅವರಿಗೆ ಜವಾಬ್ದಾರಿ ನೀಡಬೇಕು. ಎಲ್ಲ ಮನಸ್ಸುಗಳು ಸುಲಭವಾಗಿ ಬಳಸುವ ಕನ್ನಡ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಬೇಕು. ಅದು ಗ್ರಾಮ ಪಂಚಾಯಿತಿ ಮಟ್ಟದಿಂದ ವಿಧಾನಸೌಧದವರೆಗೂ ಬಳಕೆಯಾಗಬೇಕಿದೆ’ ಎಂದು ಸಲಹೆ ನೀಡಿದರು.
‘ದೇಶದ 44 ಕೋಟಿ ಮಂದಿ ಫೇಸ್‌ಬುಕ್, 5 ಕೋಟಿ ಮಂದಿ ಇನ್‌ಸ್ಟಾಗ್ರಾಮ್, 47 ಕೋಟಿ ಗ್ರಾಹಕರು ಯೂಟ್ಯೂಬ್, 53 ಕೋಟಿ ವಾಟ್ಸ್‌ಆ್ಯಪ್ ಬಳಕೆದಾರರಿದ್ದು, ಎಲ್ಲ ಕಡೆ ನಮ್ಮ ಅಭಿವ್ಯಕ್ತಿ ಪ್ರಕಟವಾಗಬೇಕು. ಕನ್ನಡವನ್ನು ಕೊರಗಿನ ದನಿಯಲ್ಲಿ ಮಾತನಾಡಬಾರದು. ನಮಗೆ ಭವ್ಯ ಪರಂಪರೆಯಿದ್ದು, ಎಷ್ಟೊಂದು ಘಟ್ಟಗಳಲ್ಲಿ ಕನ್ನಡ ನದಿ ಹರಿದಿದೆ. ಎಲ್ಲ ಕಾಲದಲ್ಲೂ ಸವಾಲುಗಳಿದ್ದವು. ನಾವು ತೂಕಡಿಸದೆ ಜಾಗೃತರಾಗಿ ಕನ್ನಡ ಭಾಷೆಯನ್ನು ಕಾಯಬೇಕು. ಹಲವು ರೂಪದ ಜಾಗತಿಕ ದಾಳಿಗಳನ್ನು ಎದುರಿಸಬೇಕು’ ಎಂದು ಕರೆ ನೀಡಿದರು.
‘ಅರಿವಿನ ದಿಗಂತವನ್ನು ವಿಸ್ತರಿದ ವಿಶ್ವವಿದ್ಯಾಲಯದ ವೇದಿಕೆಯಲ್ಲಿರುವುದು ಭಾವಪೂರ್ಣ ಕ್ಷಣವಾಗಿದೆ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ನನ್ನ ದತ್ತಿಗೆ ಕುಲಪತಿ ಸಮ್ಮತಿಸಬೇಕು’ ಎಂದು ಕೋರಿದರು.
ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವೆ ವಿ.ಆರ್.ಶೈಲಜಾ ಹಾಜರಿದ್ದರು.
ಕನ್ನಡ ಶಾಲೆಗಳನ್ನು ಉಳಿಸಬೇಕು. ಕಲೆ ಶಿಲ್ಪ ಸಾಹಿತ್ಯ ಸೇರಿದಂತೆ ವಿಶ್ವದ ಎಲ್ಲ ಕ್ಷೇತ್ರಗಳ ವಿದ್ಯಮಾನ ಹಳ್ಳಿಯ ಮಗುವಿಗೆ ಪರಿಚಯವಾಗಬೇಕು-ನಾಗತಿಹಳ್ಳಿ ಚಂದ್ರಶೇಖರ ಲೇಖಕ
‘ಹೋಳಾದ ಆಂಧ್ರ: ಎಚ್ಚರಿಕೆ ಗಂಟೆ’
‘ಭಾಷಾವಾರು ಪ್ರಾಂತ್ಯ ಸೂತ್ರದಡಿ ರಚನೆಯಾದ ದೇಶದ ಮೊದಲ ರಾಜ್ಯವೆಂಬ ಹೆಗ್ಗಳಿಕೆಯ ಆಂಧ್ರಪ್ರದೇಶ ಎರಡು ಹೋಳಾಗಿದೆ. ಈ ಮಾದರಿಯ ಆಘಾತ ಕನ್ನಡಿಗರಿಗೆ ಎಚ್ಚರಿಕೆ ಗಂಟೆಯಾಗಲಿ’ ಎಂದು ನಾಗತಿಹಳ್ಳಿ ಹೇಳಿದರು.
‘ಮನೆಯಲ್ಲಿ ಕನ್ನಡ ಪತ್ರಿಕೆಗಳನ್ನು ತರಿಸಿ ನಾಟಕ ಚಲನಚಿತ್ರ ಸೇರಿದಂತೆ ಕನ್ನಡಕ್ಕೆ ಸಂಬಂಧಿಸಿದ ಎಲ್ಲವನ್ನೂ ನೋಡಬೇಕು. ಪಂಪ ರನ್ನರ ಹಳೆಗನ್ನಡವನ್ನು ಉಪೇಕ್ಷಿಸದೆ ಅದನ್ನು ಸವಿಯುವ ಜ್ಞಾನ ಬೆಳೆಸಿಕೊಳ್ಳಬೇಕು. ಎಲ್ಲರೂ ಒಂದೆನ್ನುವ ಕನ್ನಡ ಭಾವ ಮೂಡಬೇಕು’ ಎಂದರು.
‘ಪ್ರಜಾವಾಣಿ’ ವರದಿ ಪ್ರಸ್ತಾ
ಕ್ರಾಫರ್ಡ್ ಭವನದಲ್ಲಿ 1973ರ ನ.1ರಂದು ನಡೆದ ‘ಕರ್ನಾಟಕ ನಾಮಕರಣೋತ್ಸವ’ ಕುರಿತು ‘ಪ್ರಜಾವಾಣಿ’ಯಲ್ಲಿ ನ.1ರಂದು ಪ್ರಕಟವಾಗಿದ್ದ ‘ಮೈಸೂರಿನಲ್ಲೇ ಹೆಸರಾಯಿತು ಕರ್ನಾಟಕ’ ವಿಶೇಷ ವರದಿ ಕಾರ್ಯಕ್ರಮದಲ್ಲಿ ಪ್ರಸ್ತಾಪಗೊಂಡಿತು.
‘50 ವರ್ಷದ ನಂತರ ಕ್ರಾಫರ್ಡ್ ಭವನದಲ್ಲಿ ಮತ್ತೆ ರಾಜ್ಯೋತ್ಸವವನ್ನು ಕುಲಪತಿ ಪ್ರೊ. ಎನ್.ಕೆ.ಲೋಕನಾಥ್ ಆಯೋಜಿಸಿದ್ದಾರೆ’ ಎಂದು ಸಹಾಯಕ ಪ್ರಾಧ್ಯಾಪಕ ಲೋಹಿತ್ ಶ್ಲಾಘಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.