ADVERTISEMENT

ಮೈಸೂರು | ‘ವಿವೇಕ ಜಾಗೃತಿಯಿಂದ ಸಮಾಜ ಪ್ರಗತಿ’

ನೈತಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ವಸತಿ ಶಿಬಿರ ಉದ್ಘಾಟಸಿದ ಸ್ವಾಮಿ ಮುಕ್ತಿದಾನಂದ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 16:37 IST
Last Updated 15 ಏಪ್ರಿಲ್ 2024, 16:37 IST
ಮೈಸೂರಿನ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನವೀನ್‌ ನಾಗಪ್ಪ ಮಾತನಾಡಿದರು. ಸ್ವಾಮಿ ಮುಕ್ತಿದಾನಂದ, ಸ್ವಾಮಿ ಮಹಾಮೇಧಾನಂದ, ಪ್ರಭಂಜನ ಭಾಗವಹಿಸಿದ್ದರು
ಮೈಸೂರಿನ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನವೀನ್‌ ನಾಗಪ್ಪ ಮಾತನಾಡಿದರು. ಸ್ವಾಮಿ ಮುಕ್ತಿದಾನಂದ, ಸ್ವಾಮಿ ಮಹಾಮೇಧಾನಂದ, ಪ್ರಭಂಜನ ಭಾಗವಹಿಸಿದ್ದರು   

ಮೈಸೂರು: ‘ಜೀವನಕ್ಕೆ ಯಾವುದು ಉತ್ತಮ, ಯಾವುದು ಅಲ್ಲ ಎಂಬುದನ್ನು ಅರಿಯುವುದೇ ವಿವೇಕ. ವಿವೇಕ ಜಾಗೃತಿ ಇಡೀ ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯುತ್ತದೆ’ ಎಂದು ಸ್ವಾಮಿ ಮುಕ್ತಿದಾನಂದ ತಿಳಿಸಿದರು.

ನಗರದ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯಲ್ಲಿ ವಿವೇಕ ವಿದ್ಯಾ ವಾಹಿನಿ ಟ್ರಸ್ಟ್‌ನಿಂದ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಭಾನುವಾರ ಆರಂಭಗೊಂಡ ಏಳು ದಿನಗಳ ನೈತಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ವಸತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ಎಲ್ಲರಲ್ಲೂ ವಿವೇಕ ಜಾಗೃತಿ ಮೂಡಿಸುವ ಬಗ್ಗೆ ವಿವೇಕಾನಂದರು ಆಸಕ್ತರಾಗಿದ್ದರು. ಭೇದ ಮನಸ್ಥಿತಿ ದೂರವಾಗಿ, ಸ್ವಾರ್ಥ ಮನೋಭಾವ ಕಳೆದುಕೊಂಡು ಸಾಮಾಜಿಕ ಕಳಕಳಿಯನ್ನು ಹೊಂದುವಂತೆ ಪ್ರೇರೇಪಿಸಿದ್ದರು’ ಎಂದರು.

ADVERTISEMENT

‘ಮಹನೀಯರೆಲ್ಲರೂ ನಮ್ಮೊಳಗೆ ದೇವರಿದ್ದಾನೆ ಎನ್ನುತ್ತಾರೆ‌. ಆದರೆ, ಅದನ್ನು ಕಾಣುವ ಆಕಾಂಕ್ಷೆ ನಮ್ಮಲ್ಲಿಲ್ಲದಿದ್ದರೆ ಆತ ದೊರಕುವುದಿಲ್ಲ. ಜೀವನ ಅಮೂಲ್ಯವಾಗಿದೆ.‌ ಅದನ್ನು ಯಾಂತ್ರಿಕವಾಗಿ ಕಳೆಯಬಾರದು. ಆದರ್ಶಯುತ ಜೀವನ ನಮ್ಮದಾಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕ್ಯಾಪ್ಟನ್ ನವೀನ್ ನಾಗಪ್ಪ ಮಾತನಾಡಿ, ‘ಕಾರ್ಗಿಲ್‌ ಯುದ್ಧ ನನಗೆ ದೇಶ ಸೇವೆಯೊಂದಿಗೆ ಅನೇಕ ಜೀವನ ಸಂದೇಶ ನೀಡಿತು. ಯುದ್ಧದಲ್ಲಿ ಭೀಕರವಾಗಿ ಗಾಯಗೊಂಡು ಆಸ್ಪತ್ರೆ ಸೇರಿ, ಜೀವನವೇ ಬೇಡ ಎನ್ನುವಾಗ, ಮೃತ ಯೋಧನ ತಾಯಿಯೊಬ್ಬರ ಅಭಿಮಾನದ ಮಾತುಗಳು ನನ್ನನ್ನು ಎಚ್ಚರಿಸಿದವು. ಆಕೆ, ದೇಶಕ್ಕಾಗಿ ಮಗನ ಸಾವಾದುದು ತನಗೆ ಸಿಕ್ಕ ದೊಡ್ಡ ಉಡುಗೊರೆ’ ಎಂದಳು. ಇದು, ಈ ನೆಲದ ತಾಯಂದಿರ ತ್ಯಾಗ, ದೇಶ ಭಕ್ತಿಯನ್ನು ತೋರುತ್ತದೆ’ ಎಂದರು.

ಸಂಸ್ಥೆ ಮುಖ್ಯಸ್ಥ ಸ್ವಾಮಿ ಮಹಾಮೇಧಾನಂದಜಿ, ಚಿಂತಕ ನಿತ್ಯಾನಂದ ವಿವೇಕವಂಶಿ, ಟ್ರಸ್ಟ್‌ ಅಧ್ಯಕ್ಷ ಪ್ರಭಂಜನ ಉಪಸ್ಥಿತರಿದ್ದರು.

60 ವಿದ್ಯಾರ್ಥಿನಿಯರು ಭಾಗಿ ಏಳು ದಿನಗಳ ಶಿಬಿರ ಮೌಲ್ಯಗಳ ಪರಿಚಯಕ್ಕೆ ಒತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.