ADVERTISEMENT

ಸರಕು ಸಾಗಣೆ | ₹542.39 ಕೋಟಿ ಆದಾಯ: ಡಿಆರ್‌ಎಂ ಶಿಲ್ಪಿ ಅಗರ್‌ವಾಲ್‌

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2024, 7:42 IST
Last Updated 15 ಆಗಸ್ಟ್ 2024, 7:42 IST
   

ಮೈಸೂರು: ‘ನೈರುತ್ಯ ರೈಲ್ವೆ ಮೈಸೂರು ವಿಭಾಗವು ಪ್ರಸಕ್ತ ಆರ್ಥಿಕ ವರ್ಷದಿಂದ ಈವರೆಗೆ 6.7 ದಶಲಕ್ಷ ಟನ್ ಸರಕು ಸಾಗಿಸಿ ₹542.39 ಕೋಟಿ ಗಣನೀಯ ಆದಾಯ ಗಳಿಸಿದೆ’ ಎಂದು ಡಿಆರ್‌ಎಂ ಶಿಲ್ಪಿ ಅಗರ್‌ವಾಲ್‌ ತಿಳಿಸಿದರು.

ಇಲ್ಲಿನ ಯಾದವಗಿರಿಯ ರೈಲ್ವೆ ಕ್ರೀಡಾಂಗಣದಲ್ಲಿ ವಿಭಾಗದಿಂದ ಗುರುವಾರ ಆಯೋಜಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ವಿಭಾಗವು ‘ನೆಟ್ ಟನ್ ಕಿ.ಮೀ’.(ಎನ್‌ಟಿಕೆಎಂ)ಗಳಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 6.2ರಷ್ಟು ಸುಧಾರಣೆ ಕಂಡಿದ್ದು, 1,595.7 ದಶಲಕ್ಷ ತಲುಪಿದೆ. ‘ಗ್ರಾಸ್ ಟನ್ ಕಿಲೋ ಮೀಟರ್ಸ್’ (ಜಿಟಿಕೆಎಂ)ನಲ್ಲಿ ಶೇ 2.2 ಹೆಚ್ಚಳ ಕಂಡಿದ್ದು, 2,673 ದಶಲಕ್ಷ ತಲುಪಿದೆ. 19 ರೇಕ್‌ಗಳ ಕಬ್ಬಿಣದ ಅದಿರನ್ನು ಯಶಸ್ವಿಯಾಗಿ ರಫ್ತು ಮಾಡಿ ₹ 57.06 ಕೋಟಿ ಸಂಗ್ರಹಿಸಲಾಗಿದೆ. ಆಟೊಮೊಬೈಲ್‌ ಲೋಡಿಂಗ್‌ನಲ್ಲಿ ಗಮನಾರ್ಹ ಸುಧಾರಣೆ ಆಗಿದ್ದು, 12 ರೇಕ್‌ಗಳನ್ನು ಲೋಡ್ ಮಾಡಲಾಗಿದೆ. ಇದು ಹಿಂದಿನ ವರ್ಷಕ್ಕಿಂತ ಶೇ 183.3ರಷ್ಟು ಹೆಚ್ಚಳವಾಗಿದೆ’ಎಂದು ಮಾಹಿತಿ ನೀಡಿದರು.

ADVERTISEMENT

‘19.02 ದಶಲಕ್ಷ ಪ್ರಯಾಣಿಕರನ್ನು ಸಾಗಿಸಿದ್ದು ₹242.89 ಕೋಟಿ ಆದಾಯ ಗಳಿಸಿದೆ. ಜುಲೈವರೆಗೆ ವಿಭಾಗದ ಸಮಯಪಾಲನೆಯ ಕಾರ್ಯಕ್ಷಮತೆಯು ಶೇ 94ರಷ್ಟಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

59 ವಿಶೇಷ ರೈಲು:

‘ರೈಲು ಬಳಕೆದಾರರ ಬೇಡಿಕೆಗೆ ಅನುಗುಣವಾಗಿ ಮತ್ತು ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಸರಿದೂಗಿಸಲು 52 ತಾತ್ಕಾಲಿಕ ಮತ್ತು 23 ಶಾಶ್ವತ ಕೋಚ್‌ಗಳನ್ನು ಸೇರಿಸಲಾಗಿದೆ ಹಾಗೂ 7 ಹೆಚ್ಚುವರಿ ಬೋಗಿಗಳನ್ನು ಪ್ಯಾಸೆಂಜರ್ ಮತ್ತು ಮೇಲ್/ಎಕ್ಸ್‌ಪ್ರೆಸ್ ರೈಲುಗಳಿಗೆ ಜೋಡಿಸಲಾಗಿದೆ. ವಿಭಾಗದಲ್ಲಿ ಒಟ್ಟು 59 ವಿಶೇಷ ರೈಲುಗಳನ್ನು ಓಡಿಸಲಾಗಿದೆ’ ಎಂದು ತಿಳಿಸಿದರು.

‘ಅಮೃತ್ ಭಾರತ್ ಸ್ಟೇಷನ್ಸ್ ಯೋಜನೆ’ಯಡಿ 15 ನಿಲ್ದಾಣಗಳ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿ, ₹ 385 ಕೋಟಿ ಮಂಜೂರು ಮಾಡಲಾಗಿದೆ. ವಿಭಾಗದ 135.90 ಕಿ.ಮೀ.ಗಳಲ್ಲಿ ರೈಲ್ವೆ ವೇಗವನ್ನು 110 ಕಿ.ಮೀ.ಗೆ ಏರಿಸಲಾಗಿದೆ ಮತ್ತು 16 ಕಿ.ಮೀ.ಗಳ ಲೂಪ್ ಲೈನ್‌ನಲ್ಲಿ ವೇಗವನ್ನು 30 ಕಿ.ಮೀ.ಗೆ ಸುಧಾರಿಸಲಾಗಿದೆ. ಹೆಚ್ಚುವರಿಯಾಗಿ ಹಾಸನ-ಮಂಗಳೂರು ವಿಭಾಗದ ಕಬಕಪುತ್ತೂರು ಬಳಿಯ ಸೇತುವೆ ಸಂ. 520ರ ಬದಲಿಗೆ ರೈಲ್ವೆ ಮೇಲ್ಸೇತುವೆ ನಿರ್ಮಿಸಲಾಗಿದೆ’ ಎಂದು ಹೇಳಿದರು.

‘ವಿಭಾಗದಾದ್ಯಂತ ವಿವಿಧ ನಿಲ್ದಾಣಗಳಲ್ಲಿ ಸಂಚಾರ ಸೌಲಭ್ಯಗಳನ್ನು ಹೆಚ್ಚಿಸಲು ಮತ್ತು ಸುಧಾರಿಸಲು ₹ 110 ಕೋಟಿ ವೆಚ್ಚದಲ್ಲಿ 24 ಪ್ರಮುಖ ಯೋಜನೆಗಳನ್ನು ಮಂಜೂರು ಮಾಡಲಾಗಿದೆ. ಮೈಸೂರು, ಅಶೋಕಪುರಂ, ಹಾಸನ ಮತ್ತು ನಾಗನಹಳ್ಳಿಯಲ್ಲಿ ಟರ್ಮಿನಲ್ ಯಾರ್ಡ್‌ಗಳ ಅಭಿವೃದ್ಧಿ, ಬೆಳಗೊಳ ಮತ್ತು ಕೃಷ್ಣರಾಜನಗರ ನಿಲ್ದಾಣಗಳಲ್ಲಿ ರನ್ನಿಂಗ್ ಲೈನ್‌ಗಳ ಸೇರ್ಪಡೆ, 46 ಲೆವೆಲ್ ಕ್ರಾಸಿಂಗ್ ಗೇಟ್‌ಗಳು ಮತ್ತು 38 ನಿಲ್ದಾಣಗಳಲ್ಲಿ ನೀರಿನ ಸೌಲಭ್ಯಗಳೊಂದಿಗೆ ಶೌಚಾಲಯಗಳನ್ನು ಒದಗಿಸಲಾಗಿದೆ. ಶಿವಮೊಗ್ಗ ಸಮೀಪದ ಕೋಟೆಗಂಗೂರು ಮತ್ತು ಹೊಳೆನರಸೀಪುರ ಸಮೀಪದ ಅಣ್ಣೇಚಾಕನಹಳ್ಳಿಯಲ್ಲಿ ಹೊಸ ಕ್ರಾಸಿಂಗ್ ನಿಲ್ದಾಣಗಳ ನಿರ್ಮಾಣ, ವಂದೇ ಭಾರತ್ ರೈಲಿನ ಮಾರ್ಗಗಳಲ್ಲಿ 34.05 ಕಿ.ಮೀ. ಗಳಿಗೆ ‘ಡಬ್ಲ್ಯೂ-ಬೀಮ್’ ಲೋಹದ ಅಡೆತಡೆಗಳೊಂದಿಗಿನ ಸುರಕ್ಷತಾ ಬೇಲಿ ಒದಗಿಸಲಾಗಿದೆ.

ವಿವಿಧ ಘಟ್ಟ ಪ್ರದೇಶಗಳಲ್ಲಿ ಸಂಭವಿಸಿದ ಭೂಕುಸಿತಗಳನ್ನು ನಿಭಾಯಿಸುವಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪ್ರಯತ್ನಗಳನ್ನು ಶ್ಲಾಘಿಸಿದ ಅವರು ಕಾರ್ಯಾಚರಣೆಗಳನ್ನು ನೆನೆದರು. ‘ಸುರಕ್ಷತೆ ಮತ್ತು ವಿಪತ್ತು ನಿರ್ವಹಣೆಗಳನ್ನು ಪ್ರಮುಖ ಆದ್ಯತೆಗಳನ್ನಾಗಿ ಪರಿಗಣಿಸಲಾಗಿದೆ’ ಎಂದರು.

ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ವಿನಾಯಕ್ ನಾಯ್ಕ್ ಮತ್ತು ಇ.ವಿಜಯಾ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.