ಹುಣಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್.ಡಿ.ಕೋಟೆ ಕೆರೆಹಾಡಿಗೆ ಭೇಟಿ ನೀಡಿದಾಗ ಗಿರಿಜನರಿಂದ ಸ್ವೀಕರಿಸಿದ ಮನವಿಯನ್ನು ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಿ ಪರಿಹರಿಸಬೇಕು’ ಎಂದು ಆದಿವಾಸಿ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ ಹರ್ಷ ಒತ್ತಾಯಿಸಿದರು.
ನಗರದ ಡೀಡ್ ಸಂಸ್ಥೆಯಲ್ಲಿ ಆದಿವಾಸಿ ಬುಡಕಟ್ಟು ಕೃಷಿಕರ ಸಂಘ, ಆದಿವಾಸಿ ಹಕ್ಕು ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ನಡೆಸಿದ ಸಭೆಯಲ್ಲಿ ಮಾತನಾಡಿದರು.
‘ಹುಣಸೂರು ಉಪವಿಭಾಗದ 6 ತಾಲ್ಲೂಕಿನ ಗಿರಿಜನರು ಎದುರಿಸುತ್ತಿರುವ ಸಮಸ್ಯೆಗಳ ಪಟ್ಟಿ ಸೇರಿದಂತೆ ನಾಗರಹೊಳೆ ಪುನರ್ವಸತಿ ಯೋಜನೆಯಲ್ಲಿ ಅನ್ಯಾಯಕ್ಕೆ ಒಳಗಾಗಿರುವ 3,418 ಕುಟುಂಬಗಳಿಗೆ ಹೈಕೋರ್ಟ್ ಸೂಚನೆ ಅನ್ವಯ ಪುನರ್ವಸತಿ ಕಲ್ಪಿಸುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಬೇಕು. ಗಿರಿಜನರ ಸಮಸ್ಯೆಗೆ ಅಂತ್ಯ ಹಾಡಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಹಕರಿಸಬೇಕು’ ಎಂದು ಆಗ್ರಹಿಸಿದರು.
ಒಳಮೀಸಲಾತಿ ಕಲ್ಪಿಸಿ: ‘ಪರಿಶಿಷ್ಟ ಪಂಗಡಕ್ಕೆ ನೀಡಿರುವ ಮೀಸಲಾತಿ ಮೂಲ ಗಿರಿಜನರಿಗೆ ಸಿಗದೆ ಮರೀಚಿಕೆಯಾಗಿದೆ. ಆದಿವಾಸಿ ಗಿರಿಜನರ ಅಭಿವೃದ್ಧಿಗೆ ಒಳಮೀಸಲಾತಿ ನೀಡಿ ರಾಜಕೀಯ ಶಕ್ತಿ ಹಾಗೂ ಸಾಮಾಜಿಕ ಹಕ್ಕುಗಳನ್ನು ಸಮಗ್ರವಾಗಿ ಬಳಸಿ ಅಭಿವೃದ್ಧಿ ಪಥದಲ್ಲಿ ಮುಂದುವರಿಯಲು ಸರ್ಕಾರ ಅವಕಾಶ ಕಲ್ಪಿಸಬೇಕು’ ಎಂದರು.
ಸಭೆಯಲ್ಲಿ ಕೆಂಪಮ್ಮ, ರಾಜಣ್ಣ, ಶಿವಣ್ಣ, ರಾಜು, ಮಾದಯ್ಯ, ಮರಿಯಯ್ಯ, ಕಲ್ಲೂರಯ್ಯ, ದೀಪಿಕ, ಮಂಜು, ರಾಜೇಶ್ವರಿ, ಪುಟ್ಟಯ್ಯ, ಜಯಪ್ಪ ಮತ್ತು ಡೀಡ್ ಸಂಸ್ಥೆಯ ನಿರ್ದೇಶಕ ಶ್ರೀಕಾಂತ್, ಪ್ರಕಾಶ್, ಶಾರದಾ ಇದ್ದರು.
‘ಆದಿವಾಸಿ ನಿಗಮ ಸ್ಥಾಪಿಸಿ’
‘ಆದಿವಾಸಿಗಳ ಸಮಗ್ರ ಅಭಿವೃದ್ಧಿಗೆ ಬಿರ್ಸಾ ಮುಂಡಾ ಆದಿವಾಸಿ ನಿಗಮ ಸ್ಥಾಪಿಸಿ ಬಜೆಟ್‌ನಲ್ಲಿ ₹5050 ಕೋಟಿ ಮೀಸಲಿರಿಸಬೇಕು. ಪರಿಸರವಾದಿ ಯಲ್ಲಪ್ಪ ರೆಡ್ಡಿ ವರದಿ ಅನ್ವಯದಂತೆ ಆದಿವಾಸಿ ವಿಶ್ವವಿದ್ಯಾಲಯವನ್ನು ಹುಣಸೂರಿನ ಕಲ್ಲಬೆಟ್ಟ ಅರಣ್ಯ ಪ್ರದೇಶದಲ್ಲಿ ಸ್ಥಾಪಿಸಿ ಆದಿವಾಸಿಗಳ ಪಾರಂಪರಿಕ ಸಂಸ್ಕೃತಿ ಮತ್ತು ಆಚಾರ ವಿಚಾರವನ್ನು ಅಧ್ಯಯನ ನಡೆಸಿ ಸಂರಕ್ಷಿಸುವ ಕೆಲಸ ಮಾಡಬೇಕು’ ಎಂದು ಹರ್ಷ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.