ADVERTISEMENT

ಮೈಸೂರು | ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಆ.30 ಗಡುವು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2023, 7:45 IST
Last Updated 20 ಆಗಸ್ಟ್ 2023, 7:45 IST
   

ಮೈಸೂರು: ‘ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಕ್ಕರೆ ಸಚಿವರ ಅಧ್ಯಕ್ಷತೆಯಲ್ಲಿ ಆ.30ರಂದು ಕರೆದಿರುವ ಸಭೆಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ, ರಾಜ್ಯಾದಾದ್ಯಂತ ರಸ್ತೆಗಳಿದು ಹೋರಾಟ ನಡೆಸಬೇಕಾಗುತ್ತದೆ’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ತಿಳಿಸಿದರು.

‘ಸಕ್ಕರೆ ಹಾಗೂ ಕಾನೂನು ಸಚಿವರು ಮತ್ತು ರೈತ ಮುಖಂಡರನ್ನು ಸಭೆಗೆ ಆಹ್ವಾನಿಸಿ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ನಮಗೆ ನೀಡಿದ್ದರು. ಅದರಂತೆ ಸಭೆ ಕರೆದಿರುವುದಾಗಿ ಕಬ್ಬು ಅಭಿವೃದ್ಧಿ ಆಯುಕ್ತರು ಪತ್ರದಲ್ಲಿ ತಿಳಿಸಿದ್ದಾರೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಕಬ್ಬು ಬೆಳೆಗಾರರಿಗೆ ಟನ್‌ ಕಬ್ಬಿಗೆ ₹ 150 ಬಾಕಿ ನೀಡಬೇಕು ಮತ್ತು ಪ್ರಸಕ್ತ ಸಾಲಿನ ಕಬ್ಬಿನ ದರವನ್ನು ಏರಿಕೆ ಮಾಡಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಇದಕ್ಕಾಗಿ ಇದೇ 14ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದೆವು. ಆಗ ನಡೆಸಿದ್ದ ಸಭೆಯಲ್ಲಿನ ಭರವಸೆ ಈಡೇರಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ಕೊಟ್ಟರು.

ADVERTISEMENT

ಮುಖಂಡರಾದ ಹತ್ತಳ್ಳಿ ದೇವರಾಜ್, ಪಿ. ಸೋಮಶೇಖರ್, ಬರಡನಫುರ ನಾಗರಾಜ್, ಕೆರೆಹುಂಡಿ ರಾಜಣ್ಣ, ಕುರುಬೂರು ಪ್ರದೀಪ್ ಹಾಗೂ ಚಿಕ್ಕಳ್ಳಿ ಮಂಜಣ್ಣ ಇದ್ದರು.

‘ಕರ ನಿರಾಕರಣೆ ಚಳವಳಿ’

‘ಕೃಷಿ ಪಂಪ್‌ಸೆಟ್‌ಗೆ ಹಗಲು ಹೊತ್ತಿನಲ್ಲಿ ಸಮರ್ಪಕ ವಿದ್ಯುತ್ ಪೂರೈಸುವವರೆಗೆ ಮತ್ತು ಬೆಳೆಗಳಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವವರೆಗೆ ಕರ ನಿರಾಕರಣೆ ಚಳವಳಿ ನಡೆಸಬೇಕು. ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆಯನ್ನು ರೈತರು ತೀವ್ರವಾಗಿ ವಿರೋಧಿಸಬೇಕು’ ಎಂದು ಶಾಂತಕುಮಾರ್‌ ಕರೆ ನೀಡಿದರು.

‘ಕೇಂದ್ರ ಸರ್ಕಾರ ವಿಶ್ವ ವ್ಯಾಪಾರ ಒಪ್ಪಂದದಿಂದ ಹಿಂದೆ ಬರದಿದ್ದರೆ ದೇಶದ ರೈತರ ಸ್ಥಿತಿ ಶೋಚನೀಯವಾಗಲಿದೆ. ಆಮದು ತೆರಿಗೆಯನ್ನು ಶೇ 40ರಷ್ಟು ಇಳಿಕೆ ಮಾಡಿದ ಪರಿಣಾಮದಿಂದ ಕೊಬ್ಬರಿ ಬೆಲೆ ಕುಸಿದಿದೆ. ರೈತರು ಬೀದಿಗೆ ಬಿದ್ದಿದ್ದಾರೆ. ಈ ಬಗ್ಗೆ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕಿಯೇತರ) ಸಂಘಟನೆ ದೇಶದಾದ್ಯಂತ ಸದ್ಯದಲ್ಲಿಯೇ ಹೋರಾಟಕ್ಕೆ ಕರೆ ನೀಡಲಿದೆ’ ಎಂದು ತಿಳಿಸಿದರು.

‘ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ, ಗೃಹಲಕ್ಷ್ಮಿ ಯೋಜನೆಯಡಿ ಹಣ ನೀಡಿ ಮೂಗಿಗೆ ತುಪ್ಪ ಸವರುವ ಬದಲು ಶಾಸನಸಭೆಯಲ್ಲಿ ಶೇ 50ರಷ್ಟು ಮೀಸಲಾತಿ ನೀಡಿದರೆ ಹೆಚ್ಚು ಪ್ರಯೋಜನವಾಗುತ್ತದೆ. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಈ ಬಗ್ಗೆ ಹೋರಾಡಿದರೆ ಮಹಿಳೆಯರೆಲ್ಲರೂ ಮೆಚ್ಚುತ್ತಾರೆ’ ಎಂದರು.

ಸಚಿವರಿಗೆ ಘೇರಾವ್

‘ಕೆಆರ್‌ಎಸ್‌ ಮತ್ತು ಕಬಿನಿ ಜಲಾಶಯಗಳಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಕೂಡಲೇ ನಿಲ್ಲಿಸದಿದ್ದರೆ, ಸಚಿವರಿಗೆ ಘೇರಾವ್ ಹಾಕಬೇಕಾಗುತ್ತದೆ’ ಎಂದು ಕುರುಬೂರು ಎಚ್ಚರಿಕೆ ನೀಡಿದರು.

‘ಅಚ್ಚುಕಟ್ಟು ಭಾಗದ ರೈತರ ಬಗ್ಗೆ ಕಣ್ಣೀರು ಸುರಿಸಿ, ತಮಿಳುನಾಡಿಗೆ ಅಮೃತಧಾರೆ ಹರಿಸುತ್ತಿರುವ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಕಾವೇರಿ ಭಾಗದ ರೈತರ ಮರಣ ಶಾಸನ ಬರೆಯಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಸರ್ವಪಕ್ಷಗಳ ಮುಖಂಡರು ಹಾಗೂ ರೈತ ನಾಯಕರ ಸಭೆ ಕರೆದು ಚರ್ಚಿಸಿ ರಾಜ್ಯದ ರೈತರ ಹಿತ ಕಾಪಾಡಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.