ADVERTISEMENT

‘ಸೋಲಾರ್‌ ಪಾರ್ಕ್‌ ನಿರ್ಮಾಣಕ್ಕೆ ಚಿಂತನೆ’

ನವೀಕರಿಸಬಹುದಾದ ಇಂಧನ ಮೂಲಗಳು ಕುರಿತು ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 29 ಮೇ 2024, 15:41 IST
Last Updated 29 ಮೇ 2024, 15:41 IST
ಸಿಐಐ ಮೈಸೂರು ಘಟಕವು ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಸೆಸ್ಕ್‌ ಎಂ.ಡಿ. ಜಿ. ಶೀಲಾ ಮಾತನಾಡಿದರು. ಜಿ. ಸಂತೋಷ್, ಈಶ್ವರ ರಾವ್‌, ಅಖಿಲೂರ್ ರೆಹಮಾನ್‌, ಸ್ಯಾಮ್ ಚೆರಿಯನ್‌, ಸಿ.ಪಿ. ಗಣಪತಿ ಪಾಲ್ಗೊಂಡರು
ಸಿಐಐ ಮೈಸೂರು ಘಟಕವು ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಸೆಸ್ಕ್‌ ಎಂ.ಡಿ. ಜಿ. ಶೀಲಾ ಮಾತನಾಡಿದರು. ಜಿ. ಸಂತೋಷ್, ಈಶ್ವರ ರಾವ್‌, ಅಖಿಲೂರ್ ರೆಹಮಾನ್‌, ಸ್ಯಾಮ್ ಚೆರಿಯನ್‌, ಸಿ.ಪಿ. ಗಣಪತಿ ಪಾಲ್ಗೊಂಡರು   

ಮೈಸೂರು: ‘100 ಎಕರೆಗೂ ಅಧಿಕ ಪ್ರದೇಶದಲ್ಲಿ ಸೋಲಾರ್ ಪಾರ್ಕ್‌ ನಿರ್ಮಾಣಕ್ಕೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ( ಸೆಸ್ಕ್) ಚಿಂತನೆ ನಡೆಸಿದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ ಹೇಳಿದರು.

ಸಿಐಐ ಮೈಸೂರು ಘಟಕವು ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಆಯೋಜಿಸಿದ್ದ ‘ನವೀಕರಿಸಬಹುದಾದ ಇಂಧನ ಮೂಲಗಳ ಉತ್ಪಾದಕತೆಯ ಹೆಚ್ಚಳ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಸರ್ಕಾರಿ ಜಮೀನಿನಲ್ಲಿ ಸೋಲಾರ್ ಪಾರ್ಕ್‌ ನಿರ್ಮಾಣಕ್ಕೆ ಯೋಜಿಸಿದ್ದು, 2 ಸಾವಿರ ಎಕರೆಗೂ ಅಧಿಕ ಜಮೀನು ಗುರುತಿಸಲಾಗಿದೆ. ಇದರಲ್ಲಿ ಒಂದು ಭಾಗದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

ADVERTISEMENT

ಕೆಪಿಟಿಸಿಎಲ್ ರಾಜ್ಯದಾದ್ಯಂತ ಎಲೆಕ್ಟ್ರಿಕ್‌ ವಾಹನಗಳ ಚಾರ್ಜಿಂಗ್‌ ಕೇಂದ್ರಗಳನ್ನು ತೆರೆಯಲು ಯೋಜಿಸಿದೆ. ಇದು ಪರೋಕ್ಷವಾಗಿ ಇ.ವಿ. ವಾಹನಗಳ ಬಳಕೆಯನ್ನು ಉತ್ತೇಜಿಸಲಿದೆ ಎಂದರು.

ಕೈಗಾರಿಕೆಗಳಿಗೆ ವಿದ್ಯುಚ್ಛಕ್ತಿ ಬಳಕೆಯಲ್ಲಿ ಇರುವ ರಿಯಾಯಿತಿಗಳ ಮಾಹಿತಿ ನೀಡಿದ ಅವರು, ಹಸಿರು ಇಂಧನ ಉತ್ಪಾದನೆಗೆ ಸೆಸ್ಕ್ ಆದ್ಯತೆ ನೀಡುತ್ತಿದೆ. ಕಟ್ಟಡಗಳ ತಾರಸಿಗಳಲ್ಲಿ ಸೋಲಾರ್ ಪ್ಯಾನಲ್‌ ಅಳವಡಿಕೆಗೆ 3 ಕೆ.ವಿ. ವರೆಗೆ ₹78 ಸಾವಿರ ಸಬ್ಸಿಡಿ ಸಿಗಲಿದೆ. ‘ಕುಸುಮ್‌ ಬಿ’ ಯೋಜನೆಯಲ್ಲಿ ಕೃಷಿ ಜಮೀನಿನಲ್ಲಿ ಸೌರಶಕ್ತಿ ಅಳವಡಿಕೆಗೆ ಶೇ 80ರವರೆಗೆ ಸಬ್ಸಿಡಿ ಸಿಗಲಿದ್ದು, ಇದರಿಂದ ರೈತರು ಹಗಲು ಹೊತ್ತಿನಲ್ಲೂ ವಿದ್ಯುತ್‌ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.

ಸಿಐಐ ಮೈಸೂರು ಘಟಕದ ಅಧ್ಯಕ್ಷ ವಿ. ಈಶ್ವರ ರಾವ್‌ ‘ಇಂಧನ ಉತ್ಪಾದನಾ ವೆಚ್ಚದತ್ತ ಗಮನ ಹರಿಸಿವೆ. ಇದರ ವೆಚ್ಚ ಕಡಿಮೆ ಆದಷ್ಟು ಉತ್ತಮ. ಪರಿಸರ ಸ್ನೇಹಿ ಇಂಧನದ ಕಾಳಜಿಯನ್ನು ಪ್ರತಿ ಕೈಗಾರಿಕೆಗಳೂ ಬೆಳಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಸಿಐಐ ಮೈಸೂರು ಘಟಕದ ಉಪಾಧ್ಯಕ್ಷ ಜಿ. ಸಂತೋಷ್‌ ‘ಭಾರತವು ಜಾಗತಿಕವಾಗಿ ಇಂಧನ ಬಳಕೆಯಲ್ಲಿ ಮೂರನೇ ಸ್ಥಾನದಲ್ಲಿ ಇದೆ. ನವೀಕರಿಸಬಹುದಾದ ಇಂಧನಗಳ ಬಳಕೆಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇದ್ದೇವೆ. ಹೈಡ್ರೋಜನ್ ಉತ್ಪಾದನೆಯಲ್ಲಿ ದೇಶ ಮುಂದೆ ಇದೆ. ಸರ್ಕಾರದ ಸುಧಾರಣಾ ಕಾರ್ಯಕ್ರಮಗಳಲ್ಲಿ ಕೈಗಾರಿಕೆ ಹಾಗೂ ಸಾರ್ವಜನಿಕ ಸಹಭಾಗಿತ್ವ ಅತ್ಯಗತ್ಯ’ ಎಂದು ನುಡಿದರು.

ಸಿಐಐ ಕರ್ನಾಟಕ ಘಟಕದ ಸಂಚಾಲಕ ಅಖಿಲೂರ್ ರೆಹಮಾನ್‌ ‘ಭಾರತವು 500 ಗಿಗಾವ್ಯಾಟ್ ನಷ್ಟು ಪರಿಸರ ಸ್ನೇಹಿ ಇಂಧನ ಉತ್ಪಾದನೆಯ ಗುರಿ ಹೊಂದಿದ್ದು, ಈ ಪೈಕಿ ದೇಶದಲ್ಲಿ ಈಗ 180-190 ಗಿಗಾ ವ್ಯಾಟ್‌ನಷ್ಟು ಉತ್ಪಾದನೆ ಮಾತ್ರ ಸಾಧ್ಯ ಆಗಿದೆ. ಈ ಮಾದರಿಯ ಇಂಧನ ಉತ್ಪಾದನೆ ವೆಚ್ಚ ಜಾಸ್ತಿ ಇರಬಹುದು. ಆದರೆ ಅದರಿಂದ ಪರಿಸರಕ್ಕೆ ಆಗುವ ಪ್ರಯೋಜನವನ್ನು ನಾವು ಮರೆಯುವಂತೆ ಇಲ್ಲ. ಕರ್ನಾಟಕದಲ್ಲಿ ಒಟ್ಟು ವಿದ್ಯುತ್ ಉತ್ಪಾದನೆಯ ಶೇ 63ರಷ್ಟು ನವೀಕರಿಸಬಹುದಾದ ಇಂಧನ ಮೂಲಗಳಿಂದ ಬರುತ್ತಿರುವುದು ಉತ್ತಮ‌‌ ಬೆಳವಣಿಗೆ’ ಎಂದರು.

ಸಿಐಐ ಹಿಂದಿನ ಅಧ್ಯಕ್ಷ ಸ್ಯಾಮ್ ಚೆರಿಯನ್ ಕಳೆದ ಮೂರ್ನಾಲ್ಕು ವರ್ಷದಲ್ಲಿ ಸಿಐಐ ಮೈಸೂರು ಘಟಕ ಪರಿಸರ ಸಂರಕ್ಷಣೆಗೆ ಕೈಗೊಂಡ ಕ್ರಮಗಳ ಕುರಿತು ವಿವರಿಸಿದರು. ಸಿಐಐ ಮೈಸೂರು ಸಂಚಾಲಕ ಸಿ.ಪಿ. ಗಣಪತಿ ಜೊತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.