ADVERTISEMENT

ಮೈಸೂರು: ಆವಿಷ್ಕಾರ–ವಿಶೇಷ ಮಕ್ಕಳ ತರಬೇತಿ ಶಾಲೆ ಉದ್ಘಾಟನೆ ನಾಳೆ

​ಪ್ರಜಾವಾಣಿ ವಾರ್ತೆ
Published 31 ಮೇ 2024, 15:47 IST
Last Updated 31 ಮೇ 2024, 15:47 IST

ಮೈಸೂರು: ಕರುಣಾಮಯಿ ಫೌಂಡೇಶನ್‌ ಸಂಸ್ಥೆಯಿಂದ ವರ್ತುಲ ರಸ್ತೆಯ ದ್ವಾರಕ ನಗರದಲ್ಲಿರುವ ರೋಟರಿ ಮಿಡ್‌ಟೌನ್‌ನ ಮಾನಸ ಕುಟೀರ ಶಾಲೆ ಆವರಣದಲ್ಲಿ ಆರಂಭಿಸಿರುವ ‘ಆವಿಷ್ಕಾರ– ಹೊಸ ಅಧ್ಯಾಯ’ ಕೇಂದ್ರದ ಉದ್ಘಾಟನಾ ಸಮಾರಂಭ ಜೂ.2ರಂದು ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ.

‘ವಿಶೇಷ ಮಕ್ಕಳ ತರಬೇತಿ ನೀಡುವ ಉಪಕ್ರಮ ಇದಾಗಿದೆ. ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಉದ್ಘಾಟನೆ ನೆರವೇರಿಸುವರು. ಒಮನ್‌ನ ಟೊವೆಲ್‌ ಎಂಜಿನಿಯರಿಂಗ್‌ ಸಮೂಹದ ಸಿಇಒ ಹಾಗೂ ಎಂಡಿ ಬಾಲಾಜಿ ಶ್ರೀನಿವಾಸನ್‌, ಎಕ್ಸೆಲ್‌ ಸಾಫ್ಟ್‌ ಟೆಕ್ನಾಲಜೀಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಡಿ.ಸುಧನ್ವ ಹಾಗೂ ರೋಟರಿ ಮಿಡ್‌ಟೌನ್ ಮಾನಸ ಕುಟೀರದ ಅಧ್ಯಕ್ಷ ಎಸ್.ರಾಘವೇಂದ್ರ ಪಾಲ್ಗೊಳ್ಳುವರು’ ಎಂದು ಕರುಣಾಮಯಿ ಫೌಂಡೇಶನ್‌ ಅಧ್ಯಕ್ಷ ಜಿ.ಸಿ.ಚಿರಣ್‌ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

‘ಸಮಾಜ ಸೇವೆಯಲ್ಲಿ ತೊಡಗಿರುವ ಸತ್ಯವತಿ ಚಾರ್‌ ಸ್ಮಾರಕ ಟ್ರಸ್ಟ್‌ನ ಎ.ವೈದೇಹಿ ಹಾಗೂ ಎ.ಪುಷ್ಪಾ ಅಯ್ಯಂಗಾರ್‌ ಅವರನ್ನು ಸನ್ಮಾನಿಸಲಾಗುವುದು. ಒಂದು ಎಕರೆ ಜಾಗದಲ್ಲಿ ಕೇಂದ್ರ ಕಾರ್ಯನಿರ್ವಹಿಸಲಿದೆ. ಒಟ್ಟು 12 ತರಬೇತಿ ಕೊಠಡಿಗಳಿದ್ದು, ಅವುಗಳನ್ನೂ ಅಂದು ಉದ್ಘಾಟಿಸಲಾಗುವುದು’ ಎಂದರು.

ADVERTISEMENT

‘2010ರಲ್ಲಿ ಆರಂಭವಾದ ಫೌಂಡೇಶನ್‌ನಿಂದ ಸದ್ಯ 75 ವಿಶೇಷ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. 12 ಮಂದಿ ಶಿಕ್ಷಕ–ಶಿಕ್ಷಕಿಯರಿದ್ದಾರೆ. ನಾಲ್ವರು ಆಯಾ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಕಾರ್ಯದರ್ಶಿ ಕೆ.ವಿ.ಸೌಮ್ಯಾ ತಿಳಿಸಿದರು.

ಫೌಂಡೇಶನ್‌ನ ಎ.ಕೌಶಿಕ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.