ಮೈಸೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗ್ರಾಮೀಣ ಭಾಗವನ್ನು 5 ವರ್ಷ ಪುನಶ್ಚೇತನಗೊಳಿಸಲು ವಿಶೇಷ ಪ್ಯಾಕೇಜ್ ಜಾರಿಗೆ ತರಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.
ಶಾಸಕರಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯ ಅವರು ಗ್ರಾಮೀಣ ಭಾಗವನ್ನು ಪುನಶ್ಚೇತನಗೊಳಿಸಲು ವಿಶೇಷ ಪ್ಯಾಕೇಜ್ ನೀಡಬೇಕೆಂದು ವರದಿ ನೀಡಿದ್ದರು. ಇದುವರೆಗೆ ಅನುಷ್ಠಾನಗೊಂಡಿಲ್ಲ. ಇದನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅನುಷ್ಠಾನಗೊಳಿಸಬೇಕು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಪ್ಯಾಕೇಜ್‌ನಲ್ಲಿ ಏನಿದೆ?:
ರಾಜ್ಯದಲ್ಲಿರುವ 177 ತಾಲ್ಲೂಕುಗಳನ್ನು ಅವಲೋಕಿಸಿ ವಿವಿಧ ಬೇಡಿಕೆಗಳನ್ನು ಪಟ್ಟಿ ಮಾಡಿದ್ದು ಕೃಷಿ ಸಂಕಷ್ಟವನ್ನು ಬಗೆಹರಿಸಬೇಕು, ಗ್ರಾಮೀಣ ಪ್ರದೇಶಕ್ಕೆ ಮೂಲ ಸೌಕರ್ಯಗಳನ್ನು ನೀಡಬೇಕು, ಗ್ರಾಮೀಣ ಪ್ರದೇಶಗಳು ಸ್ವಾವಲಂಬಿಯಾಗಬೇಕು, ಗ್ರಾಮೀಣ ಮಾರುಕಟ್ಟೆಗಳು ಅಭಿವೃದ್ದಿಯಾಗಬೇಕು, ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಿ ಸ್ವಾವಲಂಬಿ ಹಾಗೂ ಕೃಷಿ ಪೂರಕ ಉದ್ಯೋಗ ಸೃಷ್ಟಿಸಿಕೊಳ್ಳುವಂತೆ ಮಾಡಬೇಕು, ಶಿಕ್ಷಣ ತಾರತಮ್ಯ ಹೋಗಲಾಡಿಸಬೇಕು ಎಂಬುದು ವಿಶೇಷ ಪ್ಯಾಕೇಜ್‌ನ ಪ್ರಮುಖ ಅಂಶಗಳು ಎಂದು ಮಾಹಿತಿ ನೀಡಿದರು.
ಈಗಾಗಲೇ ರೈತರು ಕೃಷಿ ವಿಜ್ಞಾನಿಗಳು ಹಾಗೂ ಎಂಎನ್‌ಸಿ ಕಂಪನಿಗಳ ಬಿತ್ತನೆ ಬೀಜಗಳನ್ನು ನಂಬಿ ಮೋಸ ಹೋಗಿದ್ದಾರೆ. ಮತ್ತೆ ರೈತರು ಮೋಸ ಹೋಗಲು ಬಿಡುವುದಿಲ್ಲ, ಈ ಬಗ್ಗೆ ಅರಿವು ಮೂಡಿಸುತ್ತೇವೆ. ಒಂದು ವೇಳೆ ರೈತರನ್ನು ಕಡೆಗಣಿಸಿ ಸರ್ಕಾರ ಇಸ್ರೇಲ್ ಕೃಷಿ ಪದ್ದತಿ ಜಾರಿಗೆ ತಂದರೆ ತೀವ್ರ ರೀತಿಯ ಹೋರಾಟ ಕೈಗೊಳ್ಳುತ್ತೇವೆ ಎಂದು ಆಗ್ರಹಿಸಿದರು.
ಕೆ.ಎಸ್.ಪುಟ್ಟಣ್ಭಯ್ಯ ಅವರು ಮೇಲುಕೋಟೆಯ ಶಾಸಕರಾಗಿದ್ದ ವೇಳೆ ಜಾರಿಮಾಡಿದ 1,700 ಕೋಟಿ ಕಾಮಗಾರಿಗಳಿಗೆ ಇಂದಿನ ಶಾಸಕ ಪುಟ್ಟರಾಜು ಅವರು ಅಡ್ಡಿಪಡಿಸುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಸಚಿವ ಜಿ.ಟಿ.ದೇವೇಗೌಡ ಅವರಿಗೆ ಮನವಿ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.
ಸಂಘದ ಪದಾಧಿಕಾರಿಗಳಾದ ಅಶ್ವಥ್ ನಾರಾಯಣ ರಾಜ್ ಅರಸು, ಎಸ್.ಜೆ.ಲೋಕೇಶ್ ರಾಜ್ ಅರಸು, ಕಾರ್ಯದರ್ಶಿಗಳಾದ ನಾಗನಳ್ಳಿ ವಿಜೇಂದ್ರ, ರೈತ ಮುಖಂಡ ಚಂದ್ರೇಗೌಡ ಹಾಜರಿದ್ದರು.
ಕಾವೇರಿ ಜಲನಿರ್ವಹಣಾ ಪ್ರಾಧಿಕಾರವು ದೋಷಪೂರಿತವಾಗಿದೆ. ಕೇಂದ್ರ ಸರ್ಕಾರ ನ್ಯಾಯಾಂಗ ವಿಧಿಸಿದ ಎಷ್ಟೋ ನಿಯಮಗಳನ್ನು ಬದಿಗೊತ್ತಿದ್ದು, ಈ ನಿಯಮವನ್ನು ಮಾತ್ರ ಅವಸರದಲ್ಲಿ ಜಾರಿ ಮಾಡಿದೆ. ಈ ಬಗ್ಗೆ ಚರ್ಚಿಸಲು ಕಾಲಾವಕಾಶ ನೀಡಬೇಕು.
- ಬಡಗಲಪುರ ನಾಗೇಂದ್ರ,ಪ್ರಧಾನ ಕಾರ್ಯದರ್ಶಿ ರಾಜ್ಯ ರೈತ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.